ಟಿಪ್ಪು ಸ್ವಾತಂತ್ರ್ಯ ಪ್ರೇಮಿ, ಕನ್ನಡದ ಅಭಿಮಾನಿ- ಎಚ್.ಕೆ.ಪಾಟೀಲ್

Public TV
1 Min Read

ಧಾರವಾಡ: ಟಿಪ್ಪು ಸ್ವಾತಂತ್ರ್ಯ ಪ್ರೇಮಿ, ಕನ್ನಡದ ಅಭಿಮಾನಿ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಟಿಪ್ಪುವನ್ನು ಹಾಡಿ ಹೊಗಳಿದ್ದಾರೆ.

ಶಾಲಾ ಪಠ್ಯ ಪುಸ್ತಕದಿಂದ ಟಿಪ್ಪು ಪಠ್ಯವನ್ನು ತೆಗೆಯುವ ಕುರಿತ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ತಂತ್ರಜ್ಞಾನ, ವಿಜ್ಞಾನವನ್ನು ಅಂದಿನ ಸಂದರ್ಭದಲ್ಲೇ ಹೆಚ್ಚು ಅರಿತವರು. ಟಿಪ್ಪು ಇತಿಹಾಸ ಬಹುದೊಡ್ಡದು. ತನ್ನದೆಯಾದ ನಾಡು ಕಟ್ಟಿ ಬೆಳೆಸುವಾಗ ಕೆಲ ವಿವಾದಗಳು ಆಗಿರಬಹುದು. ಆದರೆ ರಾಜಕೀಯ ಕಾರಣಕ್ಕಾಗಿ ಬಿಜೆಪಿ ಟಿಪ್ಪು ಬಗ್ಗೆ ತೆಗೆದುಕೊಂಡ ನಿರ್ಣಯ ಖಂಡನಾರ್ಹ. ಬಿಜೆಪಿ ಸರ್ಕಾರ ವಿವಾದಾತ್ಮಕ ನಿರ್ಣಯ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು. ಕೇವಲ ರಾಜಕೀಯಕ್ಕೆ ಮಾತ್ರ ಇವರ ಚಿಂತನೆ ಆಗಬಾರದು. ಟಿಪ್ಪು ಬಗ್ಗೆ ಓದಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಿನ್ನದ ಮೇಲೆ ಕೇಂದ್ರ ಸರ್ಕಾರ ಹಿಡಿತ ಸಾಧಿಸುವ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಸ್ವಾಗತಾರ್ಹ ನಿರ್ಧಾರ. ಚಿನ್ನ-ಬೆಳ್ಳಿ ಯಾವುದೇ ಇರಲಿ ಅಕ್ರಮವಾಗಿ ಹೊಂದಲೇಬಾರದು. ಆದರೆ ಕಾನೂನುಗಳನ್ನು ಮಾಡಿದ ನಂತರ ತಪ್ಪು ಬಳಕೆ ಆಗಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಉಪಚುನಾವಣೆಯಲ್ಲಿ ಮಹಾರಾಷ್ಟ್ರ, ಹರ್ಯಾಣ ರೀತಿಯಲ್ಲಿ ನಮ್ಮ ರಾಜ್ಯದಲ್ಲೂ ಆಶ್ಚರ್ಯಕರ ಫಲಿತಾಂಶ ಬರುತ್ತದೆ. ಪ್ರವಾಹ ಪೀಡಿತ ಪ್ರದೇಶದ ಜನ ಬಿಜೆಪಿ ಸರ್ಕಾರದ ಬಗ್ಗೆ ಬೇಸತ್ತು ಹೋಗಿದ್ದಾರೆ. ಮಹದಾಯಿ ವಿಷಯದಲ್ಲಿ ಪ್ರಧಾನಿ ಮೋದಿ ವಚನ ಭ್ರಷ್ಟರಾಗಿದ್ದಾರೆ ಎಂದು ಆರೋಪಿಸಿದರು.

ರಾಜ್ಯೋತ್ಸವ ಪ್ರಶಸ್ತಿಯನ್ನು ಹೊರನಾಡು, ಗಡಿನಾಡು ಕನ್ನಡಿಗರ ಹೆಸರಿನಲ್ಲಿ ತಮಗೆ ಯಾರು ಬೇಕೋ ಅವರಿಗೆ ಕೊಟ್ಟಿದ್ದಾರೆ. ಅವರದೇ ಪಕ್ಷದವರು ಇದನ್ನು ಎತ್ತಿ ತೋರಿಸಿದ್ದಾರೆ. ಆಯ್ಕೆ ಸಮಿತಿಯಲ್ಲಿ ಇದ್ದವರೇ ನಾನು ಐದು ಕೊಡಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಆ ಐವರು ಯಾರು ಎನ್ನುವುದನ್ನು ಸಂಸ್ಕೃತಿ ಇಲಾಖೆ ಸಚಿವರು ಸಾರ್ವಜನಿಕವಾಗಿ ಹೇಳಬೇಕು. ಇಲ್ಲದಿದ್ದರೆ ಎಲ್ಲ 60 ಜನ ಪುರಸ್ಕೃತರಿಗೆ ನೋವು ಮಾಡಿದಂತಾಗುತ್ತದೆ. ಪ್ರಶಸ್ತಿ ಪಡೆದವರ ಬಗ್ಗೆ ನಮ್ಮ ಅಗೌರವ ಇಲ್ಲ. ಈ ಕುರಿತು ಸ್ಪಷ್ಟವಾದ ವಿವರಣೆ ಕೊಡಬೇಕು. ಉತ್ತರ ಕರ್ನಾಟಕಕ್ಕೆ ಇನ್ನೂ ಹೆಚ್ಚಿನ ಪ್ರಶಸ್ತಿ ಬರಬೇಕಿತ್ತು ಎಂದರು.

Share This Article
Leave a Comment

Leave a Reply

Your email address will not be published. Required fields are marked *