ಅಯೋಧ್ಯೆಯಲ್ಲಿ 5.51 ಲಕ್ಷ ದೀಪ ಬೆಳಗಿಸಿ ಗಿನ್ನಿಸ್ ರೆಕಾರ್ಡ್

Public TV
1 Min Read

ಅಯೋಧ್ಯೆ: ಬೆಳಕಿನ ಹಬ್ಬ ದೀಪಾವಳಿಯನ್ನು ಎಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಶುಭಸಂಭ್ರಮದ ಹಿನ್ನೆಲೆಯಲ್ಲಿ ಶನಿವಾರ ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಬರೋಬ್ಬರಿ 5.51 ಲಕ್ಷ ದೀಪಗಳನ್ನು ಬೆಳಗಿಸಿ ದೀಪಾವಳಿ ಹಬ್ಬದ ದೀಪೋತ್ಸವವನ್ನು ಆಚರಿಸಲಾಗಿದ್ದು, ಇದು ಗಿನ್ನಿಸ್ ಬುಕ್ ದಾಖಲೆಗೆ ಸಾಕ್ಷಿಯಾಗಿದೆ.

5.51 ಲಕ್ಷ ದೀಪಗಳಲ್ಲಿ, ಸುಮಾರು 4 ಲಕ್ಷಗಳನ್ನು ರಾಮ್ ಪೈಡಿಯಲ್ಲಿ ಬೆಳಗಿಸಲಾಗಿತ್ತು. ಉಳಿದ ದೀಪಗಳನ್ನು ನಗರದ ಇತರೆ ದೇವಾಲಯಗಳಲ್ಲಿ ಬೆಳಗಿಸಲಾಯಿತು. ಅದರಲ್ಲೂ ಅಯೋಧ್ಯೆಯಲ್ಲಿ ರಾರಾಜಿಸಿದ ದೀಪಗಳೆಲ್ಲವೂ ಮಣ್ಣಿನ ದೀಪಗಳಾಗಿರುವುದು ವಿಶೇಷವಾಗಿತ್ತು.

ಅಯೋಧ್ಯೆಯ ವಿಶೇಷ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ್ ಭಾಗಿಯಾಗಿದ್ದರು. ಈ ವೇಳೆ ಶ್ರೀರಾಮ ಆಳ್ವಿಕೆ ನಡೆಸಿದ ತ್ರೇತಾಯುಗದ ಮರುನಿರ್ಮಾಣ ಮಾಡಲಾಗಿತ್ತು. ಶ್ರೀರಾಮ ಹಾಗೂ ಸೀತಾಮಾತೆಯರು ಪುಷ್ಪಕ ವಿಮಾನದ ಮೂಲಕ ಸರಯೂ ನದಿಯ ದಂಡೆ ಮೇಲಿಳಿದ ದೃಶ್ಯಗಳನ್ನು ಪುನರ್ ಸೃಷ್ಟಿಸಲಾಗಿತ್ತು. ಈ ಕಲಾಕೃತಿಗಳು ಭಕ್ತಾದಿಗಳ ಕಣ್ಮನ ಸೆಳೆಯಿತು. ಹಾಗೆಯೇ ದೇಶದ ವಿವಿಧ ರಾಜ್ಯಗಳಿಂದ ಬಂದಿದ್ದ ಕಲಾತಂಡಗಳು ಅಯೋಧ್ಯೆ ದೀಪೋತ್ಸವದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದವು.

ಶ್ರೀರಾಮನ ಜನ್ಮ ಸ್ಥಳ ಅಯೋಧ್ಯೆ ಬಗ್ಗೆ ಸಿಎಂ ಯೋಗಿ ಮಾತನಾಡಿ, ಹಿಂದಿನ ಸಿಎಂಗಳು ಅಯೋಧ್ಯೆಗೆ ಭೇಟಿ ನೀಡದೆ ಕಾರಣಗಳನ್ನು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಆದರೆ ನಾನು ಕಳೆದ ಎರಡೂವರೆ ವರ್ಷಗಳಲ್ಲಿ ಸಾಕಷ್ಟು ಬಾರಿ ಅಯೋಧ್ಯೆಗೆ ಭೇಟಿ ಕೊಟ್ಟಿದ್ದೇನೆ. ಇಲ್ಲಿ ಬಡವ, ಶ್ರೀಮಂತ ಎನ್ನುವ ಭೇದಭಾವವಿಲ್ಲ. ಧರ್ಮ ಭೇದವೂ ಎಲ್ಲ. ಇಲ್ಲಿ ಎಲ್ಲರೂ ಸಮಾನರೆಂದು ಜನರು ಖುಷಿಯಾಗಿ ಬಾಳುತ್ತಿದ್ದಾರೆ ಎಂದು ಖುಷಿಯನ್ನು ಹಂಚಿಕೊಂಡರು.

ಹಾಗೆಯೇ ಈ ಬಾರಿ ಅಯೋಧ್ಯೆಯಲ್ಲಿ ನಡೆಯುತ್ತಿರುವುದು ಮೂರನೇ ದೀಪೋತ್ಸವ. ಕಳೆದ ಬಾರಿ 3,51,000 ದೀಪಗಳನ್ನು ಬೆಳಗಿಸಿ ದಾಖಲೆ ನಿರ್ಮಿಸಲಾಗಿತ್ತು. ಆದರೆ ಈ ಬಾರಿ 4 ಲಕ್ಷಕ್ಕೂ ಅಧಿಕ ದೀಪಗಳನ್ನು ಬೆಳಗಿಸಿ ಹೊಸ ದಾಖಲೆ ಬರೆಯಲಾಗಿದೆ. ಇದನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ಗೂ ಪರಿಗಣಿಸಲಾಗಿದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *