ನಾನು ಒಂದು ರೀತಿ ತಂತಿಮೇಲೆ ನಡೆಯುತ್ತಿದ್ದೇನೆ: ಬಿಎಸ್‍ವೈ

Public TV
2 Min Read

– ಎಚ್‍ಡಿಕೆ ನಂತರ ಬಿಎಸ್‍ವೈ ಭಾವನಾತ್ಮಕ ಹೇಳಿಕೆ

ದಾವಣಗೆರೆ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಅಧಿಕಾರದಲ್ಲಿದ್ದಾಗ ನಾನು ಸಾಂದರ್ಭಿಕ ಶಿಶು, ವಿಷಕಂಠ ಎಂದು ಹೇಳಿದ್ದರು, ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಹ ಅದೇ ರೀತಿಯ ಹೇಳಿಕೆ ನೀಡಿದ್ದಾರೆ.

ನಗರದ ಹೈಸ್ಕೂಲ್ ಮೈದಾನದಲ್ಲಿ ನಡೆದ ದಸರಾ ಧರ್ಮ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಒಂದು ರೀತಿ ತಂತಿ ಮೇಲೆ ನಡೆಯುತ್ತಿದ್ದೇನೆ, ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕಾದಲ್ಲಿ ಹತ್ತಾರು ಸಲ ವಿಚಾರ ಮಾಡಬೇಕಾಗಿದೆ. ನಿರ್ಧಾರ ತೆಗೆದುಕೊಳ್ಳುವಾಗ ಅದು ಬೇರೆ ಸಮಾಜದ ಮೇಲೆ ಹೇಗೆ ಪರಿಣಾಮ ಎನಾಗುತ್ತದೆ ಎಂಬುದನ್ನೂ ಚಿಂತನೆ ಮಾಡಬೇಕಾಗಿದೆ ಎಂದು ಭಾವನಾತ್ಮಕವಾಗಿ ನುಡಿದಿದ್ದಾರೆ.

ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಅನುಭಮಂಟಪದ ನಿರ್ಮಾಣಕ್ಕೆ 50 ಕೋಟಿ ರೂಪಾಯಿ ನೀಡಲಾಗಿದೆ. ಆದರೆ ಈಗ ರಾಜ್ಯದಲ್ಲಿ ಭೀಕರ ಪ್ರವಾಹವಾಗಿದ್ದು, ಇನ್ನೊಂದೆಡೆ ಬರಗಾಲವಿದೆ. ಅವರ ಸಂಕಷ್ಟಕ್ಕೆ ಸ್ಪಂದಿಸುವುದು ಅನಿವಾರ್ಯವಾಗಿದೆ. ಬೇರೆ ಯೋಜನೆಗಳಿಗೆ ಹಣ ನೀಡಿದರೆ ಅದು ಅಪರಾಧವಾಗುತ್ತದೆ. ಯಾರೇ ಅನುದಾನ ಕೇಳಿದರೂ ಮುಂದಿನ ಬಜೆಟ್ ನಂತರ ಅನುದಾನ ನೀಡಲಾಗುವುದು ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಘೋಷಣೆ ಮಾಡಿದಾಗ ನನಗೆ ಸನ್ಮಾನಿಸಿದರು. ಇದೀಗ ಅಭಿನವ ರೇಣುಕ ಮಂದಿರ ಕಟ್ಟಲು 2 ಕೋಟಿ ರೂ. ಕೊಡುತ್ತೇನೆ ನೀವು ಒಂದು ಕೋಟಿ ರೂ. ಜೋಡಿಸಿ ಅಭಿನವ ರೇಣುಕ ಮಂದಿರ ನಿರ್ಮಿಸೋಣ. ಎಲ್ಲ ಸಮಾಜದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮ ವಹಿಸುತ್ತೇನೆ. ಈ ಸಂದರ್ಭದಲ್ಲಿ ಹಣಕಾಸು ಪರಿಸ್ಥಿತಿ ಸರಿ ಇಲ್ಲ. ಕಾರ್ಯಕ್ರಮಗಳಿಗೆ ಹಣ ಕೊಟ್ಟರೆ ಅಕ್ಷ್ಯಮ್ಯ ಅಪರಾಧವಾಗುತ್ತದೆ. ಮುಂದಿನ ಬಜೆಟ್‍ನಲ್ಲಿ ದಸರಾ ಮಾದರಿ ಸಮಾರಂಭಗಳಿಗೆ ಹಣ ನೀಡಲು 250 ಕೋಟಿ ರೂ.ಗಳನ್ನು ಮೀಸಲಿಡುತ್ತೇನೆ ಎಂದು ವಿವರಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಜಿಎಂಐಟಿ ಹೆಲಿಪ್ಯಾಡ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಟೋಬರ್ 3ರಂದು ಸಚಿವ ಸಂಪುಟ ಸಭೆ ಇದೆ, ಇದಾದ ಬಳಿಕ 6ನೇ ತಾರೀಖು ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡುತ್ತೇನೆ. ಕೇಂದ್ರ ಸರ್ಕಾರದಿಂದ ಸಾಕಷ್ಟು ಹಣ ಬಿಡುಗಡೆ ನಿರೀಕ್ಷೆ ಇದೆ. ನಮ್ಮಲ್ಲೇ ಇರುವ ಅನುದಾನದಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಜಿಲ್ಲೆ ವಿಭಜನೆ ಕುರಿತು ಪ್ರತಿಕ್ರಿಯಿಸಿದ ಅವರು, 10-11 ತಾಲೂಕುಗಳಿರುವ ದೊಡ್ಡ ಜಿಲ್ಲೆಗಳಾಗಿವೆ. ಅಯಾ ತಾಲೂಕಿನ ಜನಪ್ರತಿಧಿಗಳು ಹಾಗೂ ಅಧಿಕಾರಿಗಳನ್ನು ಕರೆದು ಈ ಕುರಿತು ಚರ್ಚೆ ಮಾಡುತ್ತೇನೆ. ಈಗಾಗಲೇ ಹತ್ತು ಹನ್ನೊಂದು ಜಿಲ್ಲೆಗಳ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಕೆಲವೆಡೆ ಹತ್ತು ಹಲವು ತಾಲೂಕುಗಳಿವೆ ಸಣ್ಣ ಜಿಲ್ಲೆಯಾದರೆ ಹೆಚ್ಚು ಉಪಯೋಗವಾಗುತ್ತದೆ ಎಂಬುದು ಸಾಮಾನ್ಯ ವಾಡಿಕೆ. ಆಯಾ ಕ್ಷೇತ್ರದ ಶಾಸಕರನ್ನು ಕರೆದು ಮಾತನಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಆಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಪತ್ರ ಬರೆದಿದ್ದಾರೆ. ನೆರೆ ಹಾವಳಿಯಿಂದ ಅಧಿವೇಶನವನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಬಾರಿ ಬೆಂಗಳೂರಿನಲ್ಲಿ ಅಧಿವೇಶನ ಕರೆದಿದ್ದೇವೆ. ಮುಂದಿನ ಬಾರಿ ಬೆಳಗಾವಿಯಲ್ಲಿ ಅಧಿವೇಶನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

33 ವರ್ಷಗಳ ಬಳಿಕ ದಾವಣಗೆರೆ ನಗರದಲ್ಲಿ ದಸರಾ ಧರ್ಮ ಸಮ್ಮೇಳನ ನಡೆಯುತ್ತಿದೆ. ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹಲವು ಗಣ್ಯರು ಭಾಗಿಯಾಗಿದ್ದರು. ದಸರಾ ಕಾರ್ಯಕ್ರಮದಲ್ಲಿ ರಾಜ ಪೋಷಾಕಿನಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *