ರಾಜ್ ಕುಮಾರ್ ಭಾರತೀಯ ಚಿತ್ರರಂಗದ ಚಕ್ರವರ್ತಿ: ಅನಿಲ್ ಕಪೂರ್

Public TV
2 Min Read

ಬೆಂಗಳೂರು: ವರನಟ ಡಾ.ರಾಜ್ ಕುಮಾರ್ ಅವರು ಭಾರತೀಯ ಚಿತ್ರರಂಗದ ಚಕ್ರವರ್ತಿ ಎಂದು ಬಾಲಿವುಡ್ ನಟ ಅನಿಲ್ ಕಪೂರ್ ಹೇಳಿದ್ದಾರೆ.

ಬಸವನಗುಡಿಯ ಗಣೇಶೋತ್ಸವ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ಅವರು, ಕನ್ನಡ ಚಿತ್ರರಂಗ ಕಂಡ ಮೇರು ನಟ ಡಾ. ರಾಜ್ ಕುಮಾರ್ ಅವರನ್ನು ಹಾಡಿಹೊಗಳಿದ್ದಾರೆ. ರಾಜ್ ಕುಮಾರ್ ಅವರು ಕನ್ನಡಕ್ಕೆ ಮಾತ್ರ ಅಲ್ಲ ಇಡೀ ಭಾರತೀಯ ಚಿತ್ರರಂಗದ ಹೆಮ್ಮೆ ಎಂದು ಶ್ಲಾಘಿಸಿದರು.

ರಾಜ್ ಕುಮಾರ್ ಅವರು ಕೇವಲ ರಾಜ್ ಕುಮಾರ್ ಅಲ್ಲ ಅವರು ಚಕ್ರವರ್ತಿ ರಾಜ್ ಕುಮಾರ್, ಭಾರತೀಯ ಚಿತ್ರರಂಗದ ಎಲ್ಲಾ ನಟರಿಗೆ ಅವರು ಚಕ್ರವರ್ತಿ ಎಂದು ಹೇಳಿದ್ದಾರೆ. ಅವರು ಕೇವಲ ಕನ್ನಡ ಸಿನಿಮಾ ಜಗತ್ತಿಗೆ ಮಾತ್ರ ಸಿಮೀತ ಅಲ್ಲ ಅವರು ಇಡೀ ಭಾರತೀಯ ಚಿತ್ರರಂಗಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ ಎಂದು ಹೊಗಳಿದರು.

ಡಾ ರಾಜ್ ಕುಮಾರ್ ಅವರು ತಮ್ಮ ಅದ್ಭುತ ನಟನೆಯ ಮೂಲಕ ಭಾರತೀಯ ಚಿತ್ರರಂಗದಲ್ಲಿ ಒಂದು ದಂತಕಥೆಯಾಗಿ ಉಳಿದಿದ್ದಾರೆ. ಅವರು ನಟನೆಯ ನಿಧಿ ಮತ್ತು ಕನ್ನಡ ಸಿನಿಮಾಗಳ ಪ್ರೇಮಿ ಆಗಿದ್ದರು. ರಾಜ್ ಕುಮಾರ್ ಅವರು ಭಾರತೀಯ ಚಿತ್ರ ರಸಿಕರ ಮನದಲ್ಲಿ ಯಾವಾಗಲೂ ಇರುತ್ತಾರೆ ಎಂದು ಅನಿಲ್ ಕಪೂರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕನ್ನಡದ ಗಾಯಕ ವಿಜಯ್ ಪ್ರಕಾಶ್ ಅವರನ್ನು ಕುರಿತು ಮಾತನಾಡಿದ ಅನಿಲ್ ಕಪೂರ್ ಅವರು, ನಾನು ವಿಜಯ್ ಅವರ ಬಹುದೊಡ್ಡ ಅಭಿಮಾನಿ. ಅವರು ನನ್ನ ನಟನೆಯ ಎರಡು ಸಿನಿಮಾಗೆ ಹಾಡನ್ನು ಹಾಡಿದ್ದಾರೆ. ನಾನು ನಟಿಸಿದ್ದ ಸ್ಲಂ ಡಾಗ್ ಮಿಲೇನಿಯರ್ ಚಿತ್ರದಲ್ಲಿ ಜೈ ಹೋ ಹಾಗೂ ಯುವರಾಜ ಚಿತ್ರದಲ್ಲಿ ಮನಮೋಹಿನಿ ಹಾಡುಗಳನ್ನು ವಿಜಯ್ ಹಾಡಿದ್ದಾರೆ. ಇನ್ನೊಂದು ಆಚ್ಚರಿಯ ಸಂಗತಿ ಎಂದರೆ ಎಆರ್ ರೆಹಮಾನ್ ಕೂಡ ವಿಜಯ್ ಅವರ ಅಭಿಮಾನಿ ಎಂದು ಅನಿಲ್ ಹೇಳಿದರು.

ಈ ಎಲ್ಲ ವಿಚಾರಗಳ ಜೊತೆ ಕನ್ನಡದಲ್ಲಿ ತಮ್ಮ ನಟನೆಯ ಮೊದಲ ಸಿನಿಮಾ ಪಲ್ಲವಿ ಅನುಪಲ್ಲವಿ ಬಗ್ಗೆ ಮಾತನಾಡಿದ ಅನಿಲ್ ಕಪೂರ್, ನಾನು ಕನ್ನಡದಲ್ಲಿ ಮೊದಲು ನಟಿಸಿದ ಚಿತ್ರ ಪಲ್ಲವಿ ಅನುಪಲ್ಲವಿ ಇದು 1983 ರಲ್ಲಿ ಬಿಡುಗಡೆಯಾಗಿತ್ತು. ಇದರ ನಿರ್ದೇಶಕ ಮಣಿರತ್ನಂ ಅವರಿಗೂ ಕೂಡ ಇದು ಮೊದಲ ಚಿತ್ರ ಎಂದು ಹೇಳಿದ್ದಾರೆ. ಇದೇ ವೇಳೆ ಈ ಸಿನಿಮಾದ ನಗುವ ನಯನ ಮಧುರ ಮೌನ ಎಂಬ ಹಾಡನ್ನು ಹಾಡಿ ಜನರನ್ನು ರಂಜಿಸಿದರು.

ಇತ್ತೀಚೆಗೆ ಮೃತ ಪಟ್ಟ ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿ ಮತ್ತು ನಟ ಗಿರೀಶ್ ಕರ್ನಾಡ್ ಅವರ ಬಗ್ಗೆ ಮಾತನಾಡಿದ ಕಪೂರ್, ನಾನು ಅವರ ಕಲೆಯ ಅಭಿಮಾನಿಯಾಗಿದ್ದೆ. ಅವರ ಜೊತೆ ಒಂದೆರಡು ಚಿತ್ರಗಳಲ್ಲಿ ನಟಿಸುವ ಅದೃಷ್ಟವು ನನಗೆ ಸಿಕ್ಕಿತ್ತು. ಇಂದು ಅವರ ನಮ್ಮ ಜೊತೆ ಇಲ್ಲ ಆದರೆ ಅವರು ಮಾಡಿರುವ ಕೆಲಸ ಮಾತ್ರ ನಮ್ಮ ಜೊತೆ ಶಾಶ್ವತವಾಗಿ ಉಳಿಯುತ್ತದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *