ಪ್ರೇಯಸಿಯಂತೆ ನಟಿಸಿ ದರೋಡೆಕೋರರನ್ನು ಸೆರೆಹಿಡಿದ ಮಹಿಳಾ ಪೇದೆ

Public TV
2 Min Read

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಹಲವು ದಿನಗಳಿಂದ ಮೂರು ಮಂದಿ ದರೋಡೆಕೋರರ ತಂಡವೊಂದು ಪೊಲೀಸರಿಗೆ ತಲೆನೋವು ತಂದಿಟ್ಟಿತ್ತು. ಆದರೆ ಈ ಚಾಲಾಕಿ ದರೋಡೆಕೋರರನ್ನು ಮಹಿಳಾ ಪೊಲೀಸ್ ಪೇದೆ ಜಾಣತಣದಿಂದ ಸೆರೆಹಿಡಿದಿದ್ದಾರೆ.

ಬಂಧಿತ ದರೋಡೆಕೋರರನ್ನು ಸೋಮ್‍ವೀರ್(23), ಮನೋಜ್(26) ಮತ್ತು ಪ್ರದೀಪ್(21) ಎಂದು ಗುರುತಿಸಲಾಗಿದೆ. ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಚಾಲಾಕಿ ಖದೀಮರು ಖಾಕಿ ಪಡೆಗೆ ಚಳ್ಳೆ ಹಣ್ಣು ತಿನ್ನಿಸಿ ಎಸ್ಕೇಪ್ ಆಗುತ್ತಿದ್ದರು. ಈ ತಂಡ ಹಲವು ದರೋಡೆ ಪ್ರಕರಣ ಮತ್ತು ಕಾರು ಕಳವು ಪ್ರಕರಣಗಳಲ್ಲಿ ಭಾಗಿಯಾಗಿತ್ತು. ಈ ಖತರ್ನಾಕ್ ತಂಡವನ್ನು ಬಂಧಿಸಲು ಪೊಲೀಸರು ಆ ತಂಡದ ಓರ್ವನ ಪ್ರೇಯಸಿಯ ಸಹಾಯ ಪಡೆದು ಬಲೆ ಬೀಸಿದ್ದರು. ಈ ಮೂಲಕ ಕೊನೆಗೂ ದರೋಡೆಕೋರರನ್ನು ಸೋಮವಾರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಕ್ಟೋಬರ್ ಮೊದಲ ವಾರದಲ್ಲಿ ಈ ಮೂವರು ಆರೋಪಿಗಳು ಪೀರಾಗರ್ಹಿಯಿಂದ ಮಂಡ್ಕಾ ಪ್ರದೇಶಕ್ಕೆ ಕ್ಯಾಬ್ ಬುಕ್ ಮಾಡಿಕೊಂಡು ಸಂಚರಿಸುತ್ತಿದ್ದರು. ಆದರೆ ಮಾರ್ಗ ಮಧ್ಯೆ ಕ್ಯಾಬ್ ಚಾಲಕನಿಗೆ ಹೆದರಿಸಿ, ಬಿಯರ್ ಬಾಟಲಿಯಿಂದ ಹೊಡೆದು, ಆತನನ್ನು ರಸ್ತೆ ಮಧ್ಯೆ ಬಿಟ್ಟು ಕಾರಿನೊಂದಿಗೆ ಪರಾರಿಯಾಗಿದ್ದರು. ಈ ಸಂಬಂಧ ಕ್ಯಾಬ್ ಚಾಲಕ ಪೊಲೀಸರಿಗೆ ದೂರು ನೀಡಿದ್ದನು. ಅಲ್ಲದೆ ಅ. 10ರಂದು ಅದೇ ಕಾರಿನಲ್ಲಿ ಹರಿಯಾಣ ತಲುಪಿದ್ದ ಆರೋಪಿಗಳು, ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡು ಹಣ ಕೊಡದೆ ಎಸ್ಕೇಪ್ ಆಗಿದ್ದರು. ಈ ಬಗ್ಗೆ ಕೂಡ ದೆಹಲಿ ಪೊಲೀಸರಿಗೆ ಮಾಹಿತಿ ಬಂದಿತ್ತು. ಇತ್ತ ಕ್ಯಾಬ್ ಚಾಲಕನಿಗೆ ಪೊಲೀಸ್ ಠಾಣೆಯಲ್ಲಿದ್ದ ಕಾರುಗಳ್ಳರ ಫೋಟೋವನ್ನು ತೋರಿಸಿದಾಗ ಸೋಮ್‍ವೀರ್ ನನ್ನು ಗುರುತಿಸಿದ್ದನು. ಆ ಬಳಿಕ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು.

ಸಿಕ್ಕಿಬಿದ್ದಿದ್ದು ಹೇಗೆ?
ಕೆಲ ದಿನಗಳ ಹಿಂದೆ ಆರೋಪಿ ಸೋಮ್‍ವೀರ್ ನ ಫೋನ್ ಕರೆ ವಿವರಗಳನ್ನು ಪೊಲೀಸರು ಪಡೆದು, ಆತನ ಪ್ರೇಯಸಿಯ ಬಗ್ಗೆ ತಿಳಿದು ಆಕೆಯನ್ನು ಭೇಟಿ ಮಾಡಿದ್ದರು. ಬಳಿಕ ಆರೋಪಿಗಳನ್ನು ಬಂಧಿಸುವುದಕ್ಕೆ ಸಹಾಯ ಕೋರಿದ್ದರು. ಅದಕ್ಕೊಪ್ಪಿದ ಯುವತಿ ಪೊಲೀಸರಿಗೆ ಸಹಾಯ ಮಾಡಿದಳು. ಆಕೆಯ ಮೊಬೈಲ್ ಫೋನ್‍ನನ್ನು ಮಹಿಳಾ ಪೊಲೀಸ್ ಪೇದೆಗೆ ನೀಡಿದ್ದಳು. ಈ ಫೋನ್ ಮೂಲಕ ಪೇದೆ ಸೋಮ್‍ವೀರ್ ನನ್ನು ಸಂಪರ್ಕಿಸಿ ಆತನ ಪ್ರೇಯಸಿಯಂತೆ ಪ್ರೇಮದ ನಾಟಕವಾಡಿದ್ದರು.

ಈ ಬಗ್ಗೆ ನಿಜಾಂಶ ಅರಿಯದ ಸೋಮ್‍ವಿರ್ ನಿಜವಾಗಿಯೂ ಪ್ರೇಯಸಿಯೇ ಸಂದೇಶ, ಕರೆ ಮಾಡುತ್ತಿದ್ದಾಳೆ ಅಂದುಕೊಂಡಿದ್ದ. ಹೀಗೆ ಕೆಲವು ದಿನಗಳು ಕಳೆದ ಬಳಿಕ ತನ್ನನ್ನು ಭೇಟಿಯಾಗುವಂತೆ ಆತನಿಗೆ ಹೇಳಿ ಕರೆಸಿಕೊಂಡರು. ದೆಹಲಿಗೆ ಬಂದರೆ ಪೊಲೀಸರು ಹಿಡಿಯುತ್ತಾರೆ ಎಂಬ ಭಯದ ನಡುವೆಯೂ ಪ್ರೇಯಸಿ ಕರೆದಳು ಎಂದು ಸೋಮ್‍ವೀರ್ ಭೇಟಿ ಮಾಡಲು ಬಂದು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಆತನನ್ನು ವಿಚಾರಣೆ ನಡೆಸುತ್ತಿದ್ದಾಗ ಆರೋಪಿ ತನ್ನ ಜೊತೆ ದರೋಡೆ ಮಾಡುತ್ತಿದ್ದ ಮತ್ತಿಬ್ಬರು ಆರೋಪಿಗಳ ಬಗ್ಗೆ ಬಾಯ್ಬಿಟ್ಟಿದ್ದಾನೆ. ಬಳಿಕ ಅವರನ್ನು ಕೂಡ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *