ಮತ್ತೆ ವೀಡಿಯೋ ಸಾಂಗ್‍ನೊಂದಿಗೆ ಬಂದ ಕಪಟ ನಾಟಕ ಪಾತ್ರಧಾರಿ!

Public TV
2 Min Read

ಬೆಂಗಳೂರು:ಕಪಟ ನಾಟಕ ಪಾತ್ರಧಾರಿಯ ದರ್ಶನವಾಗಲು ಕೆಲವೇ ಕೆಲ ದಿನಗಳು ಮಾತ್ರ ಬಾಕಿ ಉಳಿದುಕೊಂಡಿವೆ. ಈ ಕ್ಷಣಗಳನ್ನು ಮತ್ತಷ್ಟು ಕಳೆಗಟ್ಟಿಸುವ ಸಲುವಾಗಿಯೇ ಚಿತ್ರತಂಡ ಮತ್ತೊಂದು ವೀಡಿಯೋ ಸಾಂಗ್ ಅನ್ನು ಬಿಡುಗಡೆಗೊಳಿಸಿದೆ. ಇದು ಈ ಹಿಂದೆಯೇ ಬಿಡುಗಡೆಯಾಗಿ ಭಾರೀ ಕ್ರೇಜ್ ಸೃಷ್ಟಿಸಿದ್ದ ‘ಯಾಕೆ ಅಂತ ಗೊತ್ತಿಲ್ಲ ಕಂಡ್ರಿ, ನನ್ನನ್ನು ನೋಡಿ ನಕ್ಬಿಟ್ಲು ಸುಂದ್ರಿ’ ಎಂಬ ಹಾಡಿನ ವೀಡಿಯೋ. ಈ ಹಾಡು ಆರಂಭದಲ್ಲಿ ಬಿಡುಗಡೆಯಾದಾಗಲೇ ತಾಜಾ ಸಾಹಿತ್ಯ ಮತ್ತು ವಿಶಿಷ್ಟ ಸೌಂಡಿಂಗ್‍ನ ಸಂಗೀತ ಸಂಯೋಜನೆಯ ಮೂಲಕ ಹಿಟ್ ಆಗಿತ್ತು. ಇದೀಗ ಹೊರ ಬಂದಿರೋ ವೀಡಿಯೋ ಸಾಂಗ್ ಕೂಡಾ ಮತ್ತೊಂದು ಸಲ ಪ್ರೇಕ್ಷಕರನ್ನು ತಾಕಿದೆ. ಈ ಮೂಲಕವೇ ಬಿಡುಗಡೆಯ ಕ್ಷಣಗಳನ್ನು ಮತ್ತಷ್ಟು ನಿರೀಕ್ಷೆಗಳಿಂದ ಶೃಂಗರಿಸುವಲ್ಲಿ ಚಿತ್ರ ತಂಡ ಗೆದ್ದಿದೆ.

ಇದು ಕ್ರಿಶ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಚಿತ್ರ. ಇದು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದೇ ಚೆಂದದ ಹಾಡುಗಳ ಮೂಲಕ. ಒಂದಕ್ಕಿಂತ ಒಂದು ಚೆಂದ ಎಂಬಂಥಾ ಹಾಡುಗಳು ವಿಶಿಷ್ಟ ಸಾಹಿತ್ಯದ ಮೂಲಕವೂ ಗಮನ ಸೆಳೆದಿದ್ದವು. ಆ ಸಾಲಿನಲ್ಲಿ ಹಸಿದಾ ಶಿಖನು ಎಂಬ ಹಾಡೂ ಕೂಡಾ ಸೇರಿಕೊಂಡಿದೆ. ಇದೀಗ ಬಂದಿರೋ ಈ ಲಿರಿಕಲ್ ವಿಡಿಯೋ ದ್ಯಷ್ಯಗಳಂತೂ ನೋಡುಗರನ್ನೆಲ್ಲ ಆವರಿಸಿಕೊಳ್ಳುವಂತೆ ಮೂಡಿ ಬಂದಿದೆ. ಇದರಲ್ಲಿ ನಾಯಕ ಬಾಲು ನಾಗೇಂದ್ರ ಮತ್ತು ನಾಯಕಿ ಸಂಗೀತಾ ಭಟ್ ಚೆಂದದ ಲುಕ್ಕುಗಳಲ್ಲಿ ಕಂಗೊಳಿಸಿದ್ದಾರೆ. ಈ ಮೂಲಕ ಕಪಟ ನಾಟಕ ಪಾತ್ರಧಾರಿಯ ಹಾಡುಗಳ ಹವಾ ಅಡೆತಡೆಯಿಲ್ಲದೆ ಮುಂದುವರೆದಿದೆ.

ಇದು ಕ್ರಿಶ್ ನಿರ್ದೇಶನದ ಮೊದಲ ಚಿತ್ರ. ಇದರ ಹಿಂದೆ ಶಶಕ್ತವಾದ ಪ್ರತಿಭಾವಂತರ ತಂಡವಿದೆ. ಈ ಹಿಂದೆ ‘ಕಡ್ಡಿಪುಡಿ’ ಮುಂತಾದ ಚಿತ್ರಗಳಲ್ಲಿ ವಿಲನ್ ರೋಲ್ ಮಾಡುತ್ತಲೇ ‘ಹುಲಿರಾಯ’ ಚಿತ್ರದ ಮೂಲಕ ನಾಯಕನಾಗಿ ಅಬ್ಬರಿಸಿದ್ದ ಬಾಲು ನಾಗೇಂದ್ರ ಈ ಸಿನಿಮಾ ನಾಯಕ. ಆಟೋ ಚಾಲಕನೊಬ್ಬನ ಬದುಕಿನ ಹಿನ್ನೆಲೆಯಲ್ಲಿ ಹಾಡುಗಳಷ್ಟೇ ಡಿಫರೆಂಟಾದ ಕಥೆಯನ್ನು ಕಪಟನಾಟಕ ಪಾತ್ರಧಾರಿಯ ಮೂಲಕ ನಿರ್ದೇಶಕ ಕ್ರಿಶ್ ಹೇಳಲಣಿಯಾಗಿದ್ದಾರೆ. ಸಂಗೀತಾ ಭಟ್ ಬಹುಕಾಲದ ನಂತರ ಕಪಟನಾಟಕ ಪಾತ್ರಧಾರಿಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಚಾಣಕ್ಯ, ಅನಿರುದ್ಧ್ ಶಾಸ್ತ್ರಿ ಮತ್ತು ವೇಣು ಹಸ್ರಾಳಿ ಇದರ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದರೆ, ಪರಮೇಶ್ ಛಾಯಾಗ್ರಹಣ ಮತ್ತು ಶ್ರೀಕಾಂತ್ ಸಂಕಲನ ಈ ಚಿತ್ರಕ್ಕಿದೆ. ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿರೋ ಈ ಚಿತ್ರ ನವೆಂಬರ್ 8ರಂದು ತೆರೆಗಾಣುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *