ಬಿಹಾರ ಪ್ರವಾಹದ ಬಗ್ಗೆ ಮಿಡಿದ 52 ಇಂಚಿನ ಮೋದಿ ಎದೆ, ರಾಜ್ಯದ ನೆರೆ ಸಂತ್ರಸ್ತರ ಬಗ್ಗೆ ಕಲ್ಲುಬಂಡೆಯಾಗಿದ್ಯಾಕೆ – ಸಿದ್ದು ಪ್ರಶ್ನೆ

Public TV
3 Min Read

ರಾಯಚೂರು: ಬಿಹಾರದಲ್ಲಿನ ಪ್ರವಾಹಕ್ಕೆ ಪ್ರಧಾನಿ ಅನುಕಂಪ ವ್ಯಕ್ತಪಡಿಸುತ್ತಾರೆ. ಕರ್ನಾಟಕದ ವಿಚಾರದಲ್ಲಿ ಈವರೆಗೂ ಒಂದೂ ಮಾತನಾಡಿಲ್ಲ. ಇದು ಕೇಂದ್ರ ಸರ್ಕಾರದ ತಾರತಮ್ಯಕ್ಕೆ ಸಾಕ್ಷಿ ಎಂದು ಕೇಂದ್ರದ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ನಗರದ ಯರಮರಸ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರದಲ್ಲಿ ಪ್ರವಾಹಕ್ಕೆ ತಕ್ಷಣವೇ ಸ್ಪಂದಿಸಿದ್ದಾರೆ. ಆದರೆ ಕರ್ನಾಟಕದ ಬಗ್ಗೆ ಅನುಕಂಪ ವ್ಯಕ್ತಪಡಿಸಿಲ್ಲ. ಬೆಂಗಳೂರಿಗೆ ಆಗಮಿಸಿದರೂ ರಾಜ್ಯದ ಪ್ರವಾಹದ ಬಗ್ಗೆ ಮಾತನಾಡಲಿಲ್ಲ. ತಾರತಮ್ಯ ಮಾಡುತ್ತಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಈ ಕುರಿತು ಟ್ವೀಟ್ ಸಹ ಮಾಡಿರುವ ಅವರು, ಬಿಹಾರ ಪ್ರವಾಹದ ಬಗ್ಗೆ ಮಿಡಿದ 52 ಇಂಚಿನ ಪ್ರಧಾನಿ ನರೇಂದ್ರ ಮೋದಿ ಎದೆ, ಕರ್ನಾಟಕದ ನೆರೆ ಸಂತ್ರಸ್ತರ ಬಗ್ಗೆ ಕಲ್ಲುಬಂಡೆ ಆಗಿದ್ದು ಯಾಕೆ? ಇದು 25 ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ ಕರ್ನಾಟಕದ ಬಗ್ಗೆ ತಾತ್ಸಾರವೇ? ಇಲ್ಲ ಮುಖ್ಯಮಂತ್ರಿ ಯಡಿಯೂರಪ್ಪನವರ ಬಗ್ಗೆ ದ್ವೇಷವೇ ಎಂದು ಕೇಳಿದರು.

ಬಿಹಾರ್‍ದಲ್ಲಿ ಪ್ರವಾಹದ ಕುರಿತು ಸ್ವೀಟ್ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಪ್ರವಾಹದ ಕುರಿತು ಮಾತನಾಡಿದ್ದೇನೆ. ರಕ್ಷಣಾ ತಂಡಗಳು ಸ್ಥಳೀಯ ಆಡಳಿತ ಮಂಡಳಿ ಸಹಾಯದೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಕೇಂದ್ರ ಸರ್ಕಾರ ಅಗತ್ಯ ನೆರವು ನೀಡಲು ಸಿದ್ಧವಿದೆ ಎಂದು ತಿಳಿಸಿದ್ದರು.

ವಿಧಾನಸಭಾ ಅಧಿವೇಶನದಲ್ಲಿ ಚರ್ಚೆಯ ಮೊದಲ ವಿಷಯವೇ ನೆರೆ ಹಾಗೂ ಬರ ಆಗಬೇಕು. ಯಾವುದೇ ಕಾರಣಕ್ಕೂ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಉತ್ತರಿಸುವುದರಿಂದ ತಪ್ಪಿಸಿಕೊಳ್ಳಲು ಬಿಡುವುದಿಲ್ಲ. ಅಧಿವೇಶನವನ್ನು ಮೂರು ದಿನಗಳು ಮಾತ್ರ ನಡೆಸುತ್ತೇವೆ ಎನ್ನುತ್ತಿದ್ದಾರೆ. ಮೂರು ದಿನದಲ್ಲಿ ಚರ್ಚೆ ಮಾಡಲು ಸಾಧ್ಯವಿಲ್ಲ. ಆದರೆ ಚರ್ಚೆಯ ಮೊದಲ ಪ್ರಾಶಸ್ತ್ಯ ನೆರೆ ಹಾಗೂ ಬರಕ್ಕೆ ಕೊಡಬೇಕು. ಬೆಳಗಾವಿಯಲ್ಲಿ ಅಧಿವೇಶನ ನಡೆಸಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದೇನೆ. ಆದರೆ ಯಾವ ಪ್ರತಿಕ್ರಿಯೆಯೂ ಬಂದಿಲ್ಲ. ಬಡವರ ಕಾರ್ಯಕ್ರಮಗಳನ್ನು ನಿಲ್ಲಿಸಿದರೆ ಬಡವರಿಗೆ ಅನ್ಯಾಯವಾಗುತ್ತದೆ. ರೈತರು, ಬಡವರು, ಸಾಮಾನ್ಯ ಜನರಿಗೆ ಅನುಕೂಲವಾಗುವ ಯಾವುದೇ ಕಾರ್ಯಕ್ರಮ ನಿಲ್ಲಿಸಬಾರದು. ಬಾಕಿ ಬರಬೇಕಿರುವುದನ್ನು ಸಂಗ್ರಹಿಸಿ, ಹೆಚ್ಚು ತೆರಿಗೆ ಸಂಗ್ರಹಿಸಿ ದುಡ್ಡು ಇಲ್ಲ ಎಂದು ಹೇಳಬೇಡಿ ಎಂದು ಸಲಹೆ ನೀಡಿದರು.

ನಿನ್ನೆ ರಾಯಚೂರು ಜಿಲ್ಲೆಯ ನೆರೆಪೀಡಿತ ಪ್ರದೇಶಗಳ ವೀಕ್ಷಣೆ ಮಾಡಿದ್ದೇನೆ. ನೆರೆ ಸಂತ್ರಸ್ತ ಜನರಿಗೆ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಿದ್ದಾರೆ. ದವಸ ಧಾನ್ಯ, ಮನೆ ಖರ್ಚಿಗೆ ಸರ್ಕಾರದಿಂದ 10 ಸಾವಿರ ರೂ. ಕೊಡಲಾಗಿದೆ. ಆದರೆ ಅದು ಸರಿಯಾಗಿ ತಲುಪಿಲ್ಲ. ಸಮೀಕ್ಷೆ ಸರಿಯಾಗಿ ನಡೆದಿಲ್ಲ ಆದ್ದರಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ. ಇಡೀ ಗ್ರಾಮವನ್ನೇ ಸ್ಥಳಾಂತರ ಮಾಡಬೇಕು ಎಂದು ಜನ ಕೇಳಿಕೊಳ್ಳುತ್ತಿದ್ದಾರೆ. ಸ್ಥಳಾಂತರ ಮಾಡಿದರೆ ಅನುಕೂಲವಾಗುವಂತ ಮನೆ ಕಟ್ಟಿಕೊಡಬೇಕು. ಸರ್ಕಾರ ನೆರೆ ಸಂತ್ರಸ್ತರ ಕಷ್ಟಗಳಿಗೆ ಗಮನಕೊಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಸರ್ಕಾರದ ನಡವಳಿಕೆ ನೊಡಿದರೆ ಇದಕ್ಕೆ ಯಾವುದೇ ಪ್ರಾಶಸ್ತ್ಯ ಕೊಡುತ್ತಿಲ್ಲ ಎನಿಸುತ್ತಿದೆ. ಬೆಳೆ ಹಾನಿ ಇದುವರೆಗೆ ಒಂದು ರೂಪಾಯಿ ಕೊಡುತ್ತಿಲ್ಲ. ಸಂಪೂರ್ಣ, ಭಾಗಶಃ ಬಿದ್ದ ಮನೆಗೆ ಪರಿಹಾರ ಕೊಡುತ್ತೇವೆ ಅಂದಿದ್ದಾರೆ ಇದುವರೆಗೆ ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.

ಯಡಿಯೂರಪ್ಪನವರು ಯಾವತ್ತೂ ಸಾಲಮನ್ನಾ ಪರವಾಗಿಯೇ ಇಲ್ಲ. ಹಿಂದೆ ಸಾಲಮನ್ನಾಗೆ ದುಡ್ಡು ಎಲ್ಲಿ ಪ್ರಿಂಟ್ ಮಾಡಿ ತರಲಿ ಅಂದಿದ್ದರು. ಈಗಲೂ ಸಾಲಮನ್ನಾ ಮಾಡುವ ಬಗ್ಗೆ ಬಿಎಸ್‍ವೈಗೆ ಆಸಕ್ತಿಯಿಲ್ಲ. ಎಚ್‍ಡಿಕೆ ಸಾಲಮನ್ನಾಕ್ಕೆ ಆರ್ಥಿಕ ಇಲಾಖೆಯಿಂದ 12 ಸಾವಿರ ಕೋಟಿ ಬಿಡುಗಡೆಯಾಗಿದೆ. ಆದರೆ ಅದೂ ತಲುಪಿಲ್ಲ ಎನ್ನುವ ರೀತಿ ಕೆಲವರು ಮಾತನಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ಬಿಜೆಪಿಯಿಂದ ಟಿಕೆಟ್ ಕೊಡುತ್ತಾರೆ ಎಂಬ ಉದ್ದೇಶದಿಂದಲೇ ಅನರ್ಹ ಶಾಸಕರು ರಾಜಿನಾಮೆ ಕೊಟ್ಟು ಹೋಗಿದ್ದರು. ನಾನು ಪ್ರಮಾಣ ವಚನ ಸ್ವೀಕರಿಸುವಾಗಲೇ ನೀವು ಪ್ರಮಾಣ ವಚನ ಸ್ವೀಕರಿಸುತ್ತೀರಿ ಎಂದು ಯಡಿಯೂರಪ್ಪ ಅನರ್ಹರಿಗೆ ಭರವಸೆ ನೀಡಿದ್ದರು. ನಾವು 10 ಶೆಡ್ಯೂಲ್ ಪ್ರಕಾರ ಕಾನೂನು ರೀತಿಯಲ್ಲಿ ಅನರ್ಹ ಮಾಡಿದ್ದೇವೆ. ಯಾವುದೋ ಪಕ್ಷದಿಂದ ಗೆದ್ದು ಯಾವುದೋ ಪಕ್ಷಕ್ಕೆ ಹೋದರೆ, ರಾಜಿನಾಮೆಗೆ ವೈಯಕ್ತಿಕ ಕಾರಣ ಅಲ್ಲ. ಬಿಜೆಪಿಗೆ ಹೋಗಲೆಂದೇ ರಾಜೀನಾಮೆ ಕೊಟ್ಟಿದ್ದಾರೆ. ಎಲ್ಲರೂ ಒಟ್ಟಿಗೆ ಹೋಗಿ ರಾಜೀನಾಮೆ ಕೊಡಲು ಎಲ್ಲರಿಗೂ ಕಷ್ಟ ಇತ್ತೆ? ರಮೇಶ್ ಕುಮಾರ್ ತೀರ್ಮಾನವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿಯಲಿದೆ ಎಂದು ಅಂದುಕೊಂಡಿದ್ದೇನೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *