ಅಯೋಧ್ಯೆ ತೀರ್ಪು- ವಿವಾದಾತ್ಮಕ ಹೇಳಿಕೆ ನೀಡದಂತೆ ಸಚಿವರಿಗೆ ಯೋಗಿ ಖಡಕ್ ಸೂಚನೆ

Public TV
1 Min Read

ಲಕ್ನೋ: ಅಯೋಧ್ಯೆ ಪ್ರಕರಣದ ತೀರ್ಪು ಬರುವವರೆಗೆ ಹಾಗೂ ಬಂದ ನಂತರ ಯಾರೊಬ್ಬರೂ ವಿವಾದಾತ್ಮಕ ಹೇಳಿಕೆ ನೀಡಬಾರದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಸಚಿವರಿಗೆ ಖಡಕ್ ಸೂಚನೆ ನೀಡಿದ್ದಾರೆ.

ರಾಮ ಜನ್ಮ ಭೂಮಿ ಹಾಗೂ ಬಾಬರಿ ಮಸೀದಿ ವಿವಾದ ಪ್ರಕರಣ ತೀರ್ಪು ಶೀಘ್ರದಲ್ಲಿಯೇ ಹೊರ ಬೀಳಲಿದೆ. ಇದರ ಬೆನ್ನಲ್ಲೇ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಸಚಿವರು ಹಾಗೂ ಪಕ್ಷದ ಕಾರ್ಯಕರ್ತರಿಗೆ ಈ ಕಿವಿ ಮಾತು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ರಾಮ ಜನ್ಮ ಭೂಮಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಕೂಡದರು ಎಂದು ತಾಕೀತು ಮಾಡಿದ್ದಾರೆ.

ಈ ಕುರಿತು ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ಸಚಿವರೇ ದೃಢಪಡಿಸಿದ್ದು, ಅನಗತ್ಯವಾಗಿ ಪ್ರತಿಕ್ರಿಯಿಸದಂತೆ ಮುಖ್ಯಮಂತ್ರಿ ನಮಗೆ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.

ತೀರ್ಪು ಯಾರ ಪರವಾಗಿ ಬಂದರೂ ಯಾವುದೇ ಸಚಿವರು ವಿವಾದತ್ಮಕ ಹೇಳಿಕೆ ನೀಡಬಾರದು. ಈ ಕುರಿತು ಬಿಜೆಪಿ ದೊಡ್ಡ ಕಾರ್ಯಕ್ರಮದ ಮೂಲಕ ನಿರ್ದೇಶನ ನೀಡಿದೆ ಎಂದು ತಿಳಿದು ಬಂದಿದೆ.

ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಸಹ ಪ್ರಯಾಗರಾಜ್‌ನಲ್ಲಿ ಸೂಕ್ಷ್ಮ ವಿಷಯಗಳ ಕುರಿತು ಯಾವುದೇ ಆಚರಣೆ ನಡೆಸಬಾರದು. ತೀರ್ಪು ಯಾರ ಪರವಾಗಿ ಬಂದರೂ ಸಹ ಈ ಕುರಿತು ಸಂಭ್ರಮಾಚರಣೆ ಮಾಡಬಾರದು. ಇದು ಇನ್ನೊಂದು ಸಮುದಾಯವನ್ನು ಕೆರಳಿಸುತ್ತದೆ. ಹಿಂದೂಗಳು ಹಾಗೂ ಮುಸ್ಲಿಮರು ಸಾಮರಸ್ಯ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ಸಹ ಈ ಕುರಿತು ಸರಣಿ ಸಭೆಗಳನ್ನು ನಡೆಸಿದ್ದು, ಕಾರ್ಯಕರ್ತರು ಈ ಕುರಿತು ಯಾವುದೇ ಹೇಳಿಕೆ ನೀಡದಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

ಅಕ್ಟೋಬರ್ 26ರಂದು ಯೋಗಿ ಆದಿತ್ಯನಾಥ್ ಅವರು ‘ದೀಪೋತ್ಸವ’ಕ್ಕಾಗಿ ಅಯೋಧ್ಯೆಗೆ ತೆರಳಿದಾಗ ಅಲ್ಲಿನ ಜನರನ್ನು ಭೇಟಿಯಾದರು. ಆಗಲೂ ಸಹ ಈ ವಿವಾದದ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಂತೆ ಮನವಿ ಮಾಡಿದ್ದಾರೆ.

ತೀರ್ಪಿನ ನಂತರ ಕೈಗೊಳ್ಳಬೇಕಾದ ಮುಂದಿನ ಕ್ರಮಗಳೇನು ಎಂಬುದರ ಕುರಿತು ಚರ್ಚಿಸಲು ಬಿಜೆಪಿ ಮುಂದಿನ ವಾರ ಸಭೆ ಕರೆದಿದೆ. ಮುಂದಿನ ವಾರ ಸದಸ್ಯರೊಂದಿಗೆ ಸಭೆ ನಡೆಸಿ ಈ ಕುರಿತು ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *