‘ಸಾಹುಕಾರ’ನ ಕೋಟೆಗಿಂದು ‘ಕನಕಪುರ ಬಂಡೆ’ ಎಂಟ್ರಿ

Public TV
1 Min Read

ಬೆಳಗಾವಿ: ಉಪಚುನಾವಣೆಯ ಕಣದಲ್ಲಿ ಗೋಕಾಕ್ ಕ್ಷೇತ್ರ ಭಾರೀ ಕುತೂಹಲ ಕೆರಳಿಸಿದೆ. ಒಂದೇ ಮನೆತನದ ಇಬ್ಬರು ಸಹೋದರರ ಎರಡು ಪಕ್ಷಗಳ ಸ್ಪರ್ಧೆಯಿಂದ ಈ ಕ್ಷೇತ್ರ ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದೆ. ಈ ಅಖಾಡಕ್ಕೆ ಇಂದು ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಎಂಟ್ರಿ ಕೊಡುತ್ತಿದ್ದಾರೆ. ಒಂದು ಕಾಲದಲ್ಲಿ ಗೆಳೆಯರಾಗಿದ್ದ ರಮೇಶ್ ಜಾರಕಿಹೊಳಿ ಹಾಗೂ ಡಿಕೆಶಿ ಮಾತಿನ ವರಸೆ ಕೇಳಲು ಕ್ಷೇತ್ರದ ಜನತೆ ಕಾತುರರಾಗಿದ್ದಾರೆ.

ಕುಂದಾನಗರಿ ಬೆಳಗಾವಿ ಗಡಿ ವಿಷಯಕ್ಕೆ ಸುದ್ದಿಯಲ್ಲಿದ್ದರೆ, ಗೋಕಾಕ್ ಕ್ಷೇತ್ರ ರಮೇಶ್ ಜಾರಕಿಹೂಳಿ ರಾಜೀನಾಮೆಯಿಂದ ಉಪಚುನಾವಣೆ ಕಣದ ಭಾರೀ ಹೈವೋಲ್ಟೇಜ್ ಕದನ ಕಣವಾಗಿದೆ. ಒಂದು ಕಾಲದಲ್ಲಿ ಆತ್ಮೀಯ ಗೆಳೆಯರಾಗಿದ್ದ ಡಿ.ಕೆ ಶಿವಕುಮಾರ್ ಹಾಗೂ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಈಗ ವೈರಿಗಳಾಗಿದ್ದಾರೆ. ಕೈ ಪಕ್ಷದ ಅಭ್ಯರ್ಥಿ ಲಖನ್ ಪರ ಪ್ರಚಾರಕ್ಕೆ ಇಂದು ಡಿಕೆಶಿ ಆಗಮಿಸ್ತಿದ್ದು, ತಮ್ಮ ಬತ್ತಳಿಕೆಯಲ್ಲಿರುವ ಯಾವ ಬಾಣಗಳನ್ನು ರಮೇಶ್ ವಿರುದ್ಧ ಬಿಡುತ್ತಾರೋ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯಗೆ ನನ್ನ ವಿರುದ್ಧ ವೈಯಕ್ತಿಕ ಟೀಕೆ ನಿಲ್ಲಿಸದಿದ್ದರೆ ಎಲ್ಲವೂ ಬಹಿರಂಗ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿರುವ ರಮೇಶ್, ಮೈಸೂರು ಭಾಗದವರ ಆಟ ಇಲ್ಲಿ ನಡೆಯುವುದಿಲ್ಲ. ಅಲ್ಲಿಯ ರಾಜಕೀಯವೇ ಬೇರೆ ಇಲ್ಲಿಯ ರಾಜಕೀಯ ಬೇರೆಯೆಂದು ಪರೋಕ್ಷವಾಗಿ ಡಿ.ಕೆ ಶಿವಕುಮಾರ್‍ಗೂ ಎಚ್ಚರಿಕೆ ನೀಡಿದರು. ಈಗ ಡಿಕೆಶಿ ಎಂಟ್ರಿಯಾಗುತ್ತಿರೋದ್ರಿಂದ ಸಾಹುಕಾರ ಮತ್ತಷ್ಟು ಅಲರ್ಟ್ ಆಗುವ ಸಾಧ್ಯತೆ ಇದೆ. ಡಿಕೆಶಿಗೆ ಸರಿಸಮನಾಗಿ ಪ್ರಚಾರಕ್ಕೆ ತಯಾರಿ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *