ಉತ್ತರ ಭಾರತದಲ್ಲಿ ಮೇಘಸ್ಫೋಟ – ದಾಖಲೆ ಮಳೆಗೆ ಬಿಹಾರ ತತ್ತರ

Public TV
2 Min Read

ಪಾಟ್ನಾ: ಕಳೆದ 4 ದಿನಗಳಿಂದ ಆರ್ಭಟಿಸುತ್ತಿರುವ ಮಳೆರಾಯ ಬಿಹಾರ, ಉತ್ತರಪ್ರದೇಶವನ್ನು ಭಾಗಶಃ ಮುಳುಗಿಸಿದ್ದಾನೆ. ಅತ್ತ ಮಹಾರಾಷ್ಟ್ರ, ತೆಲಂಗಾಣದಲ್ಲೂ ಮಳೆ ಸುರಿಯುತ್ತಿದ್ದು, ಉತ್ತರ ಭಾರತದಲ್ಲಿ ವರುಣನ ರೌದ್ರಾವತಾರ ಕಂಡು ಜನರು ಹೈರಾಣಾಗಿದ್ದಾರೆ.

ಸಾಮಾನ್ಯವಾಗಿ ಜೂನ್ 1ರಿಂದ ಪ್ರಾರಂಭವಾಗುವ ಮುಂಗಾರು ಸೆಪ್ಟೆಂಬರ್ 30ಕ್ಕೆ ಮುಗಿಯಬೇಕು. ಆದರೆ ಈ ಬಾರಿ ಸೆಪ್ಟೆಂಬರ್ ಕಳೆದರೂ ಮುಂಗಾರು ಅಬ್ಬರಿಸುವಂತಿದೆ. ಸಾಮಾನ್ಯವಾಗಿ ಸೆಪ್ಟೆಂಬರ್ 29ರವರೆಗೆ 877 ಎಂಎಂನಷ್ಟು ಬರುತ್ತದೆ. ಆದರೆ ಈ ಬಾರಿ ಬರೋಬ್ಬರಿ 956.1 ಎಂಎಂನಷ್ಟು ದಾಖಲೆ ಮಳೆ ಉತ್ತರ ಭಾರತೀಯರನ್ನು ಹೈರಾಣಗಿಸಿದೆ. ಹವಾಮಾನ ಇಲಾಖೆ ಕೂಡ ಇನ್ನೂ 3-4 ದಿನ ಮಳೆ ಆಗಲಿದೆ ಎಂದು ಮುನ್ಸೂಚನೆ ಕೊಟ್ಟಿದೆ.

ಮಳೆಯಿಂದಾಗಿ ಉತ್ತರ ಪ್ರದೇಶದಲ್ಲಿ 86 ಹಾಗೂ ಬಿಹಾರದಲ್ಲಿ 35ಕ್ಕೂ ಹೆಚ್ಚು ಮಂದಿ ಜಲಸಮಾಧಿಯಾಗಿದ್ದಾರೆ. ಬಿಹಾರ ರಾಜಧಾನಿ ಪಾಟ್ನಾ ಹಾಗೂ ನೆರೆಯ ಪಾಟಲೀಪುತ್ರ ನಗರಗಳು ದ್ವೀಪಗಳಂತಾಗಿವೆ. 4 ದಿನಗಳಿಂದ ಶಾಲಾ-ಕಾಲೇಜು, ಆಸ್ಪತ್ರೆಗಳ ಐಸಿಯು ಜಲಾವೃತವಾಗಿದೆ. ಮನೆಗೆ ನೀರಿ ನುಗ್ಗಿರುವ ಕಾರಣಕ್ಕೆ ಪ್ರಸಿದ್ಧ ಗಾಯಕಿ ಶ್ರದ್ಧಾ ಸಿಂಗ್ ಮತ್ತು ಕುಟುಂಬ ಪಾಟ್ನಾದಲ್ಲಿರುವ ಮನೆಯಲ್ಲಿ ಸಿಲುಕಿ ಕೊಂಡಿದ್ದರು. ಈ ಬಗ್ಗೆ ಶ್ರದ್ಧಾ ಸಿಂಗ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದು, ಈ ಪೋಸ್ಟ್ ಬಳಿಕ ಎನ್‍ಡಿಆರ್‍ಎಫ್ ತಂಡ ಶ್ರದ್ಧಾ ಸಿಂಗ್ ಕುಟುಂಬಸ್ಥರನ್ನು ರಕ್ಷಣೆ ಮಾಡಿದೆ. ಜೊತೆಗೆ ಪಾಟ್ನಾದ ರಾಜೇಂದ್ರ ನಗರದ ನಿವಾಸದಲ್ಲಿ ಸಿಲುಕೊಂಡಿದ್ದ ಡಿಸಿಎಂ ಸುಶೀಲ್ ಮೋದಿ ಮತ್ತವರ ಕುಟುಂಬಸ್ಥರನ್ನು ಕೂಡ ಎನ್‍ಡಿಆರ್‍ಎಫ್ ತಂಡ ರಕ್ಷಿಸಿದೆ.

ಪ್ರವಾಹ ಹಿನ್ನೆಲೆ ಬಿಹಾರ ಸಿಎಂ ನಿತೀಶ್ ಕುಮಾರ್ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಪ್ರಧಾನಿ ಮೋದಿ ಕೂಡ ಸಿಎಂ ನಿತೀಶ್ ಜೊತೆ ಮಾತನಾಡಿ, ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಕೇಂದ್ರದಿಂದ ಅಗತ್ಯ ನೆರವು ನೀಡುವುದಾಗಿ ತಿಳಿಸಿದ್ದಾರೆ. ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಸೂಚಿಸಿದ್ದಾರೆ.

ಉತ್ತರದಲ್ಲಿ ಆಬ್ಬರಿಸುತ್ತಿರುವ ವರುಣದೇವ 102 ವರ್ಷಗಳ ತನ್ನ ದಾಖಲೆಯನ್ನೇ ಸರಿಗಟ್ಟಿ, ಮತ್ತೊಂದು ಹೊಸ ದಾಖಲೆ ಸೃಷ್ಟಿಸುವತ್ತ ದಾಪುಗಾಲು ಇಟ್ಟಿದ್ದಾನೆ. ಆದರೆ ವರುಣದ ಮುನಿಸಿಗೆ ಸಿಲುಕಿದ ಜನರು ಮಾತ್ರ ಸಾಕಪ್ಪ ಸಾಕು, ನಿಲ್ಲಿಸು ನಿನ್ನ ಪ್ರತಾಪ ಎನ್ನುತ್ತಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *