ಮಾದಪ್ಪನ ಬೆಟ್ಟದಲ್ಲಿ ಹಾಲರುವೆ ಉತ್ಸವದ ಸಂಭ್ರಮ- ಇದರ ವಿಶೇಷ, ಹಿನ್ನೆಲೆಯೇನು?

Public TV
2 Min Read

ಚಾಮರಾಜನಗರ: ದಕ್ಷಿಣ ಭಾರತದ ಪ್ರಮುಖ ಯಾತ್ರಾಸ್ಥಳ ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಅಂಗವಾಗಿ ಹಾಲರುವೆ ಉತ್ಸವ ನಡೆಯಿತು.

ಬೇಡಗಂಪಣ ಜನಾಂಗಕ್ಕೆ ಸೇರಿದ 101 ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳು 9 ಕಿ.ಮೀ ದೂರದ ಹಾಲರೆ ಹಳ್ಳದಿಂದ ಬಲಿಗಾಲಲ್ಲಿ ನೀರು ಹೊತ್ತು ತಂದು ಮಾದಪ್ಪನಿಗೆ ಅಭಿಷೇಕ ಮಾಡುವುದು ಹಾಲರುವೆ ಉತ್ಸವದ ವಿಶೇಷವಾಗಿದೆ.

ಮಲೆಮಹದೇಶ್ವರ ಬೆಟ್ಟದಲ್ಲಿ ಪ್ರತಿ ವರ್ಷ ಮೂರು ದಿನಗಳ ಕಾಲ ದೀಪಾವಳಿ ಜಾತ್ರೆ ನಡೆಯುತ್ತದೆ. ಮಾದಪ್ಪನಿಗೆ ಎಣ್ಣೆಮಜ್ಜನಸೇವೆ, ಹಾಲರವೆ ಉತ್ಸವ ಮೂರನೇ ದಿನ ರಥೋತ್ಸವ ನಡೆಯುವುದು ಇಲ್ಲಿನ ವಿಶೇಷ. ಅದರಲ್ಲೂ ಎರಡನೇ ದಿನ ನಡೆಯುವ ಹಾಲರುವೆ ಉತ್ಸವ ವಿಭಿನ್ನ ಹಾಗೂ ವಿಶೇಷ ರೀತಿಯಲ್ಲಿ ನಡೆಯುತ್ತದೆ.

ಮಹದೇಶ್ವರ ದೇವಸ್ಥಾನಕ್ಕೆ 9 ಕಿ.ಮೀ ದೂರದಲ್ಲಿ ಬೆಟ್ಟಗುಡ್ಡಗಳ ನಡುವೆ ಒಂದು ಹಳ್ಳ ಹರಿಯುತ್ತದೆ. ಮಹದೇಶ್ವರರು ಇಲ್ಲಿ ಕಾರಯ್ಯ ಬಿಲ್ಲಯ್ಯ ಎಂಬ ಬೇಟೆಗಾರರು ತಂದುಕೊಟ್ಟ ಕಾಡೆಮ್ಮೆ ಹಾಲನ್ನು ಆಕಸ್ಮಿಕವಾಗಿ ಚೆಲ್ಲಿದರು ಎಂಬ ಐತಿಹ್ಯವಿದೆ. ಈ ಹಳ್ಳದ ನೀರು ಹಾಲಿನಂತೆ ಬೆಳ್ಳಗೆ ಇರುವ ಕಾರಣ ಇದಕ್ಕೆ ಹಾಲಹಳ್ಳ ಎಂಬ ಹೆಸರು ಬಂದಿದೆ.

ದೀಪಾವಳಿ ಜಾತ್ರೆಯ ಎರಡನೇ ದಿನ ಬೇಡಗಂಪಣ ಜನಾಂಗದ ಹನ್ನೊಂದು ವರ್ಷದೊಳಗಿನ 101 ಹೆಣ್ಣುಮಕ್ಕಳು ಉಪವಾಸವಿದ್ದು ಹಾಲಹಳ್ಳಕ್ಕೆ ಬಂದು ಸ್ನಾನ ಮಾಡಿ ಹಳ್ಳದಲ್ಲಿ ಹರಿಯುವ ನೀರು ಹೊತ್ತು ತರುತ್ತಾರೆ. ಬರಿಗಾಲಲ್ಲಿ 9 ಕಿ.ಮೀ ಬೆಟ್ಟಗುಡ್ಡ ಹತ್ತಿ ಬರುವ ಇವರನ್ನು ಸತ್ತಿಗೆ ಸೂರಿಪಾನಿ, ಮಂಗಳವಾದ್ಯ ಸಮೇತ ದೇವಸ್ಥಾನಕ್ಕೆ ಕರೆದೊಯ್ಯಲಾಗುತ್ತದೆ ಎಂದು ಪ್ರಧಾನ ಅರ್ಚಕ ಕೆ. ಮಹದೇಶ್ ಹೇಳುತ್ತಾರೆ.

ಬೇಡಗಂಪಣ ಬಾಲೆಯರಿಂದ 101 ಕುಂಭದಲ್ಲಿ ತಂದ ನೀರನ್ನು ಮಹದೇಶ್ವರನಿಗೆ ಅಭಿಷೇಕ ಮಾಡಲಾಗುತ್ತದೆ. ಬಳಿಕ ಅಭಿಷೇಕದ ನೀರನ್ನು ಭಕ್ತರಿಗೆ ತೀರ್ಥ ರೂಪದಲ್ಲಿ ನೀಡಲಾಗುತ್ತದೆ. ಈ ತೀರ್ಥ ಸ್ವೀಕರಿಸಲು ಸಾವಿರಾರು ಭಕ್ತರು ಸಾಲುಗಟ್ಟಿ ನಿಂತಿರುತ್ತಾರೆ.

ಮಕ್ಕಳಿಗೆ ಕುಡಿಸಲು ಎದೆ ಹಾಲು ಬಾರದ ತಾಯಂದಿರು ಹರಕೆ ಹೊತ್ತು ಹಾಲರುವೆ ಅಭಿಷೇಕದ ತೀರ್ಥ ಸೇವಿಸಿದರೆ ಹಾಲು ಬರುತ್ತೆ ಎಂಬ ನಂಬಿಕೆಯೂ ಇದೆ. ಹೀಗಾಗಿ ಅಂತಹ ತಾಯಂದಿರು ಸಹ ಹಾಲರುವೆ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಒಟ್ಟಾರೆ ಏಳು ಮಲೆ ಒಡೆಯನಿಗೆ ದೀಪಾವಳಿಯಲ್ಲಿ ಎಲ್ಲ ಅಭಿಷೇಕಗಳಿಗಿಂತ ಹಾಲರುವೆ ಅಭಿಷೇಕ ವಿಶೇಷವಾದುದ್ದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *