ಮಸೀದಿಯಲ್ಲಿ ಮೊಳಗಿದ ಕನ್ನಡ ಡಿಂಡಿಮ-ಕನ್ನಡದಲ್ಲೇ ನಡೆಯುತ್ತೆ ಪ್ರಾರ್ಥನೆ, ಪ್ರವಚನ

Public TV
1 Min Read

-ಭಾವೈಕ್ಯತೆಯ ಬೀಡಾಗಿದೆ ಚಿಕ್ಕಕಬ್ಬಾರ ಗ್ರಾಮ

ಹಾವೇರಿ: ಸಾಮಾನ್ಯವಾಗಿ ಮುಸ್ಲಿಮರು ಮಸೀದಿಗಳಲ್ಲಿ ಉರ್ದುವಿನಲ್ಲಿ ಪ್ರಾರ್ಥನೆ ಮಾಡುತ್ತಾರೆ. ಆದರೆ ಹಾವೇರಿಯ ರಟ್ಟಿಹಳ್ಳಿ ತಾಲೂಕಿನ ಚಿಕ್ಕಕಬ್ಬಾರ ಗ್ರಾಮದಲ್ಲಿ ನೂರಾರು ವರ್ಷಗಳಿಂದಲೂ ಕನ್ನಡದಲ್ಲೇ ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.

ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕು ಚಿಕ್ಕಕಬ್ಬಾರ ಗ್ರಾಮದಲ್ಲಿ ಕನ್ನಡದ ನಾದವನ್ನು ಕೇಳಬಹುದು. ಸಮಾರು 150 ವರ್ಷಗಳ ಹಿಂದಿನಿಂದಲೂ ಇಲ್ಲಿನ ಮುಸ್ಲಿಮರು ಕನ್ನಡದಲ್ಲೇ ಪ್ರಾರ್ಥನೆ ಮಾಡಿಕೊಂಡು ಬಂದಿದ್ದಾರೆ. ಪ್ರತಿನಿತ್ಯ ಐದು ಬಾರಿ ನಮಾಜ್‍ಗೆ ಕನ್ನಡದಲ್ಲೇ ಪ್ರಾರ್ಥಿಸುತ್ತಾರೆ. ಗ್ರಾಮದಲ್ಲಿ 1 ಸಾವಿರಕ್ಕೂ ಕುಟುಂಬಗಳಿದ್ದು, ಇದರಲ್ಲಿ 400ಕ್ಕೂ ಹೆಚ್ಚು ಅಧಿಕ ಮುಸ್ಲಿಂ ಕುಟುಂಬಗಳಿವೆ. ಮಸೀದಿ ನಿರ್ಮಾಣಕ್ಕಾಗಿ ಜಾಗವನ್ನು ವೀರನಗೌಡ ಪಾಟೀಲ ಎಂಬವರು ದಾನವಾಗಿ ನೀಡಿದ್ದಾರೆ.

ಮಸೀದಿಯ ಒಳಗೆ-ಹೊರಗೆ ಕನ್ನಡದ ನಾಮಫಲಕಗಳಿವೆ. ಇಲ್ಲಿನ ಮುಸ್ಲಿಮರಿಗೆ ಅಷ್ಟಾಗಿ ಉರ್ದು ಬರಲ್ಲ. ಅಜ್ಜ-ಮುತ್ತಜ್ಜನ ಕಾಲದಿಂದಲೂ ಕನ್ನಡದಲ್ಲೇ ಪ್ರಾರ್ಥನೆ ಮಾಡಲಾಗುತ್ತಿದೆ. ಕನ್ನಡವೇ ನಮ್ಮಮ್ಮ, ಪ್ರವಾದಿಗಳ ಪ್ರವಚನ ಎಲ್ಲರಿಗೂ ಗೊತ್ತಾಗಬೇಕು. ಅಲ್ಲದೆ ನಮ್ಮಲ್ಲಿ ಹಿಂದೂ ಮುಸ್ಲಿಂ ಅನ್ನೋ ಭೇದ-ಭಾವ ಇಲ್ಲ ಎಂದು ಮೌಲ್ವಿ ಸಮೀವುಲ್ಲಾ ಹೇಳುತ್ತಾರೆ.

ಈ ಗ್ರಾಮದ ಮುಸ್ಲಿಮರು ಕೂಡ ಕೃಷಿ ಮಾಡಿಯೇ ಬದುಕು ಸಾಗಿಸ್ತಿದ್ದಾರೆ. ಯುಗಾದಿ, ದೀಪಾವಳಿ, ಗ್ರಾಮದೇವಿಯ ಹಬ್ಬ ಸೇರಿದಂತೆ ಗ್ರಾಮದಲ್ಲಿ ಯಾವ ಹಬ್ಬ ಕಾರ್ಯಕ್ರಮ ನಡೆದರೂ ಹಿಂದೂ ಮುಸ್ಲಿಂಮರು ಸೇರಿ ಭಾವೈಕ್ಯತೆ ಮೆರೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *