ಗೋಕಾಕ್‍ನಲ್ಲಿ ತ್ರಿಕೋನ ಹಣಾಹಣಿ ಫಿಕ್ಸ್- ಜೆಡಿಎಸ್‍ನಿಂದ ಅಶೋಕ್ ಪೂಜಾರಿಗೆ ಟಿಕೆಟ್

Public TV
1 Min Read

ಬೆಂಗಳೂರು: ಬಿಜೆಪಿ ಬಂಡಾಯ ಅಭ್ಯರ್ಥಿ ಅಶೋಕ್ ಪೂಜಾರಿ ಅವರಿಗೆ ಪಕ್ಷ ಟಿಕೆಟ್ ಘೋಷಿಸುವ ಮೂಲಕ ಜೆಡಿಎಸ್ ಗೋಕಾಕ್ ಉಪ ಚುನಾವಣಾ ಕಣಕ್ಕೆ ಕಾಲಿಟ್ಟಿದೆ.

ನಾಮ ಪತ್ರ ಸಲ್ಲಿಸಲು ಸೋಮವಾರ ಕೊನೆಯ ದಿನವಾದ ಹಿನ್ನೆಯಲ್ಲಿ ಇಂದು ರಾತ್ರಿ ಅಭ್ಯರ್ಥಿಯ ಹೆಸರನ್ನು ಜೆಡಿಎಸ್ ಘೋಷಣೆ ಮಾಡಿದೆ. ಈ ಮೂಲಕ ಅಶೋಕ್ ಪೂಜಾರಿ ಅವರು ನಾಳೆ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಈ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಸಾಥ್ ನೀಡಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಅಶೋಕ್ ಪೂಜಾರಿ ಅವರ ಸ್ಪರ್ಧೆಯಿಂದ ಗೋಕಾಕ್ ಉಪ ಚುನಾವಣಾ ಕಣದಲ್ಲಿ ತ್ರಿಕೋನ ಹಣಾಹಣಿ ಏರ್ಪಡಲಿದೆ. ನಾಳೆ ಕಾಂಗ್ರೆಸ್‍ನಿಂದ ಲಖನ್ ಜಾರಕಿಹೊಳಿ ಹಾಗೂ ಬಿಜೆಪಿಯಿಂದ ರಮೇಶ್ ಜಾರಕಿಹೊಳಿ ಕೂಡ ನಾಮಪತ್ರ ಸಲ್ಲಿಸಲಿದ್ದಾರೆ. ಈ ಮೂಲಕ ಹೊಸಕೋಟೆ ಕ್ಷೇತ್ರದ ಬೆನ್ನಲ್ಲೇ ಗೋಕಾಕ್‍ನಲ್ಲೂ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ.

ಬಿಜೆಪಿಯು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಬೆಳಗಾವಿಯ ಗೋಕಾಕ್ ಕ್ಷೇತ್ರದ ಟಿಕೆಟ್ ನೀಡಿದೆ. ಇದರಿಂದಾಗಿ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಜೆಪಿ ಮುಖಂಡ ಅಶೋಕ್ ಪೂಜಾರಿ ಅವರು ಅಸಮಾಧಾನ ಹೊರ ಹಾಕಿದ್ದರು. ಸ್ವತಂತ್ರವಾಗಿ ಚುನಾವಣಾ ಕಣಕ್ಕೆ ಇಳಿಯಲು ಸಿದ್ಧತೆ ನಡೆಸಿದ್ದ ಅವರಿಗೆ ಮಣೆ ಹಾಕಿದ ಜೆಡಿಎಸ್ ಉತ್ತರ ಕರ್ನಾಟಕದಲ್ಲಿ ಜಯ ಸಾಧಿಸುವ ಪ್ಲ್ಯಾನ್ ರೂಪಿಸಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಅಶೋಕ್ ಪೂಜಾರಿ ಅವರು ರಮೇಶ್ ಜಾರಕಿಹೊಳಿ ವಿರುದ್ಧ 14,280 ಮತಗಳಿಂದ ಸೋತಿದ್ದರು. ಈ ವೇಳೆ ಅಶೋಕ್ ಪೂಜಾರಿ 75,969 ಮತ ಗಳಿಸಿದ್ದರೆ, ಜೆಡಿಎಸ್ ಅಭ್ಯರ್ಥಿ ಕೇವಲ 1,553 ಪಡೆದಿದ್ದರು. 2008 ಹಾಗೂ 2013 ಚುನಾವಣೆಯಲ್ಲಿ ಅಶೋಕ್ ಪೂಜಾರಿ ಜೆಡಿಎಸ್‍ನಿಂದ ಸ್ಪರ್ಧಿಸಿ ಸೋತಿದ್ದರು.

Share This Article
Leave a Comment

Leave a Reply

Your email address will not be published. Required fields are marked *