ಎಂಟಿಬಿ ಖಾತೆಗೆ ಇವತ್ತೇ ಹಣ ಜಮೆ- ಹೊಸೂರು ಬ್ಯಾಂಕ್ ಕತೆ ಹೇಳಿದ ನಂಜೇಗೌಡ

Public TV
2 Min Read

ಬೆಂಗಳೂರು: ನನಗೆ ಸಾಲ ಕೊಟ್ಟಿದ್ದೇನೆ ಅಂತ ಇನ್ನೊಮ್ಮೆ ಹೇಳಿದರೆ ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ವಿರುದ್ಧ ಪ್ರಕರಣ ದಾಖಲಿಸುತ್ತೇನೆ ಎಂದು ಮಾಲೂರು ಶಾಸಕ ನಂಜೇಗೌಡ ಎಚ್ಚರಿಕೆ ನೀಡಿದ್ದಾರೆ.

ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ನಾನು ಎಂಟಿಬಿ ನಾಗರಾಜ್ ಅವರಿಂದ ಯಾವುದೇ ರೀತಿಯ ಸಾಲ ಪಡೆದಿಲ್ಲ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‍ ಹೈಕಮಾಂಡ್ ಸೂಚನೆ ಮೇರೆಗೆ ಎಂಟಿಬಿ ನಾಗರಾಜ್ ನನಗೆ ಎರಡು ಕೋಟಿ ರೂ. ಪಾರ್ಟಿ ಫಂಡ್ ಕೊಟ್ಟಿದ್ದರು. ಹಣವನ್ನು ನೇರವಾಗಿ ನನ್ನ ಕೈಗೆ ಕೊಟ್ಟಿಲ್ಲ. ಹೊಸೂರಿನ ಬ್ಯಾಂಕ್ ಅಕೌಂಟ್ ಒಂದರಿಂದ ಕೋಲಾರದ ಮುಖಂಡರೊಬ್ಬರ ಅಕೌಂಟ್‍ಗೆ ಹಣ ಹಾಕಿದ್ದರು. ಚುನಾವಣೆ ಮುಗಿದು 8 ದಿನದ ನಂತರ ನನಗೆ ಆ ಹಣ ಸಿಕ್ಕಿತ್ತು. ಆದರೆ ಆ ಹಣವನ್ನು ಎಂಟಿಬಿ ನಾಗರಾಜ್ ಸಾಲ ಎನ್ನುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಎಂಟಿಬಿ ನನಗೆ ಸಾಲ ಕೊಟ್ಟಿಲ್ಲ, ಆಪರೇಷನ್ ಕಮಲಕ್ಕೆ ದುಡ್ಡು ಕೊಟ್ಟಿದ್ದಾರೆ: ಸಿದ್ದರಾಮಯ್ಯ

ಪಾರ್ಟಿ ಫಂಡ್‍ಗೆ ಅಂತ ಕೊಟ್ಟಿದ್ದ 2 ಕೋಟೆ ರೂಪಾಯಿಯನ್ನು ಹೊಸೂರಿನ ಅಕೌಂಟ್‍ಗೆ ಇವತ್ತು ಹಾಕಿದ್ದೇನೆ. ಎಂಟಿಬಿ ನಾಗರಾಜ್ ಅವರಿಗೆ ಹುಚ್ಚು ಹಿಡಿದಿದೆ. ಹೀಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ನನ್ನನ್ನು ಬಿಜೆಪಿಗೆ ಸೆಳೆಯಲು ಸಾಕಷ್ಟು ಪ್ರಯತ್ನ ಮಾಡಿದರು. ನಾನು ಒಪ್ಪದಿದ್ದಾಗ 2 ಕೋಟಿ ರೂ. ಸಾಲ ಕೊಟ್ಟಿದ್ದೇನೆ ಅಂತ ಹಣ ಕೇಳುವುದಕ್ಕೆ ಶುರು ಮಾಡಿದರು. ಆತನಿಗೆ ಮಾನವೀಯತೆ ಇಲ್ಲ, ಗೌರವವೂ ಇಲ್ಲ ಎಂದು ಗುಡುಗಿದರು.

ಎಂಟಿಬಿ ಹೇಳಿದ್ದೇನು?:
ಹೊಸಕೋಟೆ ಕ್ಷೇತ್ರದಲ್ಲಿ ಪ್ರಚಾರ ಕಾರ್ಯಕ್ರಮ ವೇಳೆ ಮಾತನಾಡಿದ್ದ ಎಂಟಿಬಿ ನಾಗರಾಜ್, ನಾನು ಯಾರ ಋಣದಲ್ಲಿ ಇಲ್ಲ. ನನ್ನ ಋಣದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಸಿದ್ದರಾಮಯ್ಯ, ಮುನಿಯಪ್ಪ, ನಂಜೇಗೌಡ ಮತ್ತು ನಾರಾಯಣಸ್ವಾಮಿ ನನ್ನ ಬಳಿ ಹಣ ಪಡೆದಿದ್ದಾರೆ. ಅದನ್ನು ಇಂದಿಗೂ ವಾಪಸ್ ಮಾಡಿಲ್ಲ ಎಂದು ತಿಳಿಸಿದ್ದರು.

ಮಾಜಿ ಸಚಿವ ಕೃಷ್ಣಬೈರೇಗೌಡ ಅವರು ಕೂಡ ಲೋಕಸಭಾ ಚುನಾವಣೆಯಲ್ಲಿ ಹಣವನ್ನು ಸಾಲ ತೆಗೆದುಕೊಂಡಿದ್ದ. ಆದರೆ ಮತ್ತೆ ಅವನು ವಾಪಸ್ ಮಾಡಿದ. ಭೈರೇಗೌಡ ಬಿಟ್ಟರೆ ಬೇರೆ ಯಾರು ಹಣ ವಾಪಸ್ ಮಾಡಿಲ್ಲ. ನಾನು ಮಂಜುನಾಥ್ ಸ್ವಾಮಿ ಭಕ್ತ ಸುಳ್ಳು ಹೇಳಲ್ಲ. ನನ್ನ ಋಣದಲ್ಲಿ ಕಾಂಗ್ರೆಸ್ಸಿನ ಕೆಲ ನಾಯಕರು ಇದ್ದಾರೆ. ನನ್ನ ಬಳಿ ಹಣ ಪಡೆದು ವಾಪಸ್ ಮಾಡದೆ ಈಗ ನನ್ನನ್ನೇ ಸೋಲಿಸಲು ನನ್ನ ಕ್ಷೇತ್ರಕ್ಕೆ ಬಂದಿದ್ದಾರೆ ಎಂದು ಕಿಡಿಕಾರಿದ್ದರು.

ನನ್ನ ಬಳಿ 1,200 ಕೋಟಿಗೂ ಅಧಿಕ ಹಣ ಇದೆ. ನಾನು ಅಷ್ಟು ಆಸ್ತಿಯ ಒಡೆಯ. ಆದರೆ ಇದೆಲ್ಲಾ ನ್ಯಾಯವಾಗಿ ಸಂಪಾದನೆ ಮಾಡಿದ್ದೇನೆ. ಕಾಂಗ್ರೆಸ್ ಹೈಕಮಾಂಡ್ ಸತ್ತು ಹೋಗಿದೆ. ನಾವು ಪಕ್ಷ ಬಿಡುವುದಕ್ಕೆ ಸಿದ್ದರಾಮಯ್ಯ ಕಾರಣ. ಸಿಎಂ ಜತೆ ಮಾತನಾಡಿ ಶಾಸಕರ ಸಮಸ್ಯೆ ಬಗೆಹರಿಸಿ ಎಂದು ಹೇಳಿದ್ದೆವು. ಆದರೆ ಅವರು ನನ್ನ ಮತ್ತು ನನ್ನ ಮಗನ ಕ್ಷೇತ್ರದ ಕೆಲಸವೇ ಮಾಡಿಕೊಡಿತ್ತಿಲ್ಲ ಅಂತ ನಮ್ಮ ಬಳಿ ಅಸಹಾಯಕತೆ ವ್ಯಕ್ತಪಡಿಸಿದರು ಎಂದು ಸಿದ್ದು ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *