18 ಸಾವಿರ ದಂಡ ಕಟ್ಟುವ ಚಿಂತೆಯಲ್ಲಿ ಪ್ರಾಣಬಿಟ್ಟ ಆಟೋ ಚಾಲಕ

Public TV
2 Min Read

ಲಕ್ನೋ: ಸಂಚಾರಿ ನಿಯಮ ಉಲ್ಲಂಘನೆಗೆ ಪೊಲೀಸರು ಹಾಕಿದ್ದ 18 ಸಾವಿರ ದಂಡವನ್ನು ಕಟ್ಟುವ ಚಿಂತೆಯಿಂದ ಅನಾರೋಗ್ಯಕ್ಕೀಡಾಗಿ ಆಟೋ ಚಾಲಕರೊಬ್ಬರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಜೌನ್ಪುರದಲ್ಲಿ ನಡೆದಿದೆ.

ಕಲಿಚಾಬಾದಿನ ನಿವಾಸಿ ಗಣೇಶ್ ಅಗರ್ವಾಲ್ ಮೃತ ದುರ್ದೈವಿ. ಗಣೇಶ್ ಆಟೋ ಓಡಿಸಿಕೊಂದು ಜೀವನ ನಡೆಸುತ್ತಿದ್ದರು. ಕಳೆದ ಆಗಸ್ಟ್ 31ರಂದು ಜೌನ್ಪುರದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದಕ್ಕೆ ಪೊಲೀಸರು ಗಣೇಶ್ ಅವರಿಗೆ 18 ಸಾವಿರ ರೂಪಾಯಿ ದಂಡ ಹಾಕಿದ್ದರು. ಈ ಭಾರೀ ಮೊತ್ತದ ದಂಡವನ್ನು ಹೇಗೆ ಕಟ್ಟುವುದು ಎಂಬ ಚಿಂತೆಯಲ್ಲಿಯೇ ಗಣೇಶ್ ಅವರು ಅನಾರೋಗ್ಯಕ್ಕಿಡಾಗಿದ್ದರು.

ಕೆಲದಿನಗಳಿಂದ ಗಣೇಶ್ ಅವರ ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಕುಟುಂಬಸ್ಥರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಅವರ ಸ್ಥಿತಿ ಗಂಭೀರವಾದ ಬಳಿಕ ವಾರಣಾಸಿಯ ಖಾಸಗಿ ಆಸ್ಪತ್ರೆಗೆ ಅವರನ್ನು ಸೇರಿಸಲಾಯಿತು. ಆದರೆ ಚಿಕಿತ್ಸೆಗೆ ಗಣೇಶ್ ಅವರು ಸ್ಪಂದಿಸದ ಕಾರಣಕ್ಕೆ ಸೆಪ್ಟೆಂಬರ್ 23ರಂದು ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಗಣೇಶ್ ಅವರ ಸಾವಿಗೆ ಸಂಚಾರಿ ಪೊಲೀಸರು ವಿಧಿಸಿದ ಭಾರೀ ದಂಡವೇ ಕಾರಣ. ಹೇಗೆ ಇಷ್ಟು ಮೆತ್ತದ ದಂಡ ಕಟ್ಟಬೇಕು ಎಂದು ತಿಳಿಯದೆ ಗಣೇಶ್ ಯಾವಾಗಲೂ ಚಿಂತೆಯಲ್ಲಿಯೇ ಇರುತ್ತಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಈ ವಿಚಾರ ಜಿಲ್ಲಾಧಿಕಾರಿವರೆಗೂ ತಲುಪಿದಾಗ, ಡಿಸಿ ಅರವಿಂದ್ ಮಲ್ಲಪ್ಪ ಅವರು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ(ಎಆರ್‌ಟಿಒ) ಉದಯ್‍ವೀರ್ ಸಿಂಗ್ ಬಳಿ ಈ ಬಗ್ಗೆ ಮಾಹಿತಿ ಕೇಳಿದರು. ಅವರು ಜೌನ್ಪುರದ ಸಂಚಾರಿ ಪೊಲೀಸರನ್ನು ವಿಚಾರಿಸಿದರು. ಆಗ ಪೊಲೀಸರು, ಆಗಸ್ಟ್ 31ರಂದು ಗಣೇಶ್ ಅವರನ್ನು ತಡೆದು ಪರಿಶೀಲನೆ ನಡೆಸಿದ್ದೆವು. ಆಗ ಅವರು ಆಟೋ ಪರ್ಮಿಟ್ ಹೊಂದಿರಲಿಲ್ಲ. ಹಾಗೆ ಮಾಲಿನ್ಯ ಪ್ರಮಾಣ ಪತ್ರ ಹಾಗೂ ಚಾಲನಾ ಪ್ರಮಾಣಪತ್ರ ಕೂಡ ಅವರ ಬಳಿಯಿರಲಿಲ್ಲ. ಇದಲ್ಲದೆ ಇನ್ನೂ ಮೂರು ತಪ್ಪುಗಳನ್ನು ಮಾಡಿ ಸಂಚಾರಿ ನಿಯಮ ಉಲ್ಲಂಘಿಸಿದಕ್ಕೆ ಎಲ್ಲಾ ಸೇರಿ ಅವರಿಗೆ 18 ಸಾವಿರ ರೂಪಾಯಿ ದಂಡ ವಿಧಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಹಿರಿಯ ಅಧಿಕಾರಿಗಳು ಈ ಬಗ್ಗೆ ಮಾತನಾಡಿ, ಇದರಲ್ಲಿ ಪೊಲೀಸರ ತಪ್ಪಿಲ್ಲ. ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದಮೇಲೆ ದಂಡದ ಪ್ರಮಾಣ ಹೆಚ್ಚಾಗಿದೆ. ಪೊಲೀಸರು ತಮ್ಮ ಕೆಲಸ ಮಾಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *