ಬಿಬಿಎಂಪಿ ಮೇಯರ್ ಚುನಾವಣೆ – ತಡರಾತ್ರಿಯವರೆಗೂ ಬಿಜೆಪಿ ಸಭೆ

Public TV
1 Min Read

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ಇಂದು ನಡೆಯಲಿದ್ದೂ, ಬಿಜೆಪಿಯಿಂದ ಯಾರು ಸ್ಪರ್ಧಿಸುತ್ತಾರೆ ಎನ್ನುವುದು ಇನ್ನೂ ಅಂತಿಮವಾಗಿಲ್ಲ.

ಸೋಮವಾರ ತಡರಾತ್ರಿಯವರೆಗೆ ಬಿಜೆಪಿ ನಾಯಕರು ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಮೇಯರ್ ಸ್ಥಾನಕ್ಕೆ ಸರ್ವಜ್ಞನಗರದ ಪದ್ಮನಾಭರೆಡ್ಡಿ, ಶಾಂತಿನಗರ ಗೌತಮ್ ಹೆಸರು ಕೇಳಿ ಬಂದಿದ್ದರೆ ಉಪಮೇಯರ್ ಸ್ಥಾನಕ್ಕೆ ವಿಜಯನಗರದ ಮಹಾಲಕ್ಷ್ಮಿ, ಬೊಮ್ಮನಹಳ್ಳಿಯ ಗುರುಮೂರ್ತಿ ಹೆಸರು ಕೇಳಿಬಂದಿದೆ. ಒಟ್ಟು ನಾಲ್ಕು ಮಂದಿಯಲ್ಲಿ ಅಂತಿಮವಾಗಿ ಯಾರು ಆಯ್ಕೆ ಆಗಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ.

ಮೋದಿ, ಅಮಿತ್ ಶಾ ಅಧಿಕಾರದ ಸಮಯದಲ್ಲಿ ಹಲವು ಬಾರಿ ಕೊನೆ ಕ್ಷಣದಲ್ಲಿ ಹೊಸ ವ್ಯಕ್ತಿಗೆ ಮಣೆ ಹಾಕಿದ್ದು ಇದೆ. ಹೀಗಾಗಿ ಕೊನೆ ಕ್ಷಣದಲ್ಲಿ ಮೇಯರ್, ಉಪಮೇಯರ್ ಹುದ್ದೆ ಬೇರೆ ವ್ಯಕ್ತಿ ಆಯ್ಕೆಯಾದರೂ ಅಚ್ಚರಿ ಇಲ್ಲ ಎನ್ನುವ ಮಾತು ಕೇಳಿಬಂದಿದೆ.

ಇಂದು ಬೆಳಗ್ಗೆ 8.30ರಿಂದ ನಾಮಪತ್ರ ಸಲ್ಲಿಕೆಯಾಗಲಿದ್ದು, ಈ ಬಾರಿಯೂ ಬಿಬಿಎಂಪಿಯಲ್ಲಿ ಮೈತ್ರಿಯನ್ನು ಮುಂದುವರಿಸಿಕೊಂಡು ಹೋಗಲು ಕಾಂಗ್ರೆಸ್ ಹಾಗೂ ಜೆಡಿಎಸ್ ನಿರ್ಧರಿಸಿದೆ. ಮೈತ್ರಿ ಅನ್ವಯ ಕಾಂಗ್ರೆಸ್‍ಗೆ ಮೇಯರ್ ಸ್ಥಾನ ಹಾಗೂ ಜೆಡಿಎಸ್‍ಗೆ ಉಪ ಮೇಯರ್ ಸ್ಥಾನ ಹಂಚಿಕೆ ಮಾಡಿಕೊಳ್ಳಲಾಗಿದೆ.

ಮೈತ್ರಿ ಅನ್ವಯ ಕಾಂಗ್ರೆಸ್, ಜೆಡಿಎಸ್‍ನಿಂದ ಮೇಯರ್ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ದತ್ತಾತ್ರೇಯ ವಾರ್ಡ್ ಸದಸ್ಯರಾದ ಸತ್ಯನಾರಾಯಣರನ್ನು ಆಯ್ಕೆ ಮಾಡಲಾಗಿದ್ದು, ಕೆಪಿಸಿಸಿ ಅಧಿಕೃತವಾಗಿ ಪ್ರಕಟಿಸಿದೆ. ಮಂಗಳವಾರ ಸತ್ಯನಾರಾಯಣ ಅವರು ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ.  ಇದನ್ನೂ ಓದಿ: ಸಿಎಂ ಮಾತಿಗೂ ಡೋಂಟ್ ಕೇರ್ – ಸರ್ಕಾರಕ್ಕೆ ಸವಾಲೆಸೆದ ನಿಷ್ಠಾವಂತ ಅಧಿಕಾರಿ

ಇತ್ತ ಉಪಮೇಯರ್ ಸ್ಥಾನಕ್ಕೆ ಅಂತಿಮ ಕ್ಷಣದಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಬದಲಿಸಿದ್ದು, ಶಕ್ತಿ ಗಣಪತಿ ವಾರ್ಡ್ 74ರ ಪಾಲಿಕೆ ಸದಸ್ಯೆ ಗಂಗಮ್ಮ ರಾಜಣ್ಣ ಅವರಿಗೆ ನಾಮಪತ್ರ ಸಲ್ಲಿಕೆ ಮಾಡಲು ಜೆಡಿಎಸ್ ವರಿಷ್ಠರು ಸೂಚನೆ ನೀಡಿದ್ದಾರೆ. ಇದಕ್ಕೂ ಮುನ್ನ ವಾರ್ಡ್ 32 ಕಾವಲಭೈರಸಂದ್ರ ಪಾಲಿಕೆ ಸದಸ್ಯೆ ನೇತ್ರಾ ನಾರಾಯಣ ಅಥವಾ ಇಮ್ರಾನ್ ಪಾಷಾ ಅವರಿಗೆ ಉಪಮೇಯರ್ ಸ್ಥಾನಕ್ಕೆ ಸ್ಪರ್ಧೆ ನಡೆಸಲು ಅವಕಾಶ ನೀಡಲಾಗುತ್ತದೆ ಎನ್ನಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *