ಮಹಾರಾಷ್ಟ್ರ, ಹರಿಯಾಣ ವಿಧಾನಸಭೆಗೆ ಮತದಾನ – ಕಮಲ ಕೈ ಹಿಡಿಯುತ್ತಾ ಕಾಶ್ಮೀರ ವಿವಾದ, ಸಾವರ್ಕರ್ ಭಾರತ ರತ್ನ

Public TV
1 Min Read

ಮುಂಬೈ: ಲೋಕಸಭಾ ಚುನಾವಣೆ ಮುಗಿದ ಆರೇ ತಿಂಗಳಿಗೆ ಬಿಜೆಪಿ ಮತ್ತು ವಿಪಕ್ಷಗಳು ಮತ್ತೊಮ್ಮೆ ಮುಖಾಮುಖಿ ಆಗ್ತಿದ್ದು, ಇಂದು ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭೆಗೆ ಮತದಾನ ನಡೆಯಲಿದೆ.

ಮಹಾರಾಷ್ಟ್ರದ 288 ಕ್ಷೇತ್ರಗಳಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ ಮತ್ತು ಎನ್‍ಸಿಪಿ-ಕಾಂಗ್ರೆಸ್ ಮೈತ್ರಿಕೂಟದ ನಡುವೆ ನೇರ ಸ್ಪರ್ಧೆ ಇದ್ದು, ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ನೇತೃತ್ವದಲ್ಲಿ ಕಮಲ ಪಾಳಯ ಎರಡನೇ ಬಾರಿಗೆ ಅಧಿಕಾರ ಹಿಡಿಯುವ ಉಮೇದಿನಲ್ಲಿದೆ.

ನಾಗ್ಪುರ ವಾಯುವ್ಯದಲ್ಲಿ ಸಿಎಂ ಫಡ್ನಾವೀಸ್, ಭೋಕಾರ್‍ನಲ್ಲಿ ಮಾಜಿ ಸಿಎಂ ಅಶೋಕ್ ಚವ್ಹಾಣ್, ಕರಾಡ್‍ನಲ್ಲಿ ಪೃಥ್ವಿರಾಜ್ ಚವ್ಹಾಣ್ ಸೇರಿದಂತೆ 3,237 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹರಿಯಾಣದಲ್ಲಿ 90 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು ಸದ್ಯ ಆಡಳಿತದಲ್ಲಿರುವ ಬಿಜೆಪಿಗೆ ಕಾಂಗ್ರೆಸ್ ಮತ್ತು ಜೆಜೆಪಿ ತೀವ್ರ ಪೈಪೋಟಿ ನೀಡಲಿದೆ. ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ಮತ್ತು ವೀರ್ ಸಾವರ್ಕರ್ ಗೆ ಭಾರತರತ್ನ ಕೊಡುವ ಭರವಸೆ ಎರಡೂ ರಾಜ್ಯಗಳಲ್ಲಿ ಬಿಜೆಪಿಯ ಪ್ರಮುಖ ಚುನಾವಣಾ ಭರವಸೆ ಆಗಿದೆ.

ಇತ್ತ ಉತ್ತರ ಪ್ರದೇಶದ 11, ಗುಜರಾತ್‍ನ 6, ಬಿಹಾರ, ಕೇರಳದ ತಲಾ ಐದು, ಅಸ್ಸಾಂ, ಪಂಜಾಬ್‍ನ ತಲಾ ನಾಲ್ಕು, ಸಿಕ್ಕಿಂನ ಮೂರು, ರಾಜಸ್ಥಾನ, ತಮಿಳುನಾಡು ಮತ್ತು ಹಿಮಾಚಲಪ್ರದೇಶದ ಎರಡು ವಿಧಾನಸಭಾ ಕ್ಷೇತ್ರಗಳು ಸೇರಿ 51 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಮಹಾರಾಷ್ಟ್ರ ಮತ್ತು ಬಿಹಾರದ ಒಂದೊಂದು ಲೋಕಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *