ಬಿಜೆಪಿ ಲೆಕ್ಕಾಚಾರ ತಪ್ಪಿ,  ಶಿವಸೇನೆ ಮೈತ್ರಿಕೂಟ ಗೆದ್ದಿದ್ದು ಹೇಗೆ? ಮೈತ್ರಿ ಅಧಿಕಾರ ಹಂಚಿಕೆ ಸೂತ್ರ ಏನು?

Public TV
4 Min Read

ಮುಂಬೈ: ಮಹಾರಾಷ್ಟ್ರದಲ್ಲಿ ಮತ್ತೆ `ಮಹಾನ್ನಾಟಕ’ ನಡೆದಿದೆ. ಬಹುಮತ ಇಲ್ಲದ ಕಾರಣ ಇವತ್ತು ಮಧ್ಯಾಹ್ನ ಸಿಎಂ ದೇವೇಂದ್ರ ಫಡ್ನವೀಸ್ ರಾಜೀನಾಮೆ ಸಲ್ಲಿಸಿದ್ರು. ಬಿಜೆಪಿ ಸರ್ಕಾರ ಪತನಗೊಂಡ ಬೆನ್ನಲ್ಲೇ ಶಿವಸೇನೆ-ಎನ್‍ಸಿಪಿ-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ಪ್ರಕ್ರಿಯೆಯನ್ನು ಬಿರುಸುಗೊಳಿಸಿವೆ.

ಶಿವಸೇನೆಯ ಉದ್ಧವ್ ಠಾಕ್ರೆ ನೂತನ ಮುಖ್ಯಮಂತ್ರಿಯಾಗಿ ನಾಳೆಯೇ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಡಿಸೆಂಬರ್ 1ರಂದು ಶಿವಾಜಿಪಾರ್ಕ್‍ನಲ್ಲಿ ಅದ್ಧೂರಿಯಾಗಿ ಪದಗ್ರಹಣ ಮಾಡಲಿದ್ದಾರೆ. ನೂತನ ಶಾಸಕರಿಗೆ ಪ್ರಮಾಣವಚನ ಬೋಧಿಸುವ ಸಲುವಾಗಿ ಸದನದ ಹಿರಿಯರೂ ಆಗಿರುವ ಬಿಜೆಪಿಯ ಕಾಳಿದಾಸ ಕೋಲಂಬ್ಕರ್ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಲಾಗಿದೆ.

ನಾಳೆ ಬೆಳಗ್ಗೆ 8 ಗಂಟೆಗೆ ವಿಶೇಷ ಅಧಿವೇಶನ ನಡೆಯಲಿದ್ದು, ಶಾಸಕರ ಪ್ರಮಾಣವಚನ ಸ್ವೀಕಾರ ನಡೆಯಲಿದೆ. ಹೊಸ ಸರ್ಕಾರ ರಚನೆಯ ಪ್ರಕ್ರಿಯೆ ಪೂರ್ಣಗೊಳಿಸುವ ಸಲುವಾಗಿ ಮುಂಬೈನ ಖಾಸಗಿ ಹೊಟೇಲ್‍ನಲ್ಲಿ ಮೂರು ಪಕ್ಷಗಳ ನಾಯಕರು ಸಭೆ ನಡೆಸಿದರು. ಈ ವೇಳೆ, ಉದ್ಧವ್ ಠಾಕ್ರೆಗೆ ಹೀರೋ ರೀತಿಯ ಸ್ವಾಗತ ಸಿಕ್ಕಿತು.

ಒಪ್ಪಂದದ ಪ್ರಕಾರ, ಕಾಂಗ್ರೆಸ್ ಹಾಗೂ ಎನ್‍ಸಿಪಿಯಿಂದ ತಲಾ ಒಬ್ಬರು ಉಪ ಮುಖ್ಯಮಂತ್ರಿಯಾಗಲಿದ್ದಾರೆ. ಇನ್ನು, ಮುಂದಿನ 5 ವರ್ಷ ಶಿವಸೇನೆಗೆ ಮುಖ್ಯಮಂತ್ರಿ ಸ್ಥಾನ ಕಾಯಂ ಆಗಿದ್ದು, ಯಾವುದೇ ಒಪ್ಪಂದವಾಗಿಲ್ಲ ಅಂತ ಶಿವಸೇನೆಯ ಸಂಜಯ್ ರಾವತ್ ಸ್ಪಷ್ಪಪಡಿಸಿದ್ದಾರೆ.

ಮೈತ್ರಿ ಅಧಿಕಾರ ಹಂಚಿಕೆ ಹೇಗೆ?
ಡಿ.1ಕ್ಕೆ ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಪ್ರಮಾಣ ವಚನ ಸ್ವೀಕರಿಸಲಿದ್ದು ಸಿಎಂ ಜೊತೆಗೆ ಇಬ್ಬರು ಡಿಸಿಎಂಗಳು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಾಳಾಸಾಹೇಬ್ ಥೋರಟ್ (ಕಾಂಗ್ರೆಸ್) ಜಯಂತ್ ಪಾಟೀಲ್ (ಎನ್‍ಸಿಪಿ) ಡಿಸಿಎಂ ಆಗಲಿದ್ದು, ಕಾಂಗ್ರೆಸ್‍ಗೆ ಸ್ಪೀಕರ್ ಸ್ಥಾನ ಸಿಗಲಿದೆ. ಶಿವಸೇನೆ, ಎನ್‍ಸಿಪಿಗೆ 14, ಕಾಂಗ್ರೆಸ್‍ಗೆ 12 ಸಚಿವ ಸ್ಥಾನ ಸಿಗಲಿದೆ.

ಫಡ್ನವೀಸ್ ರಾಜೀನಾಮೆ:
ಮೂರೂವರೆ ದಿನಗಳ ಹಿಂದಷ್ಟೇ ಬೆಳಗ್ಗೆ ಪ್ರಮಾಣ ಸ್ವೀಕರಿಸಿದ್ದ ಸಿಎಂ ಫಡ್ನವೀಸ್ ಮತ್ತು ಡಿಸಿಎಂ ಅಜಿತ್ ಪವಾರ್ ಇವತ್ತು ಮಧ್ಯಾಹ್ನ ರಾಜೀನಾಮೆ ನೀಡಿದ್ರು. ನಾಳೆ ಸಂಜೆ 5 ಗಂಟೆಯೊಳಗೆ ವಿಶ್ವಾಸಮತಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದ್ದ ಬೆನ್ನಲ್ಲೇ, ದಿಢೀರ್ ರಾಜಕೀಯ ಬೆಳವಣಿಗೆಗಳು ನಡೆದು ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿಯ ದೇವೇಂದ್ರ ಫಡ್ನವೀಸ್ ರಾಜೀನಾಮೆ ನೀಡಿದ್ರು. ವಿಶ್ವಾಸಮತಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ದಿಢೀರ್ ಸಭೆ ಚರ್ಚೆ ಕೂಡ ನಡೆಸಿದ್ದರು.

ಮಧ್ಯಾಹ್ನ 2.25ಕ್ಕೆ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ರಾಜೀನಾಮೆ ನೀಡುತ್ತಿದ್ದಂತೆ, ಮಧ್ಯಾಹ್ನ 3.30ರ ಹೊತ್ತಿಗೆ ದಿಢೀರ್ ಸುದ್ದಿಗೋಷ್ಠಿ ನಡೆಸಿದ ಫಡ್ನವೀಸ್ ಕೂಡ ರಾಜೀನಾಮೆ ಘೋಷಿಸಿದ್ರು. ಬಿಜೆಪಿಗೆ ಸರ್ಕಾರ ರಚಿಸುವಷ್ಟು ಅಗತ್ಯ ಸಂಖ್ಯಾಬಲ ಇಲ್ಲ ಅಂತಲೂ ಒಪ್ಪಿಕೊಂಡ್ರು. ಅಜಿತ್ ಪವಾರ್ ರಾಜೀನಾಮೆ ಕೊಟ್ಟಿದ್ದರಿಂದಲೇ ಬೇರೆ ದಾರಿ ಇಲ್ಲದೆ ರಾಜೀನಾಮೆ ಕೊಡುತ್ತಿರುವುದಾಗಿಯೂ ಫಡ್ನವೀಸ್ ಹೇಳಿದರು.

ಚೌಕಾಸಿ ರಾಜಕಾರಣಕ್ಕಿಳಿದ ಶಿವಸೇನೆಗೆ ತತ್ವ ಸಿದ್ಧಾಂತಗಳಿಲ್ಲ ಅಂತ ಟೀಕಿಸಿದ್ರು. ಅಲ್ಲದೆ, ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿರೋದು ದಿಗ್ಭ್ರಾಂತಿಯಾಗಿದೆ. ಇವರ ಮಹಾವಿಕಾಸ ಅಘಾದಿ ಒಂದ್ರೀತಿ ಆಟೋರಿಕ್ಷಾ ಇದ್ದಂತೆ. ಸ್ಥಿರ ಸರ್ಕಾರ ಸಾಧ್ಯವೇ ಇಲ್ಲ. ದೇವರೇ ಕಾಪಾಡ್ಬೇಕು ಅಂತ ಮೂದಲಿಸಿದ್ರು. ಈ ಮೂಲಕ ಅತಿಕಡಿಮೆ ಅವಧಿಯ ಸಿಎಂಗಳಾದ ಯಡಿಯೂರಪ್ಪ, ಉತ್ತರ ಪ್ರದೇಶದ ಜಗದಾಂಬಿಕಾ ಪಾಲ್( 1998- 1 ದಿನ), ಬಿಹಾರದ ನಿತೀಶ್ ಕುಮಾರ್ (2000-7ದಿನ) ಸಾಲಿಗೆ ಸೇರ್ಪಡೆಯಾದ್ರು.

ಬಿಜೆಪಿ ಲೆಕ್ಕಾಚಾರ ತಪ್ಪಿದ್ದು ಹೇಗೆ?
ಸರ್ಕಾರ ರಚನೆಗೆ ಅಗತ್ಯ ಸಂಖ್ಯಾಬಲ ಇಲ್ಲದಿದ್ದರೂ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ ದೇವೇಂದ್ರ ಫಡ್ನವೀಸ್ ಹಾಗೂ ಬಿಜೆಪಿಯ ಚಾಣಕ್ಯ ಅಮಿತ್‍ಶಾಗೆ ಮರಾಠ ಚಾಣಕ್ಯ ಶರದ್ ಪವಾರ್ ಭರ್ಜರಿಯಾಗೇ ಪಂಚ್ ಕೊಟ್ಟಿದ್ದಾರೆ. ಬಿಜೆಪಿ ಲೆಕ್ಕಾಚಾರ ತಪ್ಪಿದ್ದೇಗೆ ಅನ್ನೋದನ್ನು ವಿಶ್ಲೇಷಿಸೋದಾದ್ರೆ..
1. ಎನ್‍ಸಿಪಿ ನಾಯಕ ಅಜಿತ್ ಪವಾರ್‍ರನ್ನೇ ನಂಬಿದ್ದು
2. ಶಾಸಕಾಂಗ ಪಕ್ಷದ ನಾಯಕನ ಪತ್ರ ನಂಬಿ ಸರ್ಕಾರ ರಚಿಸಿದ್ದು
3. ಅಜಿತ್ ಪವಾರ್ ಬೆಂಬಲಿಗ ಶಾಸಕರ ಬಗ್ಗೆ ತಲೆಕೆಡಿಸಿಕೊಳ್ಳದಿದ್ದದ್ದು
4. ಎನ್‍ಸಿಪಿ ಶಾಸಕರ ಸಂಖ್ಯಾಬಲ ದೃಢಪಡಿಸಿಕೊಳ್ಳದಿರುವುದು
5. ಎನ್‍ಸಿಪಿ ಶಾಸಕರನ್ನು ಒಂದೆಡೆ ಸೇರಿಸಲು ವಿಳಂಬವಾಗಿದ್ದು
6. ಶರದ್ ಪವಾರ್ ದೃಢವಾಗಿ ಶಿವಸೇನೆ ಬೆನ್ನಿಗೆ ನಿಂತಿದ್ದು
7. ನಿನ್ನೆ ಸಂಜೆ ಶಿವಸೇನೆ ಮೈತ್ರಿಕೂಟ ಸಂಖ್ಯಾಬಲ ದೃಢಪಡಿಸಿದ್ದು
8. ನಾಲ್ವರು ನಾಯಕರ ಮಧ್ಯೆ ಮೈತ್ರಿ ಸರ್ಕಾರ ರಚನೆ ನಡೆದಿದ್ದು
9. ಆತುರಕ್ಕೆ ಬಿದ್ದು ರಾತ್ರೋರಾತ್ರಿ ಸರ್ಕಾರ ರಚಿಸಿದ್ದು
10. ಶರದ್ ಪುತ್ರಿ, ಪತ್ನಿ ಫ್ಯಾಮಿಲಿ ಸೆಂಟಿಮೆಂಟ್ ಅಸ್ತ್ರ ಪ್ರಯೋಗಿಸಿದ್ದು

ಶಿವಸೇನೆ ಮೈತ್ರಿಕೂಟ ಗೆದ್ದಿದ್ದು ಹೇಗೆ?
ಅಪ್ಪ ಬಾಳಾಸಾಹೇಬ್ ಠಾಕ್ರೆಗೆ ಮಾತು ಕೊಟ್ಟಿದ್ದೇನೆ. ಈ ಬಾರಿ ಶಿವಸೇನೆ ಸರ್ಕಾರ ಬಂದೇ ಬರುತ್ತೆ ಅಂತ ಮುಖ್ಯಮಂತ್ರಿಗಾದಿಗಾಗಿ ಪಟ್ಟು ಹಿಡಿದಿದ್ದ ಶಿವಸೇನೆ ತನ್ನ ಸೈದ್ಧಾಂತಿಕ ವಿರೋಧಿಗಳಾದ ಎನ್‍ಸಿಪಿ-ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದೇ ಒಂದು ವಿಚಿತ್ರ-ವಿಲಕ್ಷಣ. ಹಾಗಿದ್ರೂ, ಈ ಮೈತ್ರಿ ಕೂಟ ಗೆದ್ದಿದ್ದೇಗೆ ಅನ್ನೋದನ್ನು ನೋಡೋಣ..

1. ಶರದ್ ಪವಾರ್ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದು
2. ಶರದ್ ಪವಾರ್ ಎದುರು ಹಾಕಿಕೊಳ್ಳಲು ಶಾಸಕರು ಹಿಂದೇಟು
3. ಮೈತ್ರಿಕೂಟದ ಶಾಸಕರನ್ನು ಒಟ್ಟಾಗಿ ಸೇರಿಸಿದ್ದು
4. ನಿನ್ನೆ ಸಂಜೆ ಖಾಸಗಿ ಹೊಟೇಲ್‍ನಲ್ಲಿ ಪರೇಡ್ ನಡೆಸಿದ್ದು
5. ಅಜಿತ್ ಪವಾರ್ ಬಣದ ಅತ್ಯಾಪ್ತರ ಮನವೊಲಿಕೆ
6. ಬಹಿರಂಗ ಹೇಳಿಕೆ ಕೊಡದೆ ಗೌಪ್ಯತೆ ಕಾಪಾಡಿದ್ದು
7. ಮೈತ್ರಿಕೂಟದಲ್ಲಿ ಭಿನ್ನಾಭಿಪ್ರಾಯ ತಲೆದೋರದಂತೆ ಎಚ್ಚರವಹಿಸಿದ್ದು
8. ಸೋನಿಯಾ ಸೂಚನೆಯಂತೆ ಕಾಂಗ್ರೆಸ್ಸಿಗರನ್ನು ಒಟ್ಟಾಗಿ ಸೇರಿಸಿದ್ದು
9. ಶಾಸಕರು ಬಿಜೆಪಿಗೆ ಜಿಗಿಯದಂತೆ ಎಚ್ಚರಿಕೆ ವಹಿಸಿದ್ದು
10. ಕೊನೆಕ್ಷಣದಲ್ಲಿ ಅಜಿತ್ ಪವಾರ್ ಮೇಲೆ ಕೌಟುಂಬಿಕ ಒತ್ತಡ ಹೇರಿದ್ದು

ಬಿಜೆಪಿ ಮುಂದಿರುವ ಹಾದಿಯೇನು?
ಸಾಧ್ಯತೆ 1- 6 ತಿಂಗಳ ಬಳಿಕ ಕರ್ನಾಟಕದಂತೆ ಆಪರೇಷನ್ ಕಮಲಕ್ಕೆ ಕೈ ಹಾಕಬಹುದು
ಸಾಧ್ಯತೆ 2- ಮೈತ್ರಿಕೂಟದ ಕಿತ್ತಾಟಕ್ಕೆ ಕಾಯಬಹುದು
ಸಾಧ್ಯತೆ 3- ವಿರೋಧಪಕ್ಷ ಸ್ಥಾನದಲ್ಲಿ ಮೈತ್ರಿಕೂಟದ ಮನಸ್ತಾಪ ಲಾಭ ಪಡೆಯಬಹುದು
ಸಾಧ್ಯತೆ 4- ಹಿಂದು ಮತಗಳ ಮೇಲೆ ಏಕಹಕ್ಕು ಸ್ಥಾಪನೆಗೆ ತಂತ್ರಗಾರಿಕೆ ಮಾಡಬಹುದು

Share This Article
Leave a Comment

Leave a Reply

Your email address will not be published. Required fields are marked *