‘ಡಿ ಕಂಪನಿ’ಯ ಉತ್ತಮ ಕೆಲಸಕ್ಕೆ ಶಿಕ್ಷಣ ಸಚಿವರ ಮೆಚ್ಚುಗೆ

Public TV
2 Min Read

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಸಂಘ ‘ಡಿ ಕಂಪನಿ’ ಸರ್ಕಾರಿ ಶಾಲೆಯನ್ನು ದತ್ತು ಪಡೆದಿದ್ದಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಕಲೇಶಪುರ ತಾಲೂಕಿನ ಸರ್ಕಾರಿ ಶಾಲೆಯನ್ನು ಡಿ ಕಂಪನಿ ದತ್ತು ಪಡೆದ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಇದನ್ನು ನೋಡಿದ ಸುರೇಶ್ ಕುಮಾರ್ ಅವರು ದರ್ಶನ್ ಅಭಿಮಾನಿಗಳ ಈ ಉತ್ತಮ ಕಾರ್ಯವನ್ನು ಶ್ಲಾಘಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ‘ಡಿ ಕಂಪನಿ’ಗೆ ಅಭಿನಂದನೆ ತಿಳಿಸಿದ್ದಾರೆ. ಈ ಅನುಕರಣೀಯ ಕಾರ್ಯ ಮಾಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ (ಡಿ ಬಾಸ್) ಅಭಿಮಾನಿಗಳಿಗೆ ರಾಜ್ಯದ ಶಿಕ್ಷಣ ಸಚಿವನಾಗಿ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ಬರೆದು ಪಬ್ಲಿಕ್ ಟಿವಿಯ ವರದಿಯನ್ನು ಹಾಕಿ ಟ್ವೀಟ್ ಮಾಡಿದ್ದಾರೆ.

ಸುರೇಶ್ ಕುಮಾರ್ ಅವರು ತಮ್ಮ ಕಾರ್ಯವನ್ನು ಶ್ಲಾಘಿಸಿದಕ್ಕೆ ಇತ್ತ ‘ಡಿ ಕಂಪನಿ’ಯ ಟ್ವಿಟ್ಟರ್ ಖಾತೆಯಿಂದ ಅಭಿಮಾನಿಗಳು ಸಚಿವರಿಗೆ ಧನ್ಯವಾದ ತಿಳಿಸಿದ್ದಾರೆ. ರಾಜ್ಯದ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರು ನಮ್ಮ ಡಿ ಕಂಪನಿಯ ಸದಸ್ಯರಿಗೆ ಮತ್ತು ಡಿ ಬಾಸ್ ಅಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದ ತಿಳಿಸಿದ್ದಾರೆ ಎಂದು ಟ್ವೀಟ್ ಮಾಡಿ ಖುಷಿಯನ್ನು ಹಂಚಿಕೊಂಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಸಂಘ `ಡಿ ಕಂಪನಿ’ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕುಗ್ರಾಮ ರಾಮೇನಹಳ್ಳಿಯ ಸರ್ಕಾರಿ ಶಾಲೆಯನ್ನು ಎರಡು ವರ್ಷಕ್ಕೆ ದತ್ತು ಪಡೆದು ಶಾಲಾ ಅಭಿವೃದ್ಧಿಗೆ ಮುಂದಾಗಿದೆ. ಶಾಲೆಯ ಮಕ್ಕಳಿಗೆ ಸಮವಸ್ತ್ರಗಳು, ಪುಸ್ತಕ, ಶಾಲಾ ಕಟ್ಟಡಕ್ಕೆ ಬಣ್ಣ, ಪೀಠೋಪಕರಣ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ನೀಡುವ ವಾಗ್ದಾನವನ್ನು ದರ್ಶನ್ ಅಭಿಮಾನಿಗಳು ನೀಡಿದ್ದರು.

ಈ ನಿಟ್ಟಿನಲ್ಲಿ ಡಿ ಕಂಪನಿ ಈಗಾಗಲೇ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದಿದ್ದು, ರಾಮೇನಹಳ್ಳಿ ಸರ್ಕಾರಿ ಶಾಲೆಗೆ ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ಸೌಕರ್ಯಗಳನ್ನು ನೀಡುವುದಾಗಿ ಭರವಸೆ ನೀಡಿದೆ. ಇದರಿಂದಾಗಿ ಶಾಲಾ ಮಕ್ಕಳೂ ಸೇರಿದಂತೆ ಎಲ್ಲರೂ ಸಂತಸ ವ್ಯಕ್ತಪಡಿಸಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಲೆಯ ಶಿಕ್ಷಕಿ ಕೃಪಾ ಅವರು, ಈಗಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಶಾಲೆಗೆ ಭೇಟಿ ನೀಡಿ, ಅಗತ್ಯಗಳನ್ನು ಪಟ್ಟಿ ಮಾಡಿಕೊಂಡಿದ್ದಾರೆ. ಪೂರ್ವಭಾವಿಯಾಗಿ ಸೆಪ್ಟೆಂಬರ್ 22ರಂದು ದಿನಕರೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ ವಿದ್ಯಾರ್ಥಿಗಳಿಗೆ ಟೈ, ಬೆಲ್ಟ್, ಶಾಲೆಗೆ ಗ್ಲೋಬ್, ಗ್ರೀನ್ ಬೋರ್ಡ್ ಸೇರಿದಂತೆ ಅನೇಕ ಉಡುಗೊರೆ ನೀಡಿದ್ದಾರೆ ಎಂದು ತಿಳಿಸಿದರು.

ಬೇಸಿಗೆ ರಜೆಯಲ್ಲಿ ಶಾಲಾ ಕಟ್ಟಡಕ್ಕೆ ಬಣ್ಣ ಹಚ್ಚುವುದು, ಚಿತ್ರಗಳನ್ನು ಬಿಡಿಸುವುದು ಸೇರಿದಂತೆ ವಿವಿಧ ಕೆಲಸಗಳನ್ನು ಮಾಡಲು ದರ್ಶನ್ ಅಭಿಮಾನಿಗಳು ನಿರ್ಧರಿಸಿದ್ದಾರೆ. ಈ ಮೂಲಕ ನಮ್ಮ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಲು ಮುಂದಾಗಿದ್ದಾರೆ. ಈ ವಿಚಾರ ವಿದ್ಯಾರ್ಥಿಗಳ ಪೋಷಕರಿಗೆ ಹಾಗೂ ಗ್ರಾಮಸ್ಥರಿಗೆ ಖುಷಿ ತಂದಿದೆ ಎಂದಿದ್ದರು.

Share This Article
Leave a Comment

Leave a Reply

Your email address will not be published. Required fields are marked *