ಏರಿಯಾದಲ್ಲಿ ಹವಾ ಸೃಷ್ಟಿಸಲು 20ಕ್ಕೂ ಹೆಚ್ಚು ಕಾರುಗಳನ್ನು ಜಖಂಗೊಳಿಸಿದ ಪುಂಡರು ಅರೆಸ್ಟ್

Public TV
2 Min Read

– ಜೈಲಿಗೆ ಹೋದರೆ ಹೆಸರು ಮಾಡಬಹುದು
– ಎದುರಾಳಿಗಳಿಗೆ ಭಯ ಹುಟ್ಟಿಸಲು ಕೃತ್ಯ
– ವಿಜಯನಗರ ಪೊಲೀಸರಿಂದ 7 ಮಂದಿ ಅರೆಸ್ಟ್

ಬೆಂಗಳೂರು: ಏರಿಯಾದಲ್ಲಿ ಹವಾ ಸೃಷ್ಟಿ ಮಾಡಲು 20ಕ್ಕೂ ಹೆಚ್ಚು ಕಾರುಗಳ ಗ್ಲಾಸ್ ಒಡೆದು ಪುಂಡಾಟ ಮೆರೆದಿದ್ದ ಆರೋಪಿಗಳು ಕೊನೆಗೂ ಅಂದರ್ ಆಗಿದ್ದಾರೆ.

ಬುಧವಾರ ರಾತ್ರಿ ವಿಜಯನಗರದಲ್ಲಿ ನಿಲ್ಲಿಸಿದ್ದ 20ಕ್ಕೂ ಹೆಚ್ಚು ಕಾರುಗಳ ಗಾಜನ್ನು ಕಿಡಿಗೇಡಿಗೇಡಿಗಳು ಒಡೆದು ಹಾಕಿದ್ದರು. ಈ ದೃಶ್ಯಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಮಾಲೀಕರು ದೂರು ನೀಡಿದ ಹಿನ್ನೆಲೆಯಲ್ಲಿ ದೃಶ್ಯಗಳನ್ನು ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನಿತಿನ್, ಯಶವಂತ್ ಆಶ್ರಯ್, ಬಾಲಾಜಿ, ಕಿರಣ್ ರೆಡ್ಡಿ, ಮುತ್ತು ಹಾಗೂ ಚರಣ್ ರಾಜ್ ಒಟ್ಟು ಏಳು ಆರೋಪಿಗಳನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಕಿರಣ್ ರೆಡ್ಡಿ ವಿಜಯನಗರದ ರೌಡಿಶೀಟರ್ ಆಗಿದ್ದು, ಉಳಿದವರು ಆತನ ಸಹಚರರಾಗಿದ್ದಾರೆ.

ಕುಡಿದ ಅಮಲಿನಲ್ಲಿ ಆರೋಪಿಗಳು ಈ ಕೃತ್ಯ ಎಸಗಿದ್ದು, ಈ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ಕು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳು ತಡರಾತ್ರಿ ಮನೆಯ ಮುಂದೆ ನಿಲ್ಲಿಸಿದ್ದ ಕಾರುಗಳ ಗ್ಲಾಸ್ ಒಡೆದಿದ್ದರು. ಏಳು ಜನರಲ್ಲಿ ಮೂವರು ಆರೋಪಿಗಳು 20ಕ್ಕೂ ಅಧಿಕ ಕಾರುಗಳ ಗ್ಲಾಸ್ ಒಡೆದು ಹಾಕಿದ್ದಾರೆ. ಬೈಕಿನಲ್ಲಿ ಬಂದ ನಿತಿನ್, ಯಶವಂತ, ಆಶ್ರಯ್ ಸಿಕ್ಕ ಸಿಕ್ಕ ಕಾರುಗಳ ಗಾಜುಗಳನ್ನು ಒಡೆದು ಹಾಕಿದ್ದರೆ.

ಬಂಧಿತ ಮೂವರನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಈ ಹಿಂದೆ ಇಂತಹ ಕೃತ್ಯಗಳನ್ನು ಎಸಗಿದ್ದ ನಾಲ್ಕು ಜನ ಆರೋಪಿಗಳು ಸಹ ಈ ಕೃತ್ಯದಲ್ಲಿ ಭಾಗಿಯಾಗಿದ್ದರು. ಅವರನ್ನೂ ಸಹ ವಿಜಯನಗರ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ರೌಡಿ ಶೀಟರ್ ಕಿರಣ್ ರೆಡ್ಡಿಯೇ ತನ್ನ ಸಹಚರರಿಗೆ ನಿರ್ದೇಶನ ನೀಡಿ ಈ ಕೃತ್ಯ ಮಾಡಿಸಿದ್ದಾನೆ. ಅಲ್ಲದೆ ಅವರಿಗೆ ಸಹಾಯ ಮಾಡುತ್ತಿದ್ದ, ಏರಿಯಾದಲ್ಲಿ ಹವಾ ಸೃಷ್ಟಿ ಮಾಡಲು ಆರೋಪಿಗಳು ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ. ಒಮ್ಮೆ ಜೈಲಿಗೆ ಹೋಗಿ ಬಂದರೆ ಹೆಸರು ಮಾಡಬಹುದು. ನಮ್ಮ ಎದುರಾಳಿಗಳಿಗೆ ಭಯ ಹುಟ್ಟಿಸಬೇಕು ಎಂಬ ಉದ್ದೇಶದಿಂದ ಕಂಡ ಕಂಡ ಕಾರುಗಳ ಗಾಜುಗಳನ್ನು ಪುಡಿ ಮಾಡುತ್ತಿದ್ದರು. ಆರೋಪಿಗಳು ಈಗಾಗಲೇ ಮನೆ ಬಿಟ್ಟು ಹೊರ ಬಂದಿದ್ದು, ಅವರ ಪೋಷಕರು ಸಹ ಮಕ್ಕಳಿಂದ ಕಿರಿಕಿರಿಯಾಗುತ್ತಿದೆ. ಇವರಿಂದ ಮುಕ್ತಿ ಕೊಡಿಸಿ ಎಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ಇತ್ತೀಚೆಗೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸಿಡಿಹೊಸಕೋಟೆ ಗ್ರಾಮದಲ್ಲಿ 20 ಜನ ಯುವಕರ ತಂಡವೊಂದು ರಾತ್ರಿ ವೇಳೆ ಗ್ರಾಮಕ್ಕೆ ನುಗ್ಗಿ ಮನೆಯ ಬಳಿ ನಿಲ್ಲಿಸಿದ್ದ ಕಾರುಗಳ ಗಾಜುಗಳನ್ನು ಪುಡಿ ಪುಡಿ ಮಾಡಿತ್ತು. ಇದನ್ನು ಪ್ರಶ್ನಿಸಿದ ಗ್ರಾಮಸ್ಥರ ಮೇಲೆಯೇ ಲಾಂಗ್ ಮಚ್ಚುಗಳಿಂದ ಹಲ್ಲೆ ನಡೆಸಿದ್ದರು.

ಮಧ್ಯರಾತ್ರಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಶ್ರೀರಾಮ ಎಂಬವರ ಮನೆ ಬಳಿ ನಿಲ್ಲಿಸಿದ್ದ ಕಾರಿನ ಗಾಜುಗಳನ್ನು ಯುವಕರು ಜಖಂ ಮಾಡುತ್ತಿದ್ದರು. ಈ ವೇಳೆ ಅಕ್ಕಪಕ್ಕದ ಮನೆಯವರು ಹೊರಗೆ ನೋಡುತ್ತಿದ್ದಂತೆ ಅವರ ಮೇಲೆಯೂ ಯುವಕರು ಲಾಂಗು, ಮಚ್ಚು ಹಾಗು ಚಾಕುಗಳಿಂದ ಹಲ್ಲೆ ನಡೆಸಿದ್ದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಶ್ರೀರಾಮ ಮನೆಯಲ್ಲಿದ್ದ ಪಿಸ್ತೂಲಿನಿಂದ ಗಾಳಿಯಲ್ಲಿ ಮೂರಕ್ಕೂ ಹೆಚ್ಚು ಬಾರಿ ಗುಂಡು ಹಾರಿಸಿದ್ದು, ಇದರಿಂದ ಭಯಭೀತರಾದ ಯುವಕರು ಅಲ್ಲಿಂದ ಪರಾರಿಯಾಗಿದ್ದರು. ರಾತ್ರಿ 10 ಗಂಟೆಯ ಸಮಯದಲ್ಲಿ ಘಟನೆ ನಡೆದಿದ್ದರಿಂದ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *