ದೇವೇಂದ್ರ ಫಡ್ನವೀಸ್ ಪ್ರಮಾಣವಚನ- ಎನ್‍ಸಿಪಿ, ಕಾಂಗ್ರೆಸ್, ಶಿವಸೇನೆ ಸುಪ್ರೀಂ ಮೊರೆ

Public TV
3 Min Read

– ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಒಪ್ಪಿಗೆ

ಮುಂಬೈ: ದೇವೇಂದ್ರ ಫಡ್ನವೀಸ್ ಅವರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಇದ್ದಕ್ಕಿದ್ದಂತೆ ಅವಕಾಶ ನೀಡಿದ ರಾಜ್ಯಪಾಲರ ಕ್ರಮವನ್ನು ಖಂಡಿಸಿ ಎನ್‍ಸಿಪಿ, ಶಿವಸೇನೆ ಹಾಗೂ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಸುಪ್ರೀಂಕೋರ್ಟ್ ಸಹ ವಿಚಾರಣೆ ನಡೆಸಲು ರಿಜಿಸ್ಟರ್ ಮಾಡಿಕೊಂಡಿದೆ.

ಅಲ್ಲದೆ ಭಾನುವಾರ ಬೆಳಗ್ಗೆ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿದೆ. ಬೆಳಗ್ಗೆ 11.30ಕ್ಕೆ ವಿಚಾರಣೆಯ ಸಮಯವನ್ನು ನಿಗದಿಪಡಿಸಿದೆ.

ಈ ಕುರಿತು ಮೂರು ಪಕ್ಷಗಳ ಪರ ವಕೀಲ ದೇವದತ್ ಕಾಮತ್ ಮಾಹಿತಿ ನೀಡಿ, ಸುಪ್ರೀಂ ಕೋರ್ಟ್ ಬಳಿ ನಮ್ಮವರು ಇದ್ದಾರೆ. ಸುಪ್ರೀಂಕೋರ್ಟ್‍ನಲ್ಲಿ ಈಗಾಗಲೇ ನೋಂದಣಿಯಾಗಿದೆ. ಪ್ರಕರಣದ ತುರ್ತುಪರಿಸ್ಥಿತಿಯನ್ನು ನಿರ್ಧರಿಸುತ್ತಾರೆ. ಮೂರು ಪಕ್ಷಗಳ ಪರವಾಗಿ ಅರ್ಜಿ ಸಲ್ಲಿಸಲಾಗಿದೆ. ಸುಪ್ರೀಂಕೋರ್ಟ್ ನೋಂದಣಿಯ ನಂತರ ಮುಂದಿನ ಕ್ರಮವನ್ನು ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಬಿಜೆಪಿಯ ದೇವೇಂದ್ರ ಫಡ್ನವಿಸ್, ಉಪಮುಖ್ಯಮಂತ್ರಿಯಾಗಿ ಎನ್‍ಸಿಪಿಯ ಅಜಿತ್ ಪವಾರ್ ಇಂದು ಬೆಳಗ್ಗೆ 8:05ಕ್ಕೆ ಪ್ರಮಾಣ ವಚನ ಸ್ವೀಕರಿಸಿದ್ದರು. ಇದರಿಂದ ಸ್ವತಃ ಎನ್‍ಸಿಪಿ ನಾಯಕ ಶರದ್ ಪವಾರ್ ಅವರಿಗೂ ಶಾಕ್ ಆಗಿತ್ತು. ರಾತ್ರೋ ರಾತ್ರಿ ಸರ್ಕಾರ ರಚಿಸಲು ಹೇಗೆ ಅವಕಾಶ ನೀಡಿದರು ಎಂದು ಎನ್‍ಸಿಪಿ, ಕಾಂಗ್ರೆಸ್ ಹಾಗೂ ಶಿವಸೇನೆ ಆಕ್ರೋಶ ವ್ಯಕ್ತಪಡಿಸಿವೆ.

ಅಜಿತ್ ಪವಾರ್ ಹಿಂದೆ 30 ಎನ್‍ಸಿಪಿ ಶಾಸಕರಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಸಂಜೆ ಹೊತ್ತಿಗೆ ಬಹುತೇಕ ಶಾಸಕರು ಮತ್ತೆ ಎನ್‍ಸಿಪಿಗೆ ಮರಳಿದರು. ಇತ್ತ ಶಾಸಕಾಂಗ ಪಕ್ಷದ ಸ್ಥಾನದಿಂದ ಅಜಿತ್ ಅವರನ್ನು ಎನ್‍ಸಿಪಿ ತೆಗೆದು ಹಾಕಿತು. ಇದೀಗ ಅಜಿತ್ ಪವಾರ್ ಅವರ ಜೊತೆ 3 ರಿಂದ 4 ಶಾಸಕರು ಮಾತ್ರ ಇದ್ದಾರೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ಮುಖಂಡ ರಣದೀಪ್ ಸಿಂಗ್ ಸುರ್ಜೇವಾಲಾ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಬಿಜೆಪಿ ಮಹಾರಾಷ್ಟ್ರ ಜನರಿಗೆ ದ್ರೋಹ ಬಗೆದಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅಣತಿಯ ಮೇರೆಗೆ ಕಾರ್ಯನಿರ್ವಹಿಸುವ ಮೂಲಕ ರಾಜ್ಯಪಾಲರು ಕಾನೂನು ಬಾಹಿರ ಸರ್ಕಾರವನ್ನು ರಚಿಸಿದ್ದಾರೆ. ನವೆಂಬರ್ 23 ನಡೆದ ಈ ಘಟನೆ ಭಾರತದ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇಂದು ಬೆಳಗ್ಗೆ ಈ ಬೆಳವಣಿಗೆ ನಡೆಯುತ್ತಿದ್ದಂತೆ ಮಹಾರಾಷ್ಟ್ರ ರಾಜಕೀಯ ವಲಯುದಲ್ಲಿ ಅಲ್ಲೋಲಕಲ್ಲೋಲವಾಗಿದ್ದು, ಎನ್‍ಸಿಪಿ ಬಿಜೆಪಿಗೆ ಬೆಂಬಲ ನೀಡಿರುವುದರ ಕುರಿತು ಕಾಂಗ್ರೆಸ್ ಹಾಗೂ ಶಿವಸೇನೆ ಶರದ್ ಪವಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದವು. ಆದರೆ ನಂತರ ಶರದ್ ಪವಾರ್ ಅವರೇ ಈ ಕುರಿತು ಸ್ಪಷ್ಟಪಡಿಸಿ ನನಗೆ ಈ ಕುರಿತು ತಿಳಿದೇ ಇಲ್ಲ ಅಜಿತ್ ಪವಾರ್ ಈ ರೀತಿ ಮಾಡಿದ್ದಾರೆ ಎಂದು ಹೇಳಿದರು.

ಶುಕ್ರವಾರ ಶಿವಸೇನೆ, ಕಾಂಗ್ರೆಸ್ ಹಾಗೂ ಎನ್‍ಸಿಪಿ ನಡುವಿನ ಚರ್ಚೆಗಳು ಕೊನೆ ಹಂತ ತಲುಪಿದ್ದು, ಇಂದು ಎನ್‍ಸಿಪಿ ಬಿಜೆಪಿ ಜೊತೆ ಕೈಜೋಡಿಸಿ ಸರ್ಕಾರ ರಚನೆಗೆ ಸಜ್ಜಾಗಿದೆ. ಈ ಹಿಂದೆ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಮಹಾರಾಷ್ಟ್ರ ಸಿಎಂ ಆಗಲು ಅಜಿತ್ ಪವಾರ್ ಒಮ್ಮತ ಸೂಚಿಸಿದ್ದರು. ಆದರೆ ಇದ್ದಕ್ಕಿದ್ದಂತೆ ಬಿಜೆಪಿ ಜೊತೆ ಸೇರಿಕೊಂಡು ಈಗ ಉಪ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದಾರೆ.

ಹೆಚ್ಚು ಸ್ಥಾನ ಗೆದ್ದ ಬಿಜೆಪಿ ಜೊತೆ ಕೈಜೊಡಿಸಿ ಸರ್ಕಾರ ಮಾಡಲು ಶಿವಸೇನೆ ಹೆಚ್ಚು ಬೇಡಿಕೆಗಳನ್ನು ಮುಂದಿಟ್ಟಿತ್ತು. ಸಿಎಂ ಸ್ಥಾನ ನಮಗೆ ಬಿಟ್ಟುಕೊಡಬೇಕು, ಸಚಿವ ಸಂಪುಟದಲ್ಲಿ ಸಮವಾಗಿ ಸ್ಥಾನಗಳನ್ನು ಹಂಚಬೇಕು ಎಂದು ಪಟ್ಟು ಹಿಡಿದಿತ್ತು. ಆದರೆ ಇದಕ್ಕೆ ಬಿಜೆಪಿ ಒಪ್ಪಿರಲಿಲ್ಲ. ಇತ್ತ ಕಾಂಗ್ರೆಸ್ ಹೇಗಾದರೂ ಶಿವಸೇನೆ, ಎನ್‍ಸಿಪಿ ವಿಶ್ವಾಸಗಳಿಸಿ ಸರ್ಕಾರ ರಚನೆ ಮಾಡಲು ಮಾಸ್ಟರ್ ಪ್ಲಾನ್ ಮಾಡಿತ್ತು. ಆದರೆ ಈಗ ಈ ಎಲ್ಲಾ ಪ್ರಯತ್ನಕ್ಕೂ ನೀರೆರಚಿದಂತೆ ಆಗಿದ್ದು, ಸದ್ದಿಲ್ಲದೆ ಬಿಜೆಪಿ ಎನ್‍ಸಿಪಿ ಜೊತೆ ಸೇರಿಕೊಂಡು ದೇವೇಂದ್ರ ಫಡ್ನವೀಸ್ ಸಿಎಂ ಆಗಿ, ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.

ಚುನಾವಣೆಯಲ್ಲಿ 288 ಸೀಟ್‍ನಲ್ಲಿ ಬಿಜೆಪಿ 105 ಸ್ಥಾನ, ಶಿವಸೇನೆ 56 ಸ್ಥಾನ, ಎನ್‍ಸಿಪಿ 54 ಸ್ಥಾನ ಹಾಗೂ ಕಾಂಗ್ರೆಸ್ 44 ಸ್ಥಾನಗಳನ್ನು ಗಳಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *