7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್, ಯಾಸಿರ್ ಶಾ ಶತಕ- ಪಾಕಿಸ್ತಾನಕ್ಕೆ ಫಾಲೋಆನ್, ಆರಂಭಿಕ ಆಘಾತ

Public TV
2 Min Read

ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ಲೆಗ್ ಸ್ಪಿನ್ನರ್ ಯಾಸಿರ್ ಶಾ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ವೃತ್ತಿ ಜೀವನದ ಮೊದಲ ಶತಕ ಸಿಡಿಸಿದ್ದಾರೆ.

ಪಿಂಕ್ ಬಾಲ್ ಡೇ ನೈಟ್ ಟೆಸ್ಟ್ ಪಂದ್ಯದಲ್ಲಿ ಪಾಕ್ ಕ್ರಿಕೆಟರ್ ಯಾಸಿರ್ ಶಾ ಈ ಸಾಧನೆ ಮಾಡಿದ್ದಾರೆ. 33 ವರ್ಷದ ಸ್ಪಿನ್ ಬೌಲರ್ ಯಾಸಿರ್ ಶಾ ಆಡಿದ ಹಿಂದಿನ 36 ಟೆಸ್ಟ್ ಪಂದ್ಯಗಳಲ್ಲಿ ಗರಿಷ್ಠ 42 ರನ್ ಗಳಿಸಿದ್ದರು. ಆದರೆ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯದಲ್ಲಿ 113 ರನ್(213 ಎಸೆತ, 13 ಬೌಂಡರಿ) ಹೊಡೆದು ಕೊನೆಯವರಾಗಿ ಔಟಾದರು.

31.5 ಓವರ್ ಗಳಲ್ಲಿ ಪಾಕಿಸ್ತಾನ 6 ವಿಕೆಟ್ ಕಳೆದುಕೊಂಡು 89 ರನ್ ಗಳಿಸಿದ್ದಾಗ ಕ್ರೀಸ್‍ಗೆ ಆಗಮಿಸಿದ ಯಾಸಿರ್ ಶಾ ಬಾಬರ್ ಅಜಂ ಜೊತೆಗೂಡಿ 7ನೇ ವಿಕೆಟಿಗೆ 105 ರನ್ ಜೊತೆಯಾಟವಾಡಿ ಪಾಕ್ ಚೇತರಿಕೆಗೆ ಕಾರಣರಾದರು. ಬಾಬರ್ ಅಜಂ 97 ರನ್(132 ಎಸೆತ, 11 ಬೌಂಡರಿ) ಹೊಡೆದರೆ, ಬೌಲರ್ ಮೊಹಮ್ಮದ್ ಅಬ್ಬಾಸ್ 29 ರನ್ ಹೊಡೆದರು. ಅಂತಿಮವಾಗಿ ಪಾಕಿಸ್ತಾನ 94.4 ಓವರ್ ಗಳಲ್ಲಿ 302 ರನ್‍ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು ಫಾಲೋಆನ್‍ಗೆ ತುತ್ತಾಗಿದೆ.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಡೇವಿಡ್ ವಾರ್ನರ್ ಔಟಾಗದೆ 335 ರನ್( 418 ಎಸೆತ, 39 ಬೌಂಡರಿ, 1 ಸಿಕ್ಸರ್), ಲಬುಶೇನ್ 162 ರನ್(238 ಎಸೆತ, 22 ಬೌಂಡರಿ) ಸಹಾಯದಿಂದ ಮೂರು ವಿಕೆಟ್ ನಷ್ಟಕ್ಕೆ 589 ರನ್ ಸಿಡಿಸಿ 127 ಓವರ್ ನಲ್ಲಿ ಡಿಕ್ಲೇರ್ ಘೋಷಿಸಿತು.

ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ಕ್ರಿಕೆಟ್‍ನಲ್ಲಿ ತ್ರಿಶತಕ ಸಿಡಿಸಿದ ವಾರ್ನರ್ ಆಸ್ಟ್ರೇಲಿಯಾ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಈ ಹಿಂದೆ ಆರಂಭಿಕ ಆಟಗಾರ ಮಾಥ್ಯು ಹೇಡನ್ 2003 ರಲ್ಲಿ ಜಿಂಬಾಬ್ವೆ ವಿರುದ್ಧ 380 ರನ್(437 ಎಸೆತ, 38 ಬೌಂಡರಿ, 11 ಬೌಂಡರಿ) ಹೊಡೆದಿದ್ದರು.

287 ರನ್‍ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ ಆರಂಭದಲ್ಲೇ ಕುಸಿತಗೊಂಡಿದ್ದು, 15.3 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 39 ರನ್ ಗಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *