ಲಾಂಗ್ ಡ್ರೈವ್‍ಗೆ ಕರೆದುಕೊಂಡು ಹೋಗಿ ಪತ್ನಿಯನ್ನು ಗುಂಡಿಕ್ಕಿ ಕೊಂದ

Public TV
3 Min Read

ನವದೆಹಲಿ: ಲಾಂಗ್ ಡ್ರೈವ್‍ಗೆ ಕರೆದುಕೊಂಡು ಹೋದ ಪತಿ ತನ್ನ ಪತ್ನಿಯನ್ನು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಹರಿಯಾಣದಲ್ಲಿ ನಡೆದಿದೆ.

ನ್ಯಾನ್ಸಿ ಶರ್ಮಾ (20) ಕೊಲೆಯಾದ ಪತ್ನಿ. ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ನ್ಯಾನ್ಸಿ, 21 ವರ್ಷದ ಸಾಹಿಲ್ ಚೋಪ್ರಾನನ್ನು ಮದುವೆಯಾಗಿದ್ದಳು. ನ್ಯಾನ್ಸಿ ಲೇಟ್ ನೈಟ್ ಪಾರ್ಟಿ ಮಾಡುವುದು ಸಾಹಿಲ್‍ಗೆ ಇಷ್ಟವಿರಲಿಲ್ಲ. ಈ ವಿಷಯಕ್ಕಾಗಿ ಆತ ಪ್ರತಿದಿನ ಜಗಳವಾಡುತ್ತಿದ್ದನು. ಪತ್ನಿಗೆ ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಇದೆ ಎಂದು ಸಂಶಯಪಡುತ್ತಿದ್ದನು.

ಪೊಲೀಸರ ಬಳಿ ಸಾಹಿಲ್, ವಿಚ್ಛೇದನಕ್ಕಾಗಿ ನಾನು ನನ್ನ ಪತ್ನಿ ಬಳಿ ಕೇಳಿದೆ. ಬಳಿಕ ಮದುವೆಯಾದ ಒಂದೇ ವರ್ಷಕ್ಕೆ ವಿಚ್ಛೇದನ ಸಾಧ್ಯವಿಲ್ಲ ಎಂಬುದು ನನಗೆ ತಿಳಿಯಿತು. ಹಾಗಾಗಿ ನಾನು ಆಕೆಯ ಕೊಲೆ ಮಾಡಲು ನಿರ್ಧರಿಸಿದೆ ಎಂದು ಹೇಳಿದ್ದಾನೆ.

ನ. 9ರಂದು ನನ್ನ ಹಾಗೂ ನ್ಯಾನ್ಸಿ ನಡುವೆ ದೊಡ್ಡ ಜಗಳ ನಡೆಯಿತು. ಆಗ ನಾನು ನನ್ನ ಸಹೋದರ ಸಂಬಂಧಿ ಶುಭಂ ಹಾಗೂ ಡ್ರೈವರ್ ಚಾಲಕ ಜೊತೆ ಸೇರಿ ಆಕೆಯ ಕೊಲೆ ಮಾಡಲು ನಿರ್ಧರಿಸಿದೆ. ನ. 10ರಂದು ಅವರು ಅಕ್ರಮ ಪಿಸ್ತೂಲ್ ಮತ್ತು ಕಾಟ್ರ್ರಿಜ್‍ಗಳನ್ನು ನಮ್ಮ ಮನೆಗೆ ತಂದರು. ಬಳಿಕ ನಾನು ನ್ಯಾನ್ಸಿ ಬಳಿ ಹೋಗಿ ಕ್ಷಮೆ ಕೇಳಿ ಆಕೆಯನ್ನು ಲಾಂಗ್ ಡ್ರೈವ್‍ಗೆ ಕರೆದೆ. ಆಕೆ ಲಾಂಗ್ ಡ್ರೈವರ್ ಗೆ ಬರಲು ಒಪ್ಪಿದಾಗ ನಾವು ನಾಲ್ವರು ಹರಿಯಾಣದ ಪಾನಿಪತ್ ಕಡೆ ಹೋದೆವು ಎಂದು ಸಾಹಿಲ್ ತಿಳಿಸಿದ್ದಾನೆ.

ನಾವು ಪಾನಿಪತ್‍ಗೆ ತಲುಪಿದಾಗ ನ್ಯಾನ್ಸಿ ಕಾರ್ ನಿಲ್ಲಿಸಲು ಹೇಳಿದ್ದಳು. ಆಗ ನಾನು ಸಾರ್ವಜನಿಕ ಶೌಚಾಲಯದ ಬಳಿ ಕಾರು ನಿಲ್ಲಿಸಿದೆ. ಅದು ನಿರ್ಜನ ಪ್ರದೇಶ ಆಗಿದ್ದ ಕಾರಣ ನ್ಯಾನ್ಸಿಯನ್ನು ಅಲ್ಲಿಯೇ ಕೊಲೆ ಮಾಡಲು ನಿರ್ಧರಿಸಿದೆ. ಆಕೆ ಸ್ವಲ್ಪ ಮುಂದೆ ಹೋದ ತಕ್ಷಣ ನಾನು ಹಿಂಬದಿಯಿಂದ ಗುಂಡಿಕ್ಕಿ ಕೊಂದೆ. ಅವಳು ಮೃತಪಡುವ ವೇಳೆ ನಾನು ಆಕೆಯ ಮೇಲೆ ಹಲ್ಲೆ ನಡೆಸಿದೆ. ನ್ಯಾನ್ಸಿ ಮೃತಪಟ್ಟ ನಂತರ ಆಕೆಯ ಮೃತದೇಹವನ್ನು ಪೊದೆಯೊಳಗೆ ಎಸೆದು ಮನೆಗೆ ಹಿಂದಿರುಗಿದ್ದೇವು ಎಂದು ಸಾಹಿಲ್ ಘಟನೆಯನ್ನು ವಿವರಿಸಿದ್ದಾನೆ.

ನ್ಯಾನ್ಸಿ ತಂದೆ ಸಂಜಯ್ ಶರ್ಮಾ ತಮ್ಮ ಮಗಳಿಗೆ ಹಲವು ಬಾರಿ ಕರೆ ಮಾಡಿದ್ದಾರೆ. ಆದರೆ ಕರೆ ಮಾಡಿದಾಗ ಕಟ್ ಮಾಡಲಾಗುತಿತ್ತು. ಬಳಿಕ ಸಂಜಯ್ ಸಾಹಿಲ್ ಫೋನ್‍ಗೆ ಕರೆ ಮಾಡಿ ನ್ಯಾನ್ಸಿ ಕರೆ ಸ್ವೀಕರಿಸುತ್ತಿಲ್ಲ ಎಂದು ಹೇಳಿದ್ದಾರೆ. ಬಳಿಕ ಸಂಜಯ್ ತಮ್ಮ ಮಗಳಿಗಾಗಿ ಹುಡುಕಾಟ ನಡೆಸಲು ಶುರು ಮಾಡಿದ್ದರು. ಮಗಳು ಎಲ್ಲಿಯೂ ಸಿಗದಿದ್ದಾಗ ಪೊಲೀಸ್ ಠಾಣೆಗೆ ದೂರು ನೀಡಿದರು. ಈ ಸಂದರ್ಭದಲ್ಲಿ ಸಾಹಿಲ್, ನ್ಯಾನ್ಸಿ ಬೇರೊಬ್ಬ ವ್ಯಕ್ತಿ ಜೊತೆ ಮನೆಯಿಂದ ಓಡಿ ಹೋಗಿರಬಹುದು ಎಂದು ಸುಳ್ಳು ಕತೆಯನ್ನು ಸೃಷ್ಟಿಸಿದ್ದನು.

ಪೊಲೀಸರು ಮೊದಲು ಈ ಪ್ರಕರಣವನ್ನು ಕಾಣೆಯಾದ ವ್ಯಕ್ತಿಯಂತೆ ಪರಿಗಣಿಸಿದ್ದರು. ಬಳಿಕ ಸಾಹಿಲ್ ವರದಕ್ಷಿಣೆ ಕಿರುಕುಳ ನೀಡುತ್ತಿದ್ದನು ಎಂದು ಸಂಜಯ್ ಆರೋಪಿಸಿದಾಗ ಪೊಲೀಸರು ತನಿಖೆ ಶುರು ಮಾಡಿದ್ದರು. ತನಿಖೆ ವೇಳೆ ಸಾಹಿಲ್, ನಾನು ಕಾರ್ ಡೀಲರ್ ಆಗಿದ್ದು, ನನ್ನ ಆರ್ಥಿಕವಾಗಿ ಉತ್ತಮ ಸ್ಥಾನದಲ್ಲಿದ್ದೇನೆ ಎಂದು ಹೇಳುವ ಮೂಲಕ ಸಂಜಯ್ ಮಾಡಿದ್ದ ಆರೋಪಗಳನ್ನು ತಳ್ಳಿ ಹಾಕಿದ್ದ.

ನ. 26ರಂದು ಪೊಲೀಸರು ನ್ಯಾನ್ಸಿ ಕಿಡ್ನ್ಯಾಪ್ ಆಗಿದ್ದಾಳೆ ಎಂದು ಎಫ್‍ಐಆರ್ ದಾಖಲಿಸಿಕೊಂಡಿದ್ದರು. ಬಳಿಕ ಅವರು ನ್ಯಾನ್ಸಿ ಕಾಣೆಯಾದ ದಿನ ಸಾಹಿಲ್ ಫೋನ್ ಲೋಕೇಶನ್ ಹಾಗೂ ಕಾಲ್ ಡಿಟೇಲ್ಸ್ ಪರಿಶೀಲಿಸಿದ್ದಾರೆ. ಬಳಿಕ ಆತನನ್ನು ವಿಚಾರಣೆ ನಡೆಸಿದ್ದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಬಳಿಕ ನ್ಯಾನ್ಸಿಯ ಮೃತದೇಹ ಎಸೆದಿದ್ದ ಜಾಗಕ್ಕೆ ಪೊಲೀಸರನ್ನು ಕರೆದುಕೊಂಡು ಹೋಗಿದ್ದಾನೆ. ಮೂವರು ಆರೋಪಿಗಳನ್ನು ನ್ಯಾಯಲಯಕ್ಕೆ ಹಾಜರುಪಡಿಸಲಾಯಿತು. ಕೋರ್ಟ್ ಆರೋಪಿಗಳಿಗೆ ಎರಡು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *