ಭೂತವೆಂದೇ ಭಾವಿಸಿ ಜ್ವರಪೀಡಿತರಾಗಿ ಯಂತ್ರ-ತಂತ್ರದ ಮೊರೆಹೋದ ಜನ

Public TV
2 Min Read

– ಕಿಟಕಿ ಬಳಿ ನಿಂತು ನಿದ್ದೆ ಮಾಡ್ತಿದವರನ್ನು ನೋಡ್ತಿದ್ದ ವ್ಯಕ್ತಿ
– ಮಹಿಳೆಯರ ಒಳ ಉಡುಪು ಕದ್ದು ಎಸ್ಕೇಪ್

ಮಡಿಕೇರಿ: ರಾತ್ರಿ ಸಮಯದಲ್ಲಿ ಮನೆಗಳ ಕಿಟಿಕಿ ಬಳಿ ನಿಂತು ಮನೆ ಮಂದಿ ನಿದ್ದೆ ಮಾಡುತ್ತಿರುವುದನ್ನು ನೋಡುತ್ತಿದ್ದ ಹಾಗೂ ಮಹಿಳೆಯರ ಒಳಉಡುಪುಗಳನ್ನು ಕದಿಯುತ್ತಿದ್ದ ವಿಕೃತ ಮನಸ್ಥಿತಿಯ ವ್ಯಕ್ತಿಯನ್ನು ಗ್ರಾಮಸ್ಥರೇ ಸೆರೆ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ ಗ್ರಾಮದಲ್ಲಿ ನಡೆದಿದೆ.

ಅರುಣ್(35) ವಿಕೃತ ಮೆರೆಯುತ್ತಿದ್ದ ವ್ಯಕ್ತಿ. ಅರುಣ್ ಮೂಲತಃ ಕೇರಳದ ತಿರುಚ್ಚೂರ್ ಜಿಲ್ಲೆಯವನಾಗಿದ್ದು, ಕೆಲವು ದಿನಗಳಿಂದ ನೆಲ್ಯಹುದಿಕೇರಿಯ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದನು. ಮಾನಸಿಕ ಅಸ್ವಸ್ಥನಾಗಿದ್ದ ಅರುಣ್, ರಾತ್ರಿ ವೇಳೆಯಲ್ಲಿ ಮನೆ ಮಂದಿ ಗಾಢನಿದ್ರೆಯಲ್ಲಿದ್ದ ಸಂದರ್ಭದಲ್ಲಿ ಮನೆಗಳ ಕಿಟಿಕಿ ಬಳಿ ನಿಂತು ನೋಡುತ್ತಿದ್ದನು. ಬಳಿಕ ಮಹಿಳೆಯರ ಒಳಉಡುಪನ್ನು ಕದ್ದು ಸ್ಥಳದಿಂದ ಪರಾರಿಯಾಗುತ್ತಿದ್ದನು ಎಂದು ಹೇಳಲಾಗುತ್ತಿದೆ.

ಕಳೆದ ಎರಡು ತಿಂಗಳಿನಿಂದ ಗ್ರಾಮದಲ್ಲಿ ಅರುಣ್ ಕೃತ್ಯ ಗ್ರಾಮಸ್ಥರ ನಿದ್ದೆಗೆಡಿಸಿತ್ತು. ಇತ್ತೀಚೆಗಷ್ಟೇ ರಾತ್ರಿ ಸಮಯದಲ್ಲಿ ವಿದ್ಯುತ್ ಕಡಿತಗೊಂಡಿದ್ದ ಸಂದರ್ಭದಲ್ಲಿ ಅರುಣ್ ಮನೆಯೊಂದರ ಕಿಟಕಿ ಬಳಿ ನಿಂತು ಮನೆಯೊಳಗಡೆ ಇಣುಕುತ್ತಿದ್ದನು. ಮೊದಲೇ ಕಪ್ಪು ವರ್ಣದ ಅರುಣ್ ಬಿಳಿ ಬಣ್ಣದ ಬಟ್ಟೆ ತೊಟ್ಟಿದ್ದನು. ಈ ಹಿನ್ನೆಲೆಯಲ್ಲಿ ಕತ್ತಲೆಯಲ್ಲಿ ಆತನ ಮುಖ ಕಾಣದೇ ಬಿಳಿ ಬಟ್ಟೆಯನ್ನೇ ನೋಡಿದ ಮನೆ ಮಂದಿ ಭೂತವೆಂದೇ ಭಾವಿಸಿ ಜ್ವರಪೀಡಿತರಾಗಿ ಯಂತ್ರತಂತ್ರದ ಮೊರೆ ಹೋಗಿದ್ದರು. ಭೂತದ ವಿಷಯ ನೆಲ್ಯಹುದಿಕೇರಿಯಲ್ಲಿ ಕಾಡ್ಗಿಚ್ಚಿನಂತೆ ಹರಡಿತ್ತು.

ಮೊದಲೇ ನೆರೆ ಹಾನಿಯಿಂದ ತತ್ತರಿಸಿದ್ದ ಗ್ರಾಮಸ್ಥರು ಇದೀಗ ಭೂತದ ಭಯದಿಂದ ಸಂಜೆ ಆಗುವುದರೊಳಗೆ ಮನೆ ಸೇರಿಕೊಳ್ಳುತ್ತಿದ್ದರು. ರಾತ್ರಿ 12 ಗಂಟೆಗೆ ಮನೆಗಳ ಬಳಿ ಬರುತ್ತಿದ್ದ ಅರುಣ್ ಅಂದು ಮದ್ಯದ ಅಮಲಿನಲ್ಲಿ ರಾತ್ರಿ 11 ಗಂಟೆಗೆ ಮನೆಯೊಂದರ ಕಾಂಪೌಂಡ್ ನೆಗೆದು ಮನೆಯ ಕಿಟಕಿ ಬಳಿ ಬಂದಿದ್ದಾನೆ. ಇದನ್ನು ನೋಡಿದ ಮನೆಯ ಯಜಮಾನ ಅಕ್ಕಪಕ್ಕದವರಿಗೆ ವಿಷಯ ತಿಳಿಸಿದ್ದಾರೆ.

ಈ ವಿಷಯ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ನಿವಾಸಿಗಳು ಆತನಿದ್ದ ಮನೆಯ ಬಳಿ ಬಂದಿದ್ದಾರೆ. ಗ್ರಾಮಸ್ಥರನ್ನು ನೋಡಿದ ಭೂತ ಮನೆಯ ಕಾಂಪೌಂಡ್ ಗೋಡೆಯನ್ನು ಹಾರಲಾಗದೇ ಸ್ಥಳೀಯರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ. ಬಳಿಕ ಸ್ಥಳೀಯರು ಈತನನ್ನು ಸಿದ್ದಾಪುರ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ವಿಚಾರಣೆ ವೇಳೆ ಅರುಣ್ ಮಾನಸಿಕ ಅಸ್ವಸ್ಥ ಎಂಬ ವಿಷಯ ತಿಳಿದು ಬಂತು. ಬಳಿಕ ಪೊಲೀಸರು ಅರುಣ್‍ಗೆ ಬುದ್ಧಿವಾದ ಹೇಳಿ ಕೇರಳಕ್ಕೆ ಕಳುಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *