ಹೈದರಾಬಾದ್: 14 ವರ್ಷದ ಮಗಳ ಮೇಲೆ ನಿರಂತರ ಅತ್ಯಾಚಾರ ಮಾಡಿ ವಿಕೃತಿ ಮೆರೆದಿದ್ದ ಕಾಮುಕ ತಂದೆಗೆ ಹೈದರಾಬಾದ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಹೈದರಾಬಾದ್‍ನ 42 ವರ್ಷದ ಆಟೋ ರಿಕ್ಷಾ ಚಾಲಕನೊಬ್ಬ 2011ರಿಂದ ಮಗಳ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದನು. ಈ ಪ್ರಕರಣ ಬೆಳಕಿಗೆ ಬಂದ ಬಳಿಕ ಆತನನ್ನು ಪೊಲೀಸರು ಬಂಧಿಸಿ, ಆರೋಪಿ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಮೆಟ್ರೊಪಾಲಿಟನ್ ನ್ಯಾಯಾಲಯದ ನ್ಯಾಯಾಧೀಶರಾದ ಸುನೀತಾ ಕುಂಚಲಾ ಅವರು ವಿಚಾರಣೆ ನಡೆಸಿದ್ದು, ತಂದೆಯ ಮೇಲಿದ್ದ ಆರೋಪ ಸಾಬೀತಾಗಿದೆ. ಆದ್ದರಿಂದ ನ್ಯಾಯಾಲಯ ಕಾಮುಕ ತಂದೆಗೆ ಜೀವಾವಧಿ ಶಿಕ್ಷೆ ವಿಧಿಸಿ, ಮಹತ್ವದ ಆದೇಶ ಹೊರಡಿಸಿದ್ದಾರೆ.
ಹಾಗೆಯೇ ದೋಷಿಗೆ ಐಪಿಸಿ ಸೆಕ್ಷನ್ 506 ಕಾಯ್ದೆ ಅಡಿ 2 ವರ್ಷ ಕಠಿಣ ಶಿಕ್ಷೆ ಮತ್ತು 3 ಸಾವಿರ ರೂಪಾಯಿ ದಂಡವನ್ನು ವಿಧಿಸಲಾಗಿದೆ. ಜೊತೆಗೆ ಜೀವಾವಧಿ ಶಿಕ್ಷೆಯೂ ಏಕಕಾಲದಲ್ಲಿಯೇ ಮುಂದುವರೆಯಲಿದೆ ಎಂದು ನ್ಯಾಯಾಲಯ ತಿಳಿಸಿದೆ.
2016ರ ನವೆಂಬರ್ ನಲ್ಲಿ ಸಂತ್ರಸ್ತೆ ತಂದೆಯ ಕ್ರೌರ್ಯದ ಬಗ್ಗೆ ತನ್ನ ಶಾಲಾ ಶಿಕ್ಷಕಿಯರ ಬಳಿ ಹೇಳಿದ್ದಳು. ಇದನ್ನು ಕೇಳಿ ಶಿಕ್ಷಕಿಯರು ದಂಗಾಗಿ ಬಾಲಕಿಯ ತಾಯಿಯನ್ನು ಶಾಲೆಗೆ ಬರಹೇಳಿ ಈ ಬಗ್ಗೆ ಕೇಳಿದಾಗ, 2011ರಿಂದಲೂ ಪತಿ ತನ್ನ ಮಗಳ ಮೇಲೆ ವಿಕೃತಿ ಮೆರೆಯುತ್ತಿದ್ದಾನೆ. ನಾನು ಮನೆಯಲ್ಲಿ ಇಲ್ಲದ ವೇಳೆ ನಿರಂತರ ಅತ್ಯಾಚಾರ ಎಸಗುತ್ತಾ ಬಂದಿರುವ ಬಗ್ಗೆ ಹೇಳಿದ್ದರು. ಆಗ ಸತ್ಯಾಂಶ ಬಯಲಿಗೆ ಬಂದಿತ್ತು. ಬಳಿಕ ಬಾಲಕಿಯ ತಾಯಿ ತನ್ನ ಗಂಡನ ವಿರುದ್ಧ ಹೈದರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.