ವೈದ್ಯಕೀಯ ಕಾಲೇಜುಗಳು ಬಿಎಸ್‍ವೈಗೆ ಕಡಲೆಕಾಯಿ ಅಂಗಡಿಯೇ – ಸುರೇಶ್ ಗೌಡ ಪ್ರಶ್ನೆ

Public TV
1 Min Read

– ಅನರ್ಹರ ಕ್ಷೇತ್ರಗಳಿಗೆ ಇಂದ್ರಲೋಕವನ್ನೇ ಇಳಿಸುವಂತೆ ಹೇಳಿಕೆ

ಮಂಡ್ಯ: ವೈದ್ಯಕೀಯ ಕಾಲೇಜುಗಳು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕಡ್ಲೇಕಾಯಿ ಅಂಗಡಿಗಳಾಗಿರಬೇಕು ಎಂದು ಜೆಡಿಎಸ್ ಶಾಸಕ ಸುರೇಶ್ ಗೌಡ ವ್ಯಂಗ್ಯವಾಡಿದ್ದಾರೆ.

ಜಿಲ್ಲೆಯ ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆ.ಆರ್.ಪೇಟೆಗೆ ವೈದ್ಯಕೀಯ ಕಾಲೇಜು ನೀಡುವ ಭರವಸೆ ನೀಡಿದ ಬಿಎಸ್‍ವೈ ವಿರುದ್ಧ ಕಿಡಿಕಾರಿದರು. ಅನರ್ಹ ಶಾಸಕರ ಕ್ಷೇತ್ರಗಳಿಗೆ ಇಂದ್ರಲೋಕವನ್ನೇ ಇಳಿಸುವಂತೆ ಮುಖ್ಯಮಂತ್ರಿಗಳು ಹೇಳಿಕೆ ನೀಡುತ್ತಿದ್ದಾರೆ. ಇನ್ನೊಂದೆಡೆ ಹಿಂದೆ ಅನುಮೋದನೆಯಾಗಿರುವ ಕಾಮಗಾರಿಗಳಿಗೆ ಹಣವಿಲ್ಲ ಎಂದು ತಡೆಹಿಡಿಯುತ್ತಿದ್ದಾರೆ. ಇಂದಹ ಸಂದರ್ಭದಲ್ಲಿ ಅನರ್ಹ ಶಾಸಕರಿಗೆ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸುವರೇ ಎಂದು ಪ್ರಶ್ನಿಸಿದ್ದಾರೆ.

ಸೋಮವಾರದಿಂದ ನೀತಿಸಂಹಿತೆ ಜಾರಿಯಾಗುತ್ತದೆ. ಆದ್ದರಿಂದ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಇದು ರಾಜಕೀಯ ಗಿಮಿಕ್ ಅಷ್ಟೇ. ನಾರಾಯಣಗೌಡರನ್ನು ಅಭ್ಯರ್ಥಿ ಮಾಡಬಹುದು ಅನಿಸುತ್ತೆ ಅದಕ್ಕೆ ಭರವಸೆ ನೀಡುತ್ತಿದ್ದಾರೆ. ಈ ಹಿಂದೆ ನೀಡಿದ ಭರವಸೆಗಳಲ್ಲಿ ಎಷ್ಟನ್ನು ಕಾರ್ಯರೂಪಕ್ಕೆ ತಂದಿದ್ದಾರೆ? ಮಾಧ್ಯಮಗಳೇ ಅವಲೋಕಿಸಿ ನೋಡಿ ತಿಳಿಯುತ್ತದೆ ಎಂದು ಹರಿಹಾಯ್ದರು.

ದೇವೇಗೌಡರು ಕಾಂಗ್ರೆಸ್ ಜೊತೆ ಮೈತ್ರಿ ಕುರಿತು ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್- ಜೆಡಿಎಸ್ ಪಕ್ಷಗಳು ಜಾತ್ಯಾತೀತ ತತ್ವದಲ್ಲಿವೆ. ವರಿಷ್ಠರ ನಿರ್ಧಾರಕ್ಕೆ ನಾವೆಲ್ಲಾ ಕಟಿಬದ್ಧರಾಗಿರುತ್ತೇವೆ. ಜೆಡಿಎಸ್ ಪಕ್ಷದ ಯಾವೊಬ್ಬ ಶಾಸಕನು ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *