ಸಚಿವ ಸಂಪುಟ ವಿಸ್ತರಣೆಗೆ ಸಿಎಂ ಒಲವು -ಗ್ರೀನ್ ಸಿಗ್ನಲ್ ಕೊಡ್ತಾರಾ ಅನರ್ಹರು?

Public TV
2 Min Read

ಬೆಂಗಳೂರು: ರಾಜ್ಯದಲ್ಲಿ ಅರ್ಧ ಸರ್ಕಾರವಿದ್ದು, ಪೂರ್ಣ ಸರ್ಕಾರ ಮಾಡಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೊರಟಿದ್ದಾರೆ. ಆದರೆ ಬಿಎಸ್‍ವೈರ ಈ ನಿರ್ಧಾರಕ್ಕೆ ಹೈಕಮಾಂಡ್ ಹಾಗೂ ಅನರ್ಹ ಶಾಸಕರು ಒಪ್ಪಿಗೆ ನೀಡುತ್ತಾರಾ ಎಂಬ ಅನುಮಾನ ಮೂಡಿದೆ.

ಸದ್ಯ ಸಿಎಂ ಬಿಎಸ್‍ವೈ ಅವರ ಬಳಿ 46 ಖಾತೆಗಳಲ್ಲಿ 23 ಖಾತೆಗಳಿದ್ದು, ಇದರಲ್ಲಿ ಪ್ರಮುಖ ಖಾತೆಗಳನ್ನು ಹಂಚಿಕೆ ಮಾಡಲು ಚಿಂತನೆ ನಡೆಸಿದ್ದಾರೆ. ಆ ಮೂಲಕ ರಾಜ್ಯದ ಅಭಿವೃದ್ಧಿ ಕಾರ್ಯಗಳ ವೇಗವನ್ನು ಹೆಚ್ಚಿಸುವ ಚಿಂತನೆಯನ್ನು ಬಿಎಸ್‍ವೈ ಹೊಂದಿದ್ದು, ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಸಿಕ್ಕಿದರೆ 1 ವಾರದಲ್ಲೇ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ.

ಸಂಪುಟ ವಿಸ್ತರಣೆಗೆ ಇಬ್ಬರಿಂದಲೂ ಅನುಮತಿ ಸಿಗದಿದ್ದರೆ ಸಿಎಂ ಬಿಎಸ್‍ವೈ ‘ಪ್ಲಾನ್ ಬಿ’ ಕೂಡ ಸಿದ್ಧಪಡಿಸಿಕೊಂಡಿದ್ದಾರೆ. ಇದರಂತೆ ಹೈಕಮಾಂಡ್, ಅನರ್ಹ ಶಾಸಕರ ಒಪ್ಪಿಗೆ ಸಿಗದಿದ್ದರೆ ‘ಪ್ಲಾನ್ ಬಿ’ ಅಳವಡಿಕೊಳ್ಳಲು ಮುಂದಾಗಲಿದ್ದಾರೆ. ಈಗಾಗಲೇ ಸಂಪುಟ ಸಚಿವ ಖಾತೆ ಪಡೆದಿರುವ ಸಚಿವರಿಗೆ ಹೆಚ್ಚುವರಿ ಜವಾಬ್ದಾರಿಯನ್ನು ಷರತ್ತಿನ ಅನ್ವಯ ನೀಡಲು ಬಿಎಸ್‍ವೈ ‘ಪ್ಲಾನ್ ಬಿ’ ಅಡಿ ನಿರ್ಧರಿಸಿದ್ದಾರೆ. ಪ್ರಮುಖ ಖಾತೆಗಳಾದ ಜಲಸಂಪನ್ಮೂಲ, ಇಂಧನ, ಕೃಷಿ, ಬೆಂಗಳೂರು ಅಭಿವೃದ್ಧಿ ಖಾತೆಗಳು ಸಿಎಂ ಅವರ ಬಳಿಯೇ ಇದ್ದು, ಈ ಖಾತೆಗಳನ್ನು ಹೆಚ್ಚುವರಿ ಜವಾಬ್ದಾರಿಯಾಗಿ ನೀಡಲು ಸಿಎಂ ಚಿಂತನೆ ನಡೆಸಿದ್ದಾರೆ. ಅನರ್ಹ ಚುನಾವಣೆಗೆ ಸ್ಪರ್ಧೆ ಮಾಡಿ ಗೆದ್ದು ಬಂದ ಸಂದರ್ಭದಲ್ಲಿ ಖಾತೆಗಳನ್ನು ಬಿಟ್ಟು ಕೊಡುವ ಷರತ್ತಿನ ಅನ್ವಯ ‘ಪ್ಲಾನ್ ಬಿ’ ಜಾರಿ ಮಾಡಲಿದ್ದಾರೆ ಎನ್ನಲಾಗಿದೆ.

ಹೆಚ್ಚುವರಿ ಖಾತೆ ಯಾರಿಗೆ ಸಿಗುತ್ತೆ?
ಸಂಪುಟ ವಿಸ್ತರಣೆಯಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿರುವ ಸಿಎಂ ಬಿಎಸ್‍ವೈ, ಸದ್ಯ ತಮ್ಮ ಬಳಿ ಇರುವ 23 ಖಾತೆಗಳನ್ನು ಹಂಚಿಕೆ ಮಾಡಿದರೆ ಪ್ರಮುಖ ಖಾತೆಗಳ ಹೆಚ್ಚಿನ ಜವಾಬ್ದಾರಿ ಸಚಿವರಿಗೆ ಸಿಗಲಿದೆ ಎಂಬ ಅಂಶವೂ ಪ್ರಮುಖವಾಗಿದೆ. ಈಗಾಗಲೇ ಕಾನೂನು ಮತ್ತು ಸಂಸದೀಯ ವ್ಯವಹಾರ ಸೇರಿದಂತೆ ಸಣ್ಣ ನೀರಾವರಿ ಖಾತೆ ಹೊಂದಿರುವ ಸಚಿವ ಮಾಧುಸ್ವಾಮಿ ಅವರಿಗೆ ಹೆಚ್ಚುವರಿಯಾಗಿ ಕೃಷಿ ಖಾತೆ ಸಿಗುವ ಸಾಧ್ಯತೆ ಇದೆ. ಸಿ.ಸಿ.ಪಾಟೀಲ್- ಅರಣ್ಯ ಖಾತೆ, ಆರ್.ಅಶೋಕ್- ರೇಷ್ಮೆ ಖಾತೆ, ಸಹಕಾರ ಖಾತೆ, ವಿ.ಸೋಮಣ್ಣ-ನಗರಾಭಿವೃದ್ಧಿ ಖಾತೆ, ಕೆಎಸ್ ಈಶ್ವರಪ್ಪ- ಪೌರಾಡಳಿತ ಖಾತೆ, ಬಸವರಾಜ ಬೊಮ್ಮಾಯಿ- ಜಲಸಂಪನ್ಮೂಲ ಖಾತೆ, ಶ್ರೀರಾಮುಲು- ಕಾರ್ಮಿಕ ಖಾತೆ, ಲಕ್ಷ್ಮಣ ಸವದಿ- ಸಕ್ಕರೆ ಖಾತೆ, ಸುರೇಶ್ ಕುಮಾರ್- ಕೌಶಲ್ಯಾಭಿವೃದ್ಧಿ ಖಾತೆ ಹಾಗೂ ಪ್ರಭು ಚವ್ಹಾಣ್-ಯುವಜನ ಸೇವೆ ಮತ್ತು ಕ್ರೀಡೆ ಖಾತೆ ಲಭಿಸುವ ಸಾಧ್ಯತೆಗಳಿವೆ.

Share This Article
Leave a Comment

Leave a Reply

Your email address will not be published. Required fields are marked *