ನನ್ನ ಜಾಯಮಾನದಲ್ಲೇ ನಾನು ಭಯಬಿದ್ದಿಲ್ಲ: ಶರತ್ ಬಚ್ಚೇಗೌಡಗೆ ಎಂಟಿಬಿ ಟಾಂಗ್

Public TV
2 Min Read

ಬೆಂಗಳೂರು: ನನ್ನ ಜಾಯಮಾನದಲ್ಲೇ ನಾನು ಭಯಬಿದ್ದಿಲ್ಲ. ಭಯ ಅವರಿಗಿದೆ ಹೊರತು ನನಗಲ್ಲ. ಸಿಎಂ ಯಡಿಯೂರಪ್ಪ ಅವರ ಬಳಿ ಬಚ್ಚೇಗೌಡ, ಶರತ್ ಬಚ್ಚೇಗೌಡ ಬಗ್ಗೆ ನಾನು ಮಾತನಾಡಿಲ್ಲ. ಕಣ್ಣೀರು ಹಾಕೋ ಪರಿಸ್ಥಿತಿ ನನಗೆ ಬಂದಿಲ್ಲ. ಅಪ್ಪ ಮಕ್ಕಳನ್ನು ಸೋಲಿಸಿದ್ದೇನೆ. ಕಣ್ಣೀರು ಅವರು ಹಾಕಬೇಕು ಎಂದು ಶರತ್ ಬಚ್ಚೇಗೌಡ ವಿರುದ್ಧ ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಾಗ್ದಾಳಿ ನಡೆಸಿದ್ದಾರೆ.

ನನಗೆ ಯಾವುದೇ ಭಯವಿಲ್ಲ. ನನಗೆ ಕಣ್ಣೀರು ಹಾಕುವ ಸ್ಥಿತಿ ಬಂದಿಲ್ಲ. ಟಿಕೆಟ್ ಕೊಟ್ಟಿಲ್ಲ ಅಂತ ಅವರು ಕಣ್ಣೀರು ಹಾಕಬೇಕು. ಎಂಟಿಬಿ ಭಯ ಬೀಳಲ್ಲ. ಮೂರು ಬಾರಿ ಎಂಎಲ್‍ಎ ಆಗಿ ಗೆದ್ದಿದ್ದೇನೆ. ಹೀಗಾಗಿ ಯಾವ ಪಕ್ಷದಲ್ಲಿ ನಿಂತುಕೊಂಡರೂ ಭಯ ಬೀಳಲ್ಲ. ನಾವು ಕೆಲಸ ಮಾಡಿದ್ದೇವೆ. ನಮಗೆ ಮತ ಕೇಳೋ ಹಕ್ಕಿದೆ. ಆದರೆ ಇವರು ಕ್ಷೇತ್ರದಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಜನರ ಬಳಿ ಮತ ಕೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಎಂಪಿ ಚುನಾವಣೆಯಲ್ಲಿ ಬಿಜೆಪಿ ಪರ ಮತ ಕೇಳುತ್ತಾರೆ, ವಿಧಾನಸಭಾ ಚುನಾವಣೆ ಪಕ್ಷೇತರ ಅಭ್ಯರ್ಥಿಗಾಗಿ ಮತ ಕೇಳುತ್ತಾರೆ. ಅವರು ಯಾವ ಪಕ್ಷದಿಂದಾದರೂ ಚುನಾವಣೆಗೆ ನಿಲ್ಲಲಿ, ನಾನು ಹೆದರಲ್ಲ. ಇದನ್ನು ಜನ ನೋಡುತ್ತಿದ್ದಾರೆ. ಅವರಿಗೆ ಬುದ್ಧಿ ಕಲಿಸುತ್ತಾರೆ ಎಂದರು.

ಇದೇ ವೇಳೆ ಮಾಧ್ಯಮಗಳ ವಿರುದ್ಧ ಹರಿಹಾಯ್ದು, ಕೆಲ ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಪ್ರಕಟಿಸುತ್ತಿದೆ. ಸುಳ್ಳು ಸುದ್ದಿ ಹಾಕೋ ಮಾಧ್ಯಮಕ್ಕೆ ಮಾನನಷ್ಟ ಮೊಕದ್ದಮೆ ಕೇಸ್ ಹಾಕುತ್ತೇನೆ. ಜನಪ್ರತಿನಿಧಿಗಳು ತಪ್ಪು ಮಾಡಿದರೆ, ಸಾಕ್ಷಿ ಇದ್ದರೆ ಸುದ್ದಿ ಹಾಕಿ ಎಂದರು. ಹಾಗೆಯೇ ನಾನು ಯಾರಿಗೂ ತೊಂದರೆ ಕೊಟ್ಟಿಲ್ಲ. ಮೂವತ್ತು ವರ್ಷ ತೊಂದರೆ ಕೊಟ್ಟಿದ್ದು ಅವರು. ಶಾಂತಿ, ಸಮಾಧಾನದಿಂದ ಜನ ಬದುಕಬೇಕು ಅಂತ ನಾನು ಜೀವನ ಮಾಡುತ್ತಿದ್ದೇನೆ ಎಂದು ಎಂಟಿಬಿ ಹೇಳಿದರು.

ಎಂಟಿಬಿ ಪ್ರತಿನಿಧಿಸುತ್ತಿರುವ ಹೊಸಕೋಟೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಶರತ್ ಬಚ್ಚೇಗೌಡ ತುದಿಗಾಲಲ್ಲಿ ನಿಂತಿದ್ದು ಕಾರ್ಯಕರ್ತರಿಗೆ ಸಂದೇಶ ರವಾನಿಸಿದ್ದಾರೆ. ಹೊಸಕೋಟೆ ತಾಲೂಕಿನ ಮುದ್ದನಹಳ್ಳಿಯಲ್ಲಿ ತಮ್ಮ ಭಾಷಣದ ವೇಳೆ, ತಾಲೂಕಿನಲ್ಲಿ ನಾನು ನಂಬಿರುವ ಜನರ ವಿಶ್ವಾಸಕ್ಕೆ ಕಳಂಕ ಬಾರದಂತೆ ಕೆಲಸ ಮಾಡುತ್ತೇನೆ. ಶತ್ರುಗಳಿಗೂ ಒಳಿತನ್ನು ಬಯಸುವ ಸ್ವಭಾವ ನನ್ನದು. ನನ್ನ ನಿರ್ಧಾರದಿಂದ ಬಚ್ಚೇಗೌಡರಿಗೆ ತೊಂದರೆ ಆಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಹೀಗಾಗಿ ನನ್ನ ತಾಲೂಕಿನ ಜನರ ಸೇವೆಗಾಗಿ ನಾನು ತೆಗೆದುಕೊಂಡಿರುವ ನಿರ್ಧಾರದಿಂದ ಬಚ್ಚೇಗೌಡರಿಗೆ ತೊಂದರೆ ಆಗಬಾರದೆಂದು ಲಾಲ್ ಬಾಗ್ ಮನೆ ಬಿಟ್ಟು ನಮ್ಮ ಹುಟ್ಟೂರಾದ ಬೆಂಡಿಗಾನಹಳ್ಳಿಯಲ್ಲಿ ಮನೆ ಮಾಡಿದ್ದೇನೆ ಎಂದಿದ್ದರು.

Share This Article
Leave a Comment

Leave a Reply

Your email address will not be published. Required fields are marked *