ಹಿಂದೆ ಇದ್ದಂತೆ ಇರಿ, ಸುಳ್ಳು ಹೇಳೋಕೆ ಹೋಗ್ಬೇಡಿ – ಸಾರಾ ಮಹೇಶ್

Public TV
2 Min Read

ಬೆಂಗಳೂರು: ಮಾಜಿ ಸಚಿವ ಚಲವರಾಯಸ್ವಾಮಿ ಅವರು ಹಿಂದೆ ನಮಗೆ ನಾಯಕರಾಗಿದ್ದವರು. ಆದರೆ ಅಂದು ಇದ್ದಂತೆ ಅವರು ಈಗ ಇಲ್ಲ. ಹೀಗಾಗಿ ಹಿಂದೆ ಹೇಗೆ ಇದ್ರೋ ಹಂಗೆ ಇರಿ, ಸುಳ್ಳು ಹೇಳೋಕೆ ಹೋಗಬೇಡಿ ಎಂದು ಮಾಜಿ ಸಚಿವ ಸಾರಾ ಮಹೇಶ್ ಅವರು ಚಲುವರಾಯಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ದರೋಡೆ ಮಾಡುವುದಕ್ಕೆ ನಾವು ಹೇಳಿದ್ವಾ, ಇದಕ್ಕೆಲ್ಲ ನಾನು ಹೊಣೆಯೇ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರಂತೆ ಎಂಬ ಮಾಜಿ ಸಚಿವ ಎನ್ ಚಲುವರಾಯಸ್ವಾಮಿ ಹೊಸ ಬಾಂಬ್ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಈ ರಾಜ್ಯದಲ್ಲಿ ಡಿಕೆ ಶಿವಕುಮಾರ್ ಘಟನೆ ನಡೆದಾಗ ಕುಮಾರಣ್ಣ ಮತ್ತು ದೇವೇಗೌಡರೇ ಮೊದಲು ಅವರ ಪರ ಧ್ವನಿ ಎತ್ತಿದವರು. ಮೈಸೂರಿನಲ್ಲಿ ನಡೆದ ಸಭೆಯಲ್ಲಿ ನಾವೂ ಇದ್ದೆವು. 300-400 ಮಂದಿ ಮುಖಂಡರು, ನಾಯಕರು ಹಾಗೂ ಕಾರ್ಯಕರ್ತರು ಇದ್ದರು. ಸಭೆಯಲ್ಲಿ ಪಕ್ಷದ ಸಂಘಟನೆಯ ಬಗ್ಗೆ ಚರ್ಚೆಯಾಗಿತ್ತು. ಆ ಕಾರ್ಯಕ್ರಮ ಮುಗಿದು ಈಗಾಗಲೇ ಒಂದು ವಾರ ಆಯ್ತು. ಇವತ್ತು ಚಲುವರಾಯಸ್ವಾಮಿ ಅವರಿಗೆ ಹೇಗೆ ಗೊತ್ತಾಯ್ತು ಎಂದು ಪ್ರಶ್ನಿಸಿದರು.

ಅವತ್ತೇ ಈ ವಿಚಾರ ಹೇಳಿಲ್ಲ ಯಾಕೆ? ಅಂದು ಡಿಕೆಶಿ ಅವರ ಹೆಸರೇ ಪ್ರಸ್ತಾಪ ಆಗಿಲ್ಲ. ಮೈಸೂರಿನಲ್ಲಿರುವ ಯಾವ ನಾಯಕರಿಗೂ ಗೊತ್ತಿಲ್ಲದೇ ಇರುವ ವಿಚಾರ ಇಂದು ಮಂಡ್ಯದವರೆಗೂ ಬಂತಾ? ಸಾರ್ವಜನಿಕರ ಎದುರು ಕುಮಾರಣ್ಣನ ಮೇಲೆ ಕೆಟ್ಟ ಪರಿಣಾಮ ಬೀರಿಸಲು ಪ್ರಯತ್ನಿಸುತ್ತಿದ್ದಾರೆ. ಅದ್ಯಾಕೆ ಚೆಲುವನಿಗೆ ಈಗ ಬುದ್ಧಿ ಬಂತೋ ಗೊತ್ತಿಲ್ಲ. ಮೊದಲು ಅವರಿ ಈ ರೀತಿ ಇರಲಿಲ್ಲ ಎಂದು ಗರಂ ಆದರು.

ಎಲ್ಲರ ಮೊಬೈಲನ್ನೂ ಆಫ್ ಮಾಡಿಸಿಲ್ಲ. ಪಕ್ಷದ ಕೆಲವು ನಾಯಕರ ಕುರಿತು ಮುಕ್ತವಾಗಿ ಚರ್ಚೆ ಆಗಬೇಕಾಗಿದ್ದರಿಂದ ನಮ್ಮಲ್ಲಿರುವ ಕೆಲವು ಲೋಪದೋಷಗಳನ್ನು ತಿದ್ದಿಕೊಳ್ಳುವುದಕ್ಕಾಗಿ ಮೊಬೈಲಲ್ಲಿ ಯಾರೂ ರೆಕಾರ್ಡ್ ಮಾಡಬೇಡಿ ಎಂದು ಆಫ್ ಮಾಡಿ ಎಂದು ನಾನೇ ಹೇಳಿದ್ದು ಎಂದರು.

ಈಗಲೂ ನಾವು ಡಿಕೆ ಶಿವಕುಮಾರ್ ಪರವೇ ಇದ್ದೇವೆ. ಹೀಗಾಗಿಯೇ ಮೈಸೂರಿನಲ್ಲಿ ಧರಣಿ ಕೂಡ ಮಾಡಿದ್ದೇವೆ. ಜಿಟಿಡಿ ಅವರು ಧರಣಿಯಲ್ಲಿ ಪಾಲ್ಗೊಂಡಿಲ್ಲ. ಹಾಗಂತ ಅವರ ಸಪೋರ್ಟ್ ಇಲ್ಲವೆಂದಲ್ಲ. ಚಲುವರಾಯಸ್ವಾಮಿ ಅವರು ಒಂದು ಕಾಲದಲ್ಲಿ ನಮಗೂ ಲೀಡರ್ ಆಗಿ ಇದ್ದರು. ಈ ಹಿಂದೆ ಹೇಗೆ ಇದ್ರೀ ಈಗಲೂ ಹಂಗೆ ಇರಿ. ಸುಳ್ಳು ಹೇಳೋಕೆ ಹೋಗಬೇಡಿ. ನಮಗೇ ಗೊತ್ತಿಲ್ಲದ ಮಾಹಿತಿ ನಿಮಗೆ ಕೊಟ್ಟವರು ಯಾರು ಎಂದು ಮರು ಪ್ರಶ್ನೆ ಮಾಡಿದರು.

ಕುಮಾರಸ್ವಾಮಿ ಹೇಳಿರೋದು, ನನಗೆ ಗೊತ್ತಾಗುತ್ತಿದ್ದರೆ ನನ್ನ ಕಾರ್ಯಕ್ರಮವನ್ನು ಪೋಸ್ಟ್ ಮಾಡುತ್ತಿದ್ದೆ ಎಂದರು ಅಷ್ಟೇ. ಡಿಕೆಶಿ ಪರ ಪ್ರತಿಭಟನೆ ತರಾತುರಿಯಲ್ಲಿ ಪೂರ್ವಭಾವಿಯಾಗಿ ನನಗೆ ತಿಳಿಸಿಲ್ಲ ಎಂದಿದ್ದರು. ಬಹುತೇಕ ಜೆಡಿಎಸ್ ಕಾರ್ಯಕತರೇ ಧರಣಿಯಲ್ಲಿ ಭಾಗವಹಿಸಿದ್ದರು. ಒಟ್ಟಿನಲ್ಲಿ ಡಿಕೆಶಿ ಪರ ಹೋರಾಟವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *