ಬಡಮಕ್ಕಳಿಗೆ 5 ಸ್ಟಾರ್ ಹೋಟೆಲಿನಲ್ಲಿ ಊಟ ಕೊಡಿಸಿ ದೀಪಾವಳಿ ಆಚರಿಸಿದ ಪಟ್ವಾರಿ

Public TV
1 Min Read

ಭೋಪಾಲ್: ಮಧ್ಯಪ್ರದೇಶದ ಸಚಿವ ಜಿತು ಪಟ್ವಾರಿ ಅವರು ಭಾನುವಾರ ಮಧ್ಯಾಹ್ನ ಬಡ ಮಕ್ಕಳಿಗೆ 5 ಸ್ಟಾರ್ ಹೋಟೆಲಿನಲ್ಲಿ ಊಟ ಕೊಡಿಸುವ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸಿದರು.

ಬೆಳಕಿನ ಹಬ್ಬವನ್ನು ಎಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅದೇ ರೀತಿ ಸಚಿವ ಜಿತು ಪಟ್ವಾರಿ ಅವರು ಕೂಡ ತಮ್ಮ ಕುಟುಂಬಸ್ಥರೊಂದಿಗೆ ದೀಪಾವಳಿಯನ್ನು ಆಚರಿಸಿ ಸಂಭ್ರಮಿಸಿದರು. ದೀಪಾವಳಿ ಕೇವಲ ತಮ್ಮ ಬದುಕಲ್ಲಿ ಮಾತ್ರವಲ್ಲ ಎಲ್ಲರ ಬದುಕಲ್ಲೂ ಬೆಳಕು ತರಲಿ ಎಂದು ಶುಭಕೋರಿದರು.

ಹಬ್ಬದ ಖುಷಿ ತಮಗೆ ಮಾತ್ರ ಸೀಮೀತವಾಗುವುದು ಬೇಡವೆಂದು ಯೋಚಿಸಿದ ಪಟ್ವಾರಿ, ಬಡಮಕ್ಕಳಿಗೆ ಇಂಧೋರ್‍ನ ಐಷಾರಾಮಿ 5 ಸ್ಟಾರ್ ಹೋಟೆಲಿನಲ್ಲಿ ಔತಣಕೂಟ ಏರ್ಪಡಿಸದರು. ಈ ಮೂಲಕ ಮುಗ್ಧ ಮಕ್ಕಳ ಮೊಗದಲ್ಲಿ ಮಂದಹಾಸ ಮೂಡಿಸಿದರು. ಸಚಿವರ ಈ ಕಾರ್ಯ ಎಲ್ಲರ ಮನಗೆದ್ದಿದ್ದು, ಬಡಮಕ್ಕಳ ಜೊತೆ ದೀಪಾವಳಿಯನ್ನು ಆಚರಿಸಿದ ಸಚಿವರನ್ನು ಜನರು ಹಾಡಿ ಹೊಗಳಿದ್ದಾರೆ.

ಇತ್ತ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರು ಭಾನುವಾರ ಭುವನೇಶ್ವರದಲ್ಲಿರುವ ಎಸ್‍ಓಎಸ್ ಚಿಲ್ಡ್ರನ್ಸ್ ವಿಲೇಜ್ ಎನ್‍ಜಿಓಗೆ ಭೇಟಿ ಕೊಟ್ಟು, ಮಕ್ಕಳೊಂದಿಗೆ ದೀಪಾವಳಿ ಆಚರಿಸಿ ಸಂಭ್ರಮಿಸಿದರು. ತಾವು ಮಾತ್ರವಲ್ಲದೆ ಸಿಎಂ ಕಚೇರಿ, ಮುಖ್ಯ ಕಾರ್ಯದರ್ಶಿ, ಅಭಿವೃದ್ಧಿ ಆಯುಕ್ತರು, ಎಸಿಪಿ ಹೀಗೆ ಅನೇಕ ಅಧಿಕಾರಿಗಳಿಗೆ ಮಕ್ಕಳ ಪಾಲನ ಕೇಂದ್ರಗಳಿಗೆ ಭೇಟಿ ಕೊಟ್ಟು ದೀಪಾವಳಿಯನ್ನು ಆಚರಿಸುವಂತೆ ತಿಳಿಸಿದ್ದರು.

ಹಾಗೆಯೇ ಒಡಿಶಾದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ತಮ್ಮ ತಮ್ಮ ಜಿಲ್ಲೆಗಳಲ್ಲಿ ಇರುವ ಮಕ್ಕಳ ಪಾಲನಾ ಕೇಂದ್ರಗಳಿಗೆ ಭೇಟಿಕೊಟ್ಟು, ಅಲ್ಲಿನ ವ್ಯವಸ್ಥೆ ಸೌಲಭ್ಯಗಳ ಕುರಿತು ತಿಳಿಯುವಂತೆ ಸೂಚಿಸಿದ್ದರು. ಜೊತೆಗೆ ಡಿಜಿಪಿ(ಪೊಲೀಸ್ ಮಹಾನಿರ್ದೇಶಕರು) ಸೇರಿದಂತೆ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಎಸ್‍ಪಿಗಳು ಬೆಟಾಲಿಯನ್‍ಗಳಲ್ಲಿ ಸಮಯ ಕಳೆದು, ಸಿಬ್ಬಂದಿ ಹಾಗೂ ಅವರ ಕುಟುಂಬ ಸದಸ್ಯರೊಂದಿಗೆ ದೀಪಾವಳಿಯನ್ನು ಆಚರಿಸುವಂತೆ ಸೂಚಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *