ತುಮಕೂರಿನಲ್ಲಿ ಭೀಕರ ಅಪಘಾತಕ್ಕೆ ಐವರು ಬಲಿ

Public TV
1 Min Read

ತುಮಕೂರು: ಕೊರಟಗೆರೆ ತಾಲೂಕಿನ ಜೆಟ್ಟಿ ಅಗ್ರಹಾರದ ಬಳಿ ಇಂದು ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಖಾಸಗಿ ಬಸ್ ಒಂದು ಪಲ್ಟಿಯಾಗಿ ಐವರು ಸಾವನ್ನಪ್ಪಿದ್ದು, 29 ಮಂದಿ ಗಾಯಗೊಂಡಿದ್ದಾರೆ.

ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ಗೇರಹಳ್ಳಿ ನಿವಾಸಿ ಇಮ್ರಾನ್ (18), ಹೊಳವನಹಳ್ಳಿ ನಿವಾಸಿ ಅಕ್ರಂಪಾಷ (28), ಕೊರಟಗೆರೆ ನಿವಾಸಿ ಮೊಹಮ್ಮದ್ ಸಾಜದ್ (19), ಮಧುಗಿರಿಯ ಪುಲುಮಾಚಿಹಳ್ಳಿ ನಿವಾಸಿ ಶಿವಕುಮಾರ್ (27) ಹಾಗೂ ಕೊಡಿಗೇನಹಳ್ಳಿ ನಿವಾಸಿ ಶ್ರೀನಿವಾಸ್ (40) ಮೃತ ದುರ್ದೈವಿಗಳು. ಗಾಯಗೊಂಡ 29 ಮಂದಿ ಪ್ರಯಾಣಿಕರಿಗೆ ತುಮಕೂರು ಜಿಲ್ಲಾಸ್ಪತ್ರೆ ಹಾಗೂ ಕೊರಟಗೆರೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಪ್ಯಾಸೆಂಜರ್ ಆಟೋ ಒಂದು ಬರಕ ಗ್ರಾಮದಿಂದ ತುಮಕೂರು ಹೆದ್ದಾರಿ ಕಡೆಗೆ ಏಕಾಏಕಿ ನುಗ್ಗಿತ್ತು. ಅತಿ ವೇಗವಾಗಿ ಬರುತ್ತಿದ್ದ ವಿಜಯಲಕ್ಷ್ಮಿ ಬಸ್ ಚಾಲಕ ಆಟೋಗೆ ಡಿಕ್ಕಿಹೊಡೆಯುವುದನ್ನು ತಪ್ಪಿಸಿಸಲು ಯತ್ನಿಸಿದ್ದ. ಆದರೆ ಚಾಲಕನ ನಿಯಂತ್ರಣ ಕಳೆದು ಬಸ್ ಮೂರು ಪಲ್ಟಿಯಾಗಿ ಮುಗುಚಿಬಿದಿದ್ದೆ. ಅಲ್ಲೇ ಇದ್ದ ಗ್ರಾಮಸ್ಥರು ಕೂಡಲೇ ಧಾವಿಸಿ, ಬಸ್‍ನ ಗಾಜು ಒಡೆದು ಪ್ರಯಾಣಿಕರನ್ನ ರಕ್ಷಿಸಿ ಆಸ್ಪತ್ರೆಗೆ ಸಾಗಿಸುವಲ್ಲಿ ಶ್ರಮಿಸಿದ್ದಾರೆ.

ಬಸ್‍ನ ಎಡಬದಿಯಲ್ಲಿದ್ದ ಐವರು ಪ್ರಯಾಣಿಕರಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇನ್ನುಳಿದ ಇಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅಸುನೀಗಿದ್ದಾರೆ. ಮಧುಗಿರಿಯ ಸುಜಾತ ಜಗನ್ನಾಥ್ ಅವರ ಮಾಲೀಕತ್ವದ ಬಸ್ ಇದಾಗಿದ್ದು, ಮಾಲೀಕರ ವಿರುದ್ಧ ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಸ್ ಚಾಲಕ ಮತ್ತು ಕಂಡಕ್ಟರ್ ಪರಾರಿಯಾಗಿದ್ದು, ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜೆಸಿ ಮಾಧುಸ್ವಾಮಿ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಐಜಿ ಶರತ್ ಚಂದ್ರ ಭೇಟಿ ನೀಡಿ, ಘಟನೆಯ ಮಾಹಿತಿ ಪಡೆದಿದ್ದಾರೆ. ಕೊರಟಗೆರೆ ಆಸ್ಪತ್ರೆಗೂ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಜಿ.ಪರಮೇಶ್ವರ್ ಮೃತರ ಕುಟುಂಬಗಳಿಗೆ ಸರ್ಕಾರದಿಂದ ಐದು ಲಕ್ಷ ರೂ. ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *