ಡಿಕೆಶಿ ಇಡಿ ಬಂಧನದಿಂದ ಮುಕ್ತವಾಗಲೆಂದು ಶಿವಮೊಗ್ಗದಲ್ಲಿ ವಿಶೇಷ ಹೋಮ

Public TV
2 Min Read

ಶಿವಮೊಗ್ಗ: ಇಡಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಶೀಘ್ರ ಆರೋಪ ಮುಕ್ತರಾಗಿ ಹಾಗೂ ಆರೋಗ್ಯವಂತರಾಗಿ ಹೊರ ಬರಲೆಂದು ಕಾಂಗ್ರೆಸ್ ಕಾರ್ಯಕರ್ತರು ಶಿವಮೊಗ್ಗದಲ್ಲಿ ಇಂದು ವಿಶೇಷ ಪೂಜೆ, ಹೋಮ ನಡೆಸಿ ಬೇಡಿಕೊಂಡಿದ್ದಾರೆ.

ನಗರದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕಾರ್ಯಕರ್ತರು, ಗಣ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ ನಡೆಸಿದರು. ಕೇಂದ್ರದ ಬಿಜೆಪಿ ಸರ್ಕಾರ ವಿನಾಕಾರಣ ಡಿ.ಕೆ.ಶಿವಕುಮಾರ್ ಅವರಿಗೆ ಕಿರುಕುಳ ನೀಡುತ್ತಿದ್ದು, ಡಿಕೆಶಿಯವರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಗವಂತನ ಆಶೀರ್ವಾದ ಡಿಕೆಶಿಯವರ ಮೇಲಿದ್ದು, ಶೀಘ್ರ ಆರೋಪ ಮುಕ್ತರಾಗಿ ಹೊರ ಬರಲಿ ಎಂದು ಕಾರ್ಯಕರ್ತರು ಪ್ರಾರ್ಥಿಸಿದರು. ಡಿ.ಕೆ.ಶಿವಕುಮಾರ್ ಆರೋಪ ಮುಕ್ತರಾಗಿ ಹೊರ ಬಂದ ತಕ್ಷಣ ಹಾವೇರಿ ಜಿಲ್ಲೆಯಲ್ಲಿರುವ ಮೈಲಾರಲಿಂಗ ದೇವಸ್ಥಾನಕ್ಕೆ ಶಿವಮೊಗ್ಗದಿಂದ ಪಾದಯಾತ್ರೆ ಮೂಲಕ ತೆರಳಿ ಹರಕೆ ಸಲ್ಲಿಸುವುದಾಗಿ ಡಿಕೆಶಿ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹರಕೆ ಹೊತ್ತಿದ್ದಾರೆ.

ಹೈ ಬಿಪಿ, ಶುಗರ್ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ದೆಹಲಿಯ ಆರ್‍ಎಂಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಇಡಿ ಬಂಧನದಲ್ಲಿರುವ ಡಿ.ಕೆ.ಶಿವಕುಮಾರ್ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದರಿಂದ ಅಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿದ್ದರು. ಭಾನುವಾರ ಇಸಿಜಿ ಬಳಿಕ ಹೃದ್ರೋಗ ನಿಗಾ ಘಟಕಕ್ಕೆ ಡಿಕೆಶಿವಕುಮಾರ್ ಅವರನ್ನು ಸ್ಥಳಾಂತರ ಮಾಡಲಾಗಿತ್ತು.

ಇಡಿ ಅಧಿಕಾರಿಗಳ ಮಾನಸಿಕ ಕಿರುಕುಳದಿಂದ ಡಿಕಶಿಯವರ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿಕೊಂಡಿದೆ. ಡಿ.ಕೆ.ಶಿವಕುಮಾರ್ ನಿದ್ದೆಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿಕೊಂಡರು ಅಧಿಕಾರಿಗಳು ನಿರಂತರ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ನಿದ್ದೆ ಕೊರತೆ, ವಿಚಾರಣೆಯ ಒತ್ತಡದಿಂದ ಆರೋಗ್ಯದಲ್ಲಿ ಏರಿಳಿತ ಆಗುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಆಪ್ತರು ಆರೋಪಿಸುತ್ತಿದ್ದಾರೆ.

ಮಂಗಳವಾರ ಡಿ.ಕೆ.ಶಿವಕುಮಾರ್ ಕಸ್ಟಡಿ ಅಂತ್ಯವಾಗಲಿದೆ. ಇತ್ತ ನ್ಯಾಯಾಲಯ ಜಾಮೀನು ಅರ್ಜಿಗೆ ಸೋಮವಾರ ಆಕ್ಷೇಪ ಸಲ್ಲಿಸುವಂತೆ ಸೂಚಿಸಿದೆ. ಇತ್ತ ಆನಾರೋಗ್ಯದ ಕಾರಣಗಳನ್ನು ನೀಡಿ ಡಿಕೆಶಿ ಪರ ವಕೀಲರು ಜಾಮೀನು ನೀಡುವಂತೆ ನ್ಯಾಯಾಲಯದಲ್ಲಿ ಮನವಿ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಇತ್ತ ಇಡಿ ಪರ ವಕೀಲರು ಅನಾರೋಗ್ಯದ ಹಿನ್ನೆಲೆಯಲ್ಲಿ ವಿಚಾರಣೆ ಪೂರ್ಣವಾಗಿಲ್ಲ, ಮತ್ತೆ ಡಿಕೆಶಿಯವರನ್ನು ನಮ್ಮ ವಶಕ್ಕೆ ನೀಡಬೇಕೆಂದು ಮನವಿ ಸಲ್ಲಿಸಿ, ಜಾಮೀನು ಅರ್ಜಿಗೆ ಆಕ್ಷೇಪ ಸಲ್ಲಿಸುವ ಸಾಧ್ಯತೆಗಳಿವೆ.

Share This Article
Leave a Comment

Leave a Reply

Your email address will not be published. Required fields are marked *