ಬರದ ನಾಡಿನಲ್ಲಿ ಕಣ್ಮನ ತಣಿಸುವ ಹುಚ್ಚಯ್ಯನಕಟ್ಟೆ ವೈಭವ

Public TV
2 Min Read

ಚಾಮರಾಜನಗರ: ಕ್ಯಾರ್ ಚಂಡ ಮಾರುತದ ಎಫೆಕ್ಟ್ ಬರದನಾಡಿನ ಕರೆ ಕಟ್ಟೆಗಳು ಧುಮ್ಮಿಕುವಂತೆ ಮಾಡಿದೆ. ಹಸಿರು ಕಾನನದ ನಡುವೆ ಹಾಲ್ನೊರೆಯಂತಹ ಝುಳು ಝಳು ನಾದದೊಂದಿಗೆ ಧುಮ್ಮಿಕುತ್ತಿರುವ ಜಲರಾಶಿಗೆ ಪ್ರವಾಸಿಗರು ಮೈಯೊಡ್ಡಿ ಪುಳಕಗೊಳ್ಳುತ್ತಿದ್ದಾರೆ. ತಣ್ಣನೆಯ ನೀರು ದೇಹಕ್ಕೆ ತಂಪು ನೀಡಿದರೆ, ಅಚ್ಚ ಹಸಿರಾದ ಪ್ರಕೃತಿಯ ಸೌಂದರ್ಯ ಕಣ್ಣಿಗೆ ಕಂಪು ನೀಡುತ್ತಿದೆ. ಕಿರು ಜಲಾಶಯದ ವೈಭವಕ್ಕೆ ಪ್ರವಾಸಿಗರು ಫಿದಾ ಆಗಿದ್ದಾರೆ.

ಹಸಿರಾದ ಪ್ರಕೃತಿ ಸೌಂದರ್ಯದ ಮಧ್ಯೆ ಮೈದುಂಬಿ ಹರಿಯುತ್ತಿರುವ ಕಿರು ಜಲಾಶಯ ಎಲ್ಲರ ಗಮನ ಸೆಳೆಯುತ್ತಿದೆ. ಈ ಸುಂದರ ದೃಶ್ಯ ಕಾಣಸಿಗುತ್ತಿರುವುದು ಯಾವುದೋ ಖಾಸಗಿ ರೆಸಾರ್ಟ್ ಆಗಲಿ, ದುಬಾರಿಯಾದ ಖಾಸಗಿ ಮನೋರಂಜನೆಯ ಪಾರ್ಕ್ ಗಳಲ್ಲಿಯಾಗಲಿ ಅಲ್ಲ, ಬದಲಿಗೆ ಬಿರು ಬಿಸಿಲಿಗೆ ಹೆಸರಾದ ಗಡಿನಾಡು ಚಾಮರಾಜನಗರದಲ್ಲಿ. ಹೌದು. ಜಿಲ್ಲಾ ಕೇಂದ್ರ ಚಾಮರಾಜನಗರದಿಂದ ಕೇವಲ 15 ಕಿಲೋ ಮೀಟರ್ ದೂರದ ಲಕ್ಷ್ಮಿಪುರ ಬಳಿ ಇರುವ ಹುಚ್ಚಪ್ಪನಕಟ್ಟೆ ಕಿರು ಜಲಾಶಯ ಈಗ ಪ್ರವಾಸಿಗರ ಅಚ್ಚು ಮೆಚ್ಚಿನ ಹಾಟ್ ಸ್ಪಾಟ್ ಆಗಿದೆ. ಸುಮಾರು 20 ಅಡಿ ಎತ್ತರದಿಂದ ಝುಳು ಝಳು ನಾದದೊಂದಿಗೆ ಧುಮ್ಮುಕ್ಕುತ್ತಿರುವ ಹಾಲ್ನೋರೆಯಂತ, ತಣ್ಣನೆಯ ಸ್ವಚ್ಚ ನೀರಿಗೆ ಮೈಯೊಡ್ಡಿ ವಯಸ್ಸಿನ ಹಂಗಿಲ್ಲದೆ ಪ್ರವಾಸಿಗರು ಸಂಭ್ರಮಿಸುತ್ತಿದ್ದಾರೆ.

ಅಚ್ಚರಿ ಎನಿಸಿದರೂ ಇದು ಸತ್ಯ. ಗಡಿನಾಡು ಚಾಮರಾಜನಗರದಲ್ಲಿ ನಿಗದಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಆದರೂ ಕೂಡ ಚಾಮರಾಜನಗರ ತಾಲೂಕಿನ ಲಕ್ಷ್ಮಿಪುರ ಬಳಿಯ ಹುಚ್ಟಯ್ಯನ ಕಟ್ಟೆಯ ಕಿರು ಜಲಾಶಯ ಮಾತ್ರ ಮೈದುಂಬಿ ಹರಿಯುತ್ತಿದೆ. ಪ್ರಕೃತಿ ಸೌಂದರ್ಯ ಮಧ್ಯೆ ಇರುವ ಹುಚ್ಚಯ್ಯನ ಕಟ್ಟೆಗೆ ಬ್ರಿಟಿಷರು ಕಿರು ಅಣೆಕಟ್ಟು ಕಟ್ಟಿದ್ದರು. ನಂತರದ ದಿನಗಳಲ್ಲಿ ಮಳೆ ಕಡಿಮೆಯಾಗುತ್ತಿದ್ದಂತೆ ಜಲಾಶಯದ ಅಂದ ಕಡಿಮೆಯಾಗಿತ್ತು.

ಆದರೆ ಕಳೆದ 2 ವಾರದಿಂದ ಹುಚ್ಚಯ್ಯನಕಟ್ಟೆ ಜಲಾಶಯಕ್ಕೆ ಮರುಜೀವ ಬಂದಿದೆ. ಜಲಾಶಯಕ್ಕೆ ಮರುಜೀವ ಬರಲು ಕಾರಣ ಮಹಾ ಮಳೆಯ ಎಫೆಕ್ಟ್ ಮತ್ತು ರಾಜ್ಯ ಸರ್ಕಾರದ ಕರೆಗೆ ನೀರು ತುಂಬಿಸುವ ಮಹತ್ವಪೂರ್ಣ ಯೋಜನೆ. ರಾಜ್ಯ ಸರ್ಕಾರ ಚಾಮರಾಜನಗರ ಜಿಲ್ಲೆಯ 20 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿ ತಂದಿತ್ತು. ಇದರ ಫಲವಾಗಿ ಹಲವು ವರ್ಷಗಳ ನಂತರ ಜಲಾಶಯಕ್ಕೆ ಜೀವಕಳೆ ಬಂದಿದೆ. ಜೊತೆಗೆ ಮಹಾ ಮಳೆಯಿಂದಾಗಿ ಎಡ ಬಿಡದೇ ನೀರು ಹರಿದು ಬರುತ್ತಿದ್ದು, ಹುಚ್ಚಯ್ಯನಕಟ್ಟೆ ಕಿರು ಜಲಾಶಯದ ಸೌಂದರ್ಯವನ್ನ ಹೆಚ್ಚಿಸಿದೆ.

ಈ ಸುಂದರ ಜಲರಾಶಿಯ ರಮಣೀಯತೆ ಬಗ್ಗೆ ಬಾಯಿಂದ ಬಾಯಿಗೆ ಹರಡಿ ದೂರದ ಊರುಗಳಿಂದಲೂ ಪ್ರವಾಸಿಗರ ದಂಡು ಹರಿದುಬರುತ್ತಿದೆ. ಅಚ್ಚ ಹಸಿರಾದ ಪ್ರಕೃತಿ ಸೌಂದರ್ಯದ ಮಧ್ಯೆ ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ಜಲಧಾರೆಗೆ ಪ್ರವಾಸಿಗರು ಫಿದಾ ಆಗಿದ್ದಾರೆ. ಝುಳು ಝುಳು ನಾದಕ್ಕೆ ಪ್ರವಾಸಿಗರು ಮನಸೋತಿದ್ದಾರೆ. ತಣ್ಣನೆಯ ನೀರಿಗೆ ಮೈಯೊಡ್ಡಿ ಪುಳಕಗೊಳ್ಳುತ್ತಿದ್ದಾರೆ. ಇದು ಹೆಸರಾಂತ ಜಲಾಶಯವಾಗಿಲ್ಲದೇ ಇದ್ದರೂ ಪ್ರವಾಸಿಗರು ಮಾತ್ರ ಪ್ರಕೃತಿಯ ರಮಣೀಯತೆಗೆ ಮನಸೋತಿದ್ದಾರೆ.

ಹುಚ್ಚಯ್ಯನಕಟ್ಟೆ ತುಂಬಿ ಧುಮ್ಮಿಕ್ಕುತ್ತಿರುವುದರಿಂದ ಇಲ್ಲಿ ಪ್ರಕೃತಿ ಸೌಂದರ್ಯ ಇಮ್ಮಡಿಗೊಂಡಿದೆ. ಮೈದುಂಬಿ ಧುಮ್ಮಿಕುತ್ತಿರುವ ಹುಚ್ಚಪ್ಪನಕಟ್ಟೆಯಂತು ತನ್ನಲ್ಲಿಗೆ ಭೇಟಿ ನೀಡಿದವರಿಗೆ ಹುಚ್ಚು ಹಿಡಿಸುತ್ತಿದೆ. ಸರ್ಕಾರ ಜಲಾಶಯಕ್ಕೆ ಬರಲು ಉತ್ತಮ ರಸ್ತೆ ಸಂಪರ್ಕ ಕಲ್ಪಿಸುವುದರ ಜೊತೆಗೆ ಭದ್ರತೆ ನೀಡಿ ಪ್ರವಾಸಿ ತಾಣವಾಗಿ ಮಾರ್ಪಡಿಸಿದರೆ, ಮತ್ತೊಂದು ಮಿನಿ ಜಲಪಾತವಾಗಿ ಹುಚ್ಚಯ್ಯನಕಟ್ಟೆ ಜಲಾಶಯ ಪ್ರಸಿದ್ಧಿ ಪಡೆಯಲಿದೆ. ಹೀಗಾಗಿ ಜಲಾಶಯದ ಅಭಿವೃದ್ಧಿಗೆ ಸರ್ಕಾರ ಮುತುವರ್ಜಿ ವಹಿಸಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *