41 ವರ್ಷದ ಬಳಿಕ ಅಮ್ಮನ ಮಡಿಲು ಸೇರಿದ 43ರ ಮಗ

Public TV
2 Min Read

-ಅಮ್ಮ, ಮಗನ ಮಿಲನದ ಮನಮಿಡಿಯುವ ಕಥೆ
-ಮಗನನ್ನು ದೂರ ಮಾಡಿತ್ತು ಬಡತನ

ಚೆನ್ನೈ: 41 ವರ್ಷದ ಬಳಿಕ 43 ವರ್ಷದ ಮಗ ತಾಯಿಯ ಮಡಿಲು ಸೇರಿದ್ದಾರೆ. ತಮಿಳುನಾಡಿನ ರಾಜಧಾನಿ ಚೆನ್ನೈ ಈ ಅಪರೂಪದ ಮಿಲನಕ್ಕೆ ಸಾಕ್ಷಿಯಾಗಿತ್ತು. ಮಗನನ್ನ ನೋಡಿ ಭಾವುಕಳಾದ ತಾಯಿಯ ಮಮತೆ ನೋಡುಗರ ಕಣ್ಣಾಲಿಗಳು ತುಂಬಿದವು.

ಡೇವಿಡ್ ನೀಲ್ಸನ್ ತಾಯಿ ಧನಲಕ್ಷ್ಮಿ ಮಡಿಲು ಸೇರಿದ್ದಾರೆ. ಡೆನ್ಮಾರ್ಕ್ ನಿಂದ ಬಂದಿರುವ ಡೇವಿಡ್ ಅಮ್ಮನನ್ನು ಸೇರಿದ್ದು ಹೇಗೆ? 41 ವರ್ಷಗಳ ಹಿಂದೆ 2ರ ಪೋರ ಚೆನ್ನೈನಿಂದ ಡೆನ್ಮಾರ್ಕ್ ತಲುಪಿದ್ದು ಹೇಗೆ? ಅಮ್ಮನಿಗಾಗಿ ಭಾರತಕ್ಕೆ ಬಂದ ಡೇವಿಡ್ ತಾಯಿಯನ್ನು ಹುಡುಕಿದ್ದು ಹೇಗೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

1976ರಲ್ಲಿ ಚೆನ್ನೈನ RSRM ಆಸ್ಪತ್ರೆಯಲ್ಲಿ ಧನಲಕ್ಷ್ಮಿ ಅವರು ಪುತ್ರ ಡೇವಿಡ್ ಗೆ ಜನ್ಮ ನೀಡುತ್ತಾರೆ. ಧನಲಕ್ಷ್ಮಿ ತನ್ನಿಬ್ಬರು ಮಕ್ಕಳೊಂದಿಗೆ ಆಶ್ರಯ ಕೇಂದ್ರದಲ್ಲಿ ಕೆಲಸ ಮಾಡಿಕೊಂಡು ಅಲ್ಲಿಯೇ ವಾಸವಾಗಿದ್ದರು. ಒಮ್ಮೆ ಅಧಿಕಾರಿಗಳು ಧನಲಕ್ಷ್ಮಿ ಅವರಿಗೆ ಬೇರೆ ಕಡೆ ತೆರಳುವಂತೆ ಸೂಚಿಸಿದ್ದರು. ಬಡತನದಲ್ಲಿದ್ದ ಧನಲಕ್ಷ್ಮಿ ಮಗನನ್ನು ಆಶ್ರಯ ಕೇಂದ್ರದಲ್ಲಿ ಬಿಟ್ಟು ಹೋಗಿದ್ದರು. ಹಾಗಾಗಿ ಆಶ್ರಯ ಕೇಂದ್ರದ ಸಿಬ್ಬಂದಿಗಳೇ ಡೇವಿಡ್ ನನ್ನು ನೋಡಿಕೊಳ್ಳುತ್ತಿದ್ದರು.

ಕೆಲವು ದಿನಗಳ ಬಳಿಕ ಧನಲಕ್ಷ್ಮಿ ಪುತ್ರನನ್ನು ನೋಡಲು ಆಶ್ರಯ ಕೇಂದ್ರಕ್ಕೆ ಬಂದಿದ್ದರು. ಧನಲಕ್ಷ್ಮಿ ಬರುವ ಮೊದಲೇ ಡೆನ್ಮಾರ್ಕ್ ಮೂಲದ ದಂಪತಿಯನ್ನು ಡೇವಿಡ್ ನನ್ನು ದತ್ತು ಪಡೆದು ತಮ್ಮ ಜೊತೆಗೆ ಕರೆದುಕೊಂಡು ಹೋಗಿದ್ದರು.

ಡೆನ್ಮಾರ್ಕ್ ಸೇರಿದ ಡೇವಿಡ್ ಐಷಾರಾಮಿ ಜೀವನ ನಡೆಸತೊಡಗಿದ. ದೊಡ್ಡವನಾಗುತ್ತಿದ್ದಂತೆ ಡೇವಿಡ್ ಗೆ ತನ್ನ ತಾಯಿಯನ್ನು ಹುಡುಕುವ ಆಸೆ ಮೊಳಕೆಯೊಡೆಯಿತು. ಡೇವಿಡ್ ಬಳಿ ತಾಯಿಯ ಒಂದು ಚಿಕ್ಕ ಫೋಟೋ ಮತ್ತು ಆಶ್ರಯ ಕೇಂದ್ರದ ವಿಳಾಸವಿತ್ತು. 39ನೇ ವಯಸ್ಸಿನಲ್ಲಿ ಫೋಟೋ ಮತ್ತು ಆಶ್ರಯ ಕೇಂದ್ರದ ವಿಳಾಸ ಹಿಡಿದು ಚೆನ್ನೈ ತಲುಪಿದ್ದ ಡೇವಿಡ್ ಆಶ್ಚರ್ಯ ಕಾದಿತ್ತು. ಕಾರಣ ತಾನು ವಾಸವಿದ್ದ ಆಶ್ರಯ ಕೇಂದ್ರ 1990ರಲ್ಲಿ ಮುಚ್ಚಿತ್ತು ಎಂಬ ವಿಷಯ ತಿಳಿದಿದೆ.

ತಾಯಿಯನ್ನು ಹುಡುಕುವ ಹಠ ಬಿಡದ ಡೇವಿಡ್ ಅಮ್ಮನ ಫೋಟೋ ಹಿಡಿದು ಗಲ್ಲಿ ಗಲ್ಲಿ ಸುತ್ತಾಡಿದ್ದುಂಟು. 2013ರಲ್ಲಿ ಚೆನ್ನೈನ ಸಾಮಾಜಿಕ ಕಾರ್ಯಕರ್ತ ಅರುಣ್ ದೋಹಲೆ ಎಂಬವರನ್ನು ಭೇಟಿಯಾಗುತ್ತಾರೆ. ಅರುಣ್ ಸಹಾಯದಿಂದ ಡೇವಿಡ್ ಸತತ ಆರು ವರ್ಷ ಅಮ್ಮನಿಗಾಗಿ ಚೆನ್ನೈ ಸುತ್ತಿದ್ದಾರೆ. ಆರು ವರ್ಷಗಳ ಪರಿಣಾಮ ಕಳೆದ ತಿಂಗಳು ಧನಲಕ್ಷ್ಮಿ ಪುತ್ರ ಡೇವಿಡ್ ಜೊತೆ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ. ಶನಿವಾರ ಚೆನ್ನೈಗೆ ಬಂದ ಡೇವಿಡ್ ಅಮ್ಮನನ್ನು ನೋಡಿ ಕಣ್ಣೀರು ಹಾಕಿದ್ದಾರೆ. ಇತ್ತ ಮಗನನ್ನು ನೋಡಿದ ತಾಯಿ ಸಹ ಅಪ್ಪಿಕೊಂಡು ಮುದ್ದಾಡಿ ಕಣ್ಣೀರಿಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *