ಪ್ರವಾಹ ಪರಿಹಾರ ಪಡೆಯದ ಸಂತ್ರಸ್ತರು ದಡ್ಡರು- ಸಂಸದ ಬಸವರಾಜು

Public TV
1 Min Read

ತುಮಕೂರು: ನೆರೆ ಪರಿಹಾರಕ್ಕಾಗಿ ಸಂತ್ರಸ್ತರೇ ಮುಂದೆ ಬರುತ್ತಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿಕೆಯ ಬೆನ್ನಲ್ಲೇ ಇದೀಗ ಸಂಸದ ಸಂಸದ ಜಿ.ಎಸ್ ಬಸವರಾಜು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೆರೆ ಸಂತ್ರಸ್ತರಲ್ಲಿ ಮೂರು ವರ್ಗಗಳಿವೆ. ಇಂಟೆಲೆಕ್ಚುವಲ್(ಬೌದ್ಧಿಕ), ವಿದ್ಯಾವಂತರು ಮತ್ತು ದಡ್ಡರು. ಈ ದಡ್ಡರಿಗೆ ಏನೂ ಗೊತ್ತಿರಲ್ಲ. ಅವರಿಗೆ ಯಾರೂ ಗೈಡ್ ಮಾಡಲ್ಲ. ಅಂತವರು ಪರಿಹಾರ ಪಡೆಯಲು ಬರುತ್ತಿಲ್ಲ. ಅವರನ್ನು ನಾವೇ ಕರೆದುಕೊಂಡು ಬಂದು ಅರ್ಜಿ ಹಾಕಿಸಬೇಕು ಎನ್ನುವುದು ಅವರ ಮನಸ್ಸಿನಲ್ಲಿದೆ ಎಂದು ಸಂಸದರು ತಿಳಿಸಿದ್ದಾರೆ.

ಕೇಂದ್ರದಿಂದ ನೆರೆಪರಿಹಾರ ಬಂದಿರೋದು ಪ್ರಾಥಮಿಕ ಹಂತ ಅಷ್ಟೇ. ಮುಂದಿನ ದಿನದಲ್ಲಿ ಹೆಚ್ಚಿನ ಪರಿಹಾರ ಬರಲಿದೆ. ಹಿಂದಿನ ಸರ್ಕಾರ ರಾಜ್ಯದ ಬೊಕ್ಕಸ ಖಾಲಿ ಮಾಡಿ ಹೋಗಿತ್ತು. ಈಗ ಯಡಿಯೂರಪ್ಪ ಬಂದ ಮೇಲೆ ಖಜಾನೆ ಸಮತೋಲನ ಕಾಪಾಡಿಕೊಂಡಿದೆ. ಅತ್ಯುತ್ತಮ ರೀತಿಯಲ್ಲಿ ತೆರಿಗೆ ಹಣ ಬರುತ್ತಿದೆ ಎಂದರು. ಇದನ್ನೂ ಓದಿ: ನೆರೆ ಪರಿಹಾರ ಪಡೆಯಲು ಸಂತ್ರಸ್ತರೆ ಮುಂದೆ ಬರುತ್ತಿಲ್ಲ: ಮಾಧುಸ್ವಾಮಿ

ಇದೇ ವೇಳೆ ಬಸವರಾಜು ಅವರನ್ನ ಕಳ್ಳ ಮತ್ತು ಅಯೋಗ್ಯ ಎಂದು ಕರೆದಿದ್ದ ಎಸ್.ಆರ್ ಶ್ರೀನಿವಾಸ್ ಮೇಲೆ ಹರಿಹಾಯ್ದ ಸಂಸದರು, ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ ಗೆ ತಲೆಕೆಟ್ಟಿದೆ. ಅವರಿಗೆ ಬುದ್ಧಿ ಭ್ರಮಣೆಯಾಗಿದೆ. ಹಾಗಾಗಿ ದೇವೇಗೌಡರಿಗೂ ಅವರು ಬೈತಾರೆ. ನಾನು ಅವರಷ್ಟು ಕೀಳುಮಟ್ಟಕ್ಕೆ ಇಳಿದು ಮಾತನಾಡಲ್ಲ. ನಾನು ಏನು ಸಹಾಯ ಮಾಡಿದ್ದೇನೆಂದು ಶ್ರೀನಿವಾಸ್ ಅವರ ಅಪ್ಪನಿಗೂ ಗೊತ್ತು. ಆಗ ಇವನು ಚಡ್ಡಿ ಹಾಕಿಕೊಂಡು ತಿರುಗುತ್ತಿದ್ದನು. ಆತ ನನ್ನ ಮುಂದೆ ಬಂದು ಮಾತನಾಡಲಿ ಎಂದು ಕಿಡಿಕಾರಿದರು.

ಫೋನ್ ಕದ್ದಾಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನನ್ನ ಫೋನ್ ಕೂಡ ಕದ್ದಾಲಿಕೆ ಆಗಿದೆ. ಕುಮಾರಸ್ವಾಮಿ ಅವಧಿಯಲ್ಲಿ ಸ್ವಾಮೀಜಿ, ರಾಜಕಾರಣಿಗಳು ಲೋಕಸಭಾ ಚುನಾವಣೆಯ ಅಭ್ಯರ್ಥಿಗಳು ಹೀಗೆ ಎಲ್ಲರ ಎಲ್ಲಾ ಫೋನ್ ಕದ್ದಾಲಿಕೆ ಮಾಡಿದ್ದಾರೆ. ಏನಕ್ಕೆ ಮಾಡಿದ್ದಾರೆ ಎಂದು ಅವರನ್ನೇ ಹೋಗಿ ಕೇಳಿ. ನಾನು ಎಚ್‍ಡಿಕೆ ತಂದೆಯ ಎದುರಾಳಿಯಾಗಿದ್ದಕ್ಕೆ ಲೋಕಸಭಾ ಎಲೆಕ್ಷನ್ ಸಮಯದಲ್ಲಿ ನನ್ನ ಫೋನ್ ಕೂಡ ಕದ್ದಾಲಿಕೆ ಮಾಡಿದ್ದಾರೆ ಎಂದು ಸಿಡಿಮಿಡಿಗೊಂಡರು.

Share This Article
Leave a Comment

Leave a Reply

Your email address will not be published. Required fields are marked *