ಮೈಸೂರಲ್ಲಿ ಬರ್ತ್ ಡೇ ಪಾಲಿಟಿಕ್ಸ್ ಜೋರು – ಜಿಟಿಡಿ ಮನವೊಲಿಕೆಗೆ ಪ್ರಜ್ವಲ್ ರೇವಣ್ಣ ಶತ ಪ್ರಯತ್ನ

Public TV
2 Min Read

ಮೈಸೂರು: ಉಪ ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳ ಪೈಕಿ ಅತೀ ಹೆಚ್ಚು ಗಮನ ಸೆಳೆದಿರೋದು ಹುಣಸೂರು ಕ್ಷೇತ್ರ. ಹುಣಸೂರು ಗೆಲ್ಲಲು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸರಿಸಮನಾಗಿ ಪ್ರಯತ್ನ ಪಡುತ್ತಿವೆ. ಹುಣಸೂರಲ್ಲಿ ಮೊದಲಿಂದ ಒಂದಷ್ಟು ಹಿಡಿತ ಹೊಂದಿರುವ ಮಾಜಿ ಸಚಿವ ಜಿಟಿ ದೇವೇಗೌಡರು ಸದ್ಯದ ಚುನಾವಣೆಯಲ್ಲಿ ತಟಸ್ಥ ನಿಲುವು ಹೊಂದಿದ್ದಾರೆ. ಜೆಡಿಎಸ್‍ನಿಂದ ಒಂದು ಕಾಲು ಹೊರಗಿಟ್ಟು ಬಿಜೆಪಿ ಕಡೆ ಆಸೆಗಣ್ಣಿಂದ ನೋಡುತ್ತಿರುವ ಜಿಟಿಡಿ ಬೆಂಬಲ ಪಡೆಯಲು ಮೂರು ಪಕ್ಷಗಳು ಪ್ರಯತ್ನ ನಡೆಸ್ತಿರೋದು ಗುಟ್ಟಾಗಿ ಉಳಿದಿಲ್ಲ.

ಕೈಯಲ್ಲಿದ್ದ ಜಿಟಿಡಿ ಎಂಬ ಲಡ್ಡುವನ್ನು ತಾವೇ ಕೈಯಾರೆ ಜಾರಿ ಬಿಟ್ಟಿದ್ದ ದಳಪತಿಗಳಿಗೆ ಈಗ ಹುಣಸೂರು ಉಪಸಮರದ ಹಿನ್ನೆಲೆಯಲ್ಲಿ ಜಿಟಿಡಿ ಮಹತ್ವ ಗೊತ್ತಾಗಿದೆ. ಹೀಗಾಗಿ ತಮ್ಮಿಂದ ದೂರ ಸರಿದ ಜಿಟಿ ದೇವೇಗೌಡರ ಹತ್ತಿರ ಮಾಡಿಕೊಳ್ಳಲು ದಳಪತಿಗಳು ಮುಂದಾಗಿದ್ದಾರೆ. ಈ ಬಾರಿ ಸಂಸದ ಪ್ರಜ್ವಲ್ ರೇವಣ್ಣ ಅವರು ಸಂಧಾನಕ್ಕೆ ಬಂದಿದ್ದಾರೆ.

ಸೋಮವಾರ ಜನ್ಮದಿನ ಆಚರಿಸಿಕೊಂಡ ಜಿಟಿಡಿಗೆ ಬರ್ತ್‍ಡೆ ವಿಶ್ ಮಾಡೋ ನೆಪದಲ್ಲಿ ಸಂಜೆ ಪ್ರಜ್ವಲ್ ರೇವಣ್ಣ ಭೇಟಿ ಯತ್ನಿಸಿದರು. ನೇರ ಜಿಟಿಡಿ ಮನೆಗೆ ಹೋಗಿದ್ರು. ಆದ್ರೆ ಜಿಟಿಡಿ ಅಲ್ಲಿ ಇರಲೇ ಇಲ್ಲ. ಎಷ್ಟು ಹೊತ್ತು ಕಾದರೂ ಜಿಟಿಡಿ ಬರಲೇ ಇಲ್ಲ. ಅಷ್ಟರಲ್ಲಿ ಜಿಟಿಡಿ ಪತ್ನಿ ತಂದಿಟ್ಟಿದ್ದ ಲಡ್ಡು ಬಾಯಿಗೆ ಹಾಕಿಕೊಂಡು ಜಿಟಿಡಿಗೆ ಫೋನಾಯಿಸಿ, ಎಲ್ಲಿದ್ದೀರಿ ಅಣ್ಣಾ.. ನಾನೇ ಬರ್ತೀನಿ ಅಂತ ಕೇಳಿದ್ರು.

ಕೊನೆಗೆ ಜಿಟಿ ದೇವೇಗೌಡರಿದ್ದ ಜಾಗಕ್ಕೆ ಖುದ್ದು ಸಂಸದ ಪ್ರಜ್ವಲ್ ರೇವಣ್ಣ ಹೋಗಿ ಮುನಿಸಿಕೊಂಡಿರುವ ನಾಯಕನ ಜೊತೆ ಪ್ರತ್ಯೇಕವಾಗಿ ಮಾತನಾಡಿದ್ರು. ಹುಣಸೂರಲ್ಲಿ ತಮ್ಮ ಬೆಂಬಲ ಬೇಕು ಕೊಡಿ, ಜೊತೆಗೆ ಪ್ರಚಾರಕ್ಕೆ ಬನ್ನಿ ಅಂತ ಸುಮಾರು ಒಂದೂವರೆ ಗಂಟೆ ಕಾಲ ಓಲೈಸೋ ಪ್ರಯತ್ನ ನಡೆಸಿದರು. ಆದರೆ ಇದಕ್ಕೆಲ್ಲಾ ಜಿಟಿಡಿ ಮಣಿಯಲೇ ಇಲ್ಲ. ಕೊನೆಗೆ ನಿಮ್ಮ ಮಗನನ್ನಾದ್ರೂ ಕಳಿಸಿಕೊಡಿ ಎಂದು ಜಿಟಿಡಿಗೆ ಪ್ರಜ್ವಲ್ ರೇವಣ್ಣ ಮನವಿ ಮಾಡಿದ್ರು. ಜಿಟಿ ದೇವೇಗೌಡರು ಇದಕ್ಕೂ ಒಪ್ಪಲಿಲ್ಲ. ಆಗ ಹರೀಶ್ ಗೌಡ ಕೂಡ ಇದ್ದರು. ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಪ್ರಜ್ವಲ್ ರೇವಣ್ಣ ಪೆಚ್ಚು ಮೊರೆ ಹಾಕಿಕೊಂಡು ನಿರ್ಗಮಿಸಿದ್ರು.

ಆದರೆ ಜಿಟಿಡಿ ಸೆಳೆಯೋ ಸಂಧಾನ ವಿಫಲ ಆದ್ರೂ ಸಂಸದ ಪ್ರಜ್ವಲ್ ರೇವಣ್ಣ ಏನನ್ನೂ ತೋರಿಸಿಕೊಳ್ಳಲಿಲ್ಲ. ಕೆಳಗೆ ಬಿದ್ದು ಮೀಸೆ ಮಣ್ಣಾದ್ರೂ ಏನೂ ಆಗಿಲ್ಲ ಎಂಬಂತೆ ತೋರಿಸಿಕೊಂಡ್ರು. ನಾನು ಬಂದಿದ್ದು ಸಂಧಾನಕ್ಕೆ ಅಲ್ಲ, ಜಿಟಿಡಿ ಬರ್ತ್‍ಡೇ ಅಲ್ವಾ..? ಹಾಗೆ ವಿಶ್ ಮಾಡಿ ಆರೋಗ್ಯ ವಿಚಾರಿಸೋಣ ಅಂತ ಬಂದಿದ್ದೇನೆ. ಜಿಟಿಡಿ ಕೈ ಪೆಟ್ಟಾಗಿದೆ. ಜೊತೆಗೆ ಕಾಲು ನೋವು ಇದೆ ಪಾಪ.. ಹೀಗಾಗಿ ಪ್ರಚಾರಕ್ಕೆ ಬನ್ನಿ ಅಂತ ನಾವು ಕರೆಯಲಿಲ್ಲ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *