ಕಾಂಗ್ರೆಸ್‌ ಆರೋಪಕ್ಕೆ ಸಚಿವರ ಮೌನ- ಹೈಕಮಾಂಡ್ ಎಚ್ಚರಿಕೆ ಬೆನ್ನಲ್ಲೇ ಪತ್ರಿಕಾ ಪ್ರಕಟಣೆ

Public TV
2 Min Read

ಬೆಂಗಳೂರು: ಆಪರೇಷನ್ ಕಮಲದ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಮಾತನಾಡಿದ್ದಾರೆ ಎನ್ನಲಾದ ವಿಡಿಯೋಗೆ ಕಾಂಗ್ರೆಸ್ ಕಿಡಿಕಾರಿದೆ. ಅಲ್ಲದೇ ನಿಯೋಗದೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿ ದೂರನ್ನು ನೀಡಿದೆ. ಇಷ್ಟೆಲ್ಲಾ ನಡೆದರು ಕೂಡ ರಾಜ್ಯ ಸಚಿವರು ಯಾವುದೇ ಹೇಳಿಕೆಯನ್ನು ನೀಡದೆ ಮೌನ ವಹಿಸಿದ್ದರು. ಸದ್ಯ ಸಚಿವರಿಗೆ ಹೈಕಮಾಂಡ್ ಎಚ್ಚರಿಕೆ ನೀಡಿದ್ದು, ಕೂಡಲೇ ಎಚ್ಚೆತ್ತ ಸಚಿವರು ಪ್ರತಿಕಾ ಹೇಳಿಕೆಯನ್ನು ಪ್ರಕಟಿಸಿ ಕಾಂಗ್ರೆಸ್ ದೂರು ನೀಡಿರುವುದು ಹಾಸ್ಯಾಸ್ಪದ ಎಂದು ಟಾಂಗ್ ನೀಡಿದ್ದಾರೆ.

ಕಾಂಗ್ರೆಸ್ ದೂರಿನ ಕುರಿತು ಡಿಸಿಎಂ ಗೋವಿಂದ ಕಾರಜೋಳ ಹಾಗೂ ಸಚಿವ ಕೆಎಸ್ ಈಶ್ವರಪ್ಪ ಸೇರಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಪ್ರತಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ಪತ್ರಿಕಾ ಹೇಳಿಕೆಯಲ್ಲಿ ಏನಿದೆ?
ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡುರಾವ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ರಾಜಭವನಕ್ಕೆ ಹೋಗಿ, ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರದ ವಿರುದ್ಧ ದೂರು ನೀಡಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ. ಕಾಂಗ್ರೆಸ್‌ಗೆ ಈ ರೀತಿಯಲ್ಲಿ ಸುಳ್ಳು ಆಧಾರ, ಕಳ್ಳ ಆಡಿಯೋ-ವಿಡಿಯೋಗಳನ್ನು ಇಟ್ಟುಕೊಂಡು ರಾಜಕಾರಣ ಮಾಡುವುದು ಹವ್ಯಾಸವಾಗಿದೆ.

ಅನರ್ಹ ಶಾಸಕರ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ಇರುವಾಗ ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ನ್ಯಾಯಾಲಯವನ್ನು ತಪ್ಪು ದಾರಿಗೆ ಎಳೆಯುವುದು ರಾಜಕೀಯ ಷಡ್ಯಂತ್ರ ಮಾತ್ರವಲ್ಲದೆ ನ್ಯಾಯಾಲಯಕ್ಕೂ ಚ್ಯುತಿ ತರುವ ಅತ್ಯಂತ ಕೆಟ್ಟ ವಿಷಯವಾಗಿದೆ. ನಾಡಿನ ಜನರಲ್ಲಿ ಈ ರೀತಿ ಇಲ್ಲ ಸಲ್ಲದ ಗೊಂದಲ ಮಾಡುವುದನ್ನು ಇಲ್ಲಿಗೆ ಬಿಟ್ಟು, ರಾಜಕೀಯ ಪಕ್ಷವಾಗಿ ಜನರ ಕಷ್ಟಗಳಿಗೆ ಸ್ಪಂದನೆ ಮಾಡುವ ಕರ್ತವ್ಯ ಮಾಡಿದರೆ ಒಳ್ಳೆಯದು.

ಸುಳ್ಳು ಹೇಳಿಕೆಗಳನ್ನು ನೀಡುವುದು ಕಾಂಗ್ರೆಸ್ ನಾಯಕರುಗಳ ದಿನನಿತ್ಯದ ಚಾಳಿಯಾಗಿದ್ದು, ಇದು ಅವರ ಭೌದ್ಧಿಕ ದಿವಾಳಿತನವನ್ನು ಎತ್ತಿ ತೋರಿಸುತ್ತದೆ. ಈ ಹಿಂದೆ ಇದೇ ಕಾಂಗ್ರೆಸ್ ನಾಯರು ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ಅವರು ಮಾತನಾಡಿದ ಧ್ವನಿ ಸುರುಳಿ ಬಿಡುಗಡೆ ಮಾಡಿ ಅನಗತ್ಯ ರಾದ್ಧಾಂತ ಮಾಡಿದ್ದು ಈಗ ಇತಿಹಾಸ.

ಅನರ್ಹರ ಮತ್ತು ಧ್ವನಿ ಸುರಳಿ ಬಗ್ಗೆ ಮುಖ್ಯಮಂತ್ರಿಗಳು ಇಂದು ಪತ್ರಿಕೆಗಳಿಗೆ ಮತ್ತು ಮಾಧ್ಯಮಗಳಿಗೆ ಹೇಳಿದ್ದೆನೆಂದರೆ 17 ಶಾಸಕರು ರಾಜೀನಾಮೆ ಕೊಟ್ಟಿರುವುದರಿಂದ ನಮ್ಮ ಸರ್ಕಾರ ಬಂದಿದೆ. ಅವರುಗಳು ರಾಜೀನಾಮೆ ಏಕೆ ಕೊಟ್ಟರು, ಯಾರಿಗಾಗಿ ಕೊಟ್ಟರು ಎಂಬುವುದು ಇಲ್ಲಿ ಅನಾವಶ್ಯಕ. ಈ ವಿಷಯ ಈಗಾಗಲೇ ನ್ಯಾಯಾಲಯದಲ್ಲಿರುವುದು ಎಲ್ಲರಿಗೂ ತಿಳಿದಿದೆ. ನ್ಯಾಯಾಲಯ ತೀರ್ಪು ಬರುವ ಮೊದಲು ಚರ್ಚೆ ಮಾಡುವುದು ಸರಿಯಲ್ಲ ಮತ್ತು ಅನಗತ್ಯ. ಮುಂದಿನ ದಿನಗಳಲ್ಲಿ ಇವರ ಚರ್ಚೆ ಬಗ್ಗೆ ಹೈಕಮಾಂಡ್ ತೀರ್ಮಾನವೇ ಅಂತಿಮ.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಕೀಲರಾಗಿದ್ದು, ಕಾನೂನಿನಲ್ಲಿ ಯಾವುದೇ ಮೌಲ್ಯವಲ್ಲದ ವಿಷಯದ ಬಗ್ಗೆ ಮಾತನಾಡುವುದು ಅವರ ಕಾನೂನಿನ ಜ್ಞಾನದ ಬಗ್ಗೆ ಜನರಿಗೆ ಅನುಮಾನ ಮೂಡಿಸುತ್ತದೆ. ಇಂತಹ ಧ್ವನಿ ಸುರಳಿ ಮತ್ತು ಜನರ ಹೇಳಿಕೆಗಳ ಬಗ್ಗೆ ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪುಗಳನ್ನು ಒಮ್ಮೆ ಅವಲೋಕಿಸಿ ನೋಡಲಿ ಆಗ ಅವರಿಗೆ ಧ್ವನಿ ಸುರಳಿಯ ಕಾನೂನಿನ ಮೌಲ್ಯ ಗೊತ್ತಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *