ಹಾಡಹಗಲೇ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಪಿಸ್ತೂಲ್ ತೋರಿಸಿ ವ್ಯಕ್ತಿಯ ಕಿಡ್ನಾಪ್

Public TV
1 Min Read

ರಾಯಚೂರು: ಹಾಡಹಗಲೇ ಸ್ನೇಹಿತರಂತೆ ವ್ಯಕ್ತಿಯೊಬ್ಬರನ್ನು ಮಾತನಾಡಿದ ದುಷ್ಕರ್ಮಿಗಳು ಪಿಸ್ತೂಲ್ ತೋರಿಸಿ ಅಪಹರಣ ಮಾಡಿರುವ ಘಟನೆ ಜಿಲ್ಲೆಯ ಲಿಂಗಸುಗೂರು ಬಸ್ ನಿಲ್ದಾಣದ ಬಳಿ ನಡೆದಿದೆ.

ಎಂಎಚ್ 14, 3566 ನಂಬರ್ ಕಾರಿನಲ್ಲಿ ಬಂದ ಕೆಲ ದುಷ್ಕರ್ಮಿಗಳು ವ್ಯಕ್ತಿಯೊಬ್ಬರನ್ನು ಸ್ನೇಹಿತರಂತೆ ಮಾತನಾಡಿಸಿದ್ದಾರೆ. ಆ ಬಳಿಕ ಆತನ ಹೆಗಲ ಮೇಲೆ ಕೈ ಹಾಕಿ ಕಾರಿನ ಬಳಿ ಎಳೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ. ಈ ಹಂತದಲ್ಲಿ ದುಷ್ಕರ್ಮಿಗಳ ಸಂಚು ತಿಳಿಯುತ್ತಿದಂತೆ ವ್ಯಕ್ತಿ ರಕ್ಷಣೆಗೆ ಕೂಗಿಕೊಂಡಿದ್ದ.

ವ್ಯಕ್ತಿಯನ್ನು ಬಲವಂತವಾಗಿ ಕರೆದುಕೊಂಡು ಹೋಗಲು ಯತ್ನಿಸುತ್ತಿರುವುದನ್ನು ಕಂಡ ಕೆಲ ಸಾರ್ವಜನಿಕರು ಕೂಡಲೇ ರಕ್ಷಣೆಗೆ ಮುಂದಾಗಿದ್ದರು. ಆದರೆ ದುಷ್ಕರ್ಮಿಗಳ ಗುಂಪಿನಲ್ಲಿದ್ದ ಮತ್ತೊಬ್ಬ ತನ್ನ ಬಳಿ ಇದ್ದ ಪಿಸ್ತೂಲ್ ತೋರಿಸಿ ಸಾರ್ವಜನಿಕರನ್ನು ಹೆದರಿಸಿದ್ದ. ಪಿಸ್ತೂಲ್ ಕಂಡ ಸಾರ್ವಜನಿಕರು ಏನು ಮಾಡಲಾಗದೆ ಕೈಕಟ್ಟಿ ನಿಲ್ಲುವ ಪರಿಸ್ಥಿತಿ ಎದುರಾಗಿತ್ತು.

ಇತ್ತ ವ್ಯಕ್ತಿ ಕಾರನ್ನು ಹತ್ತಲು ನಿರಾಕರಿಸಿ ಸ್ಥಳದಲ್ಲಿ ರಂಪಾಟ ನಡೆಸಿದ್ದ. ಆದರೂ ಆತನನ್ನು ಬಿಡದ ದುಷ್ಕರ್ಮಿಗಳು ಕಾರಿಗೆ ಬಲವಂತವಾಗಿ ಎತ್ತಿಹಾಕಿ ಸ್ಥಳದಿಂದ ಕೆಲವೇ ನಿಮಿಷಗಳಲ್ಲಿ ಪರಾರಿಯಾಗಿದ್ದಾರೆ. ಈ ಎಲ್ಲಾ ದೃಶ್ಯಗಳು ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ.

ಅಪಹರಣವಾದ ವ್ಯಕ್ತಿ ಹಾಗೂ ದುಷ್ಕರ್ಮಿಗಳ ಯಾವುದೇ ಮಾಹಿತಿ ಇದುವರೆಗೂ ಲಭಿಸಿಲ್ಲ. ಸದ್ಯ ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯರು ಪೊಲೀಸರಿಗೆ ನೀಡಿದ ಮಾಹಿತಿ ಪ್ರಕಾರ ಹಣಕಾಸಿನ ವಿಚಾರದಲ್ಲಿ ಅಪಹರಣವಾದ ವ್ಯಕ್ತಿ ಹಾಗೂ ದುಷ್ಕರ್ಮಿಗಳ ನಡುವೆ ಮಾತುಕತೆ ನಡೆಸುತ್ತಿದ್ದರು ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *