ಬಾಗಲಕೋಟೆ: ತುಬಚಿ ಏತ ನೀರಾವರಿ ಪೈಪ್ ಒಡೆದ ಪರಿಣಾಮ ನೆಲದಿಂದ ನಲವತ್ತರಿಂದ ಐವತ್ತು ಅಡಿ ನೀರು ಚಿಮ್ಮಿದ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ನಡೆದಿದೆ.
ಜಿಲ್ಲೆಯ ಕವಟಗಿ ಗ್ರಾಮದ ಬಳಿ ಈ ಏತ ನೀರಾವರಿ ಪೈಪ್ ಲೈನ್ ಇದೆ. ಏತ ನೀರಾವರಿಯನ್ನು ಜಾಕ್ವೆಲ್ಗೆ ಸಂಪರ್ಕ ಕಲ್ಪಿಸಲಾಗಿದೆ. ಕೃಷ್ಣಾ ನದಿಯಿಂದ ನೀರು ಸರಬರಾಜು ಮಾಡಲು ಈ ಪೈಪ್ ಲೈನನ್ನು ಅಳವಡಿಸಲಾಗಿತ್ತು. ಆದರೆ ಜಮಖಂಡಿ ತಾಲೂಕಿನ ತೊದಲಬಾಗಿ-ಗದ್ಯಾಳ ಗ್ರಾಮದ ಮಧ್ಯೆ ಪೈಪ್ ಒಡೆದು ಹೋಗಿದೆ.
ಪರಿಣಾಮ ಮಣ್ಣಿನ ಸಮೇತ ನೀರು ಚಿಮ್ಮುತ್ತಿದೆ. ಇದನ್ನು ಗ್ರಾಮದ ಜನರು ತಮ್ಮ ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಚಿಮ್ಮಿದ ನೀರು ಹೊಲಕ್ಕೆ ಹೋಗುತ್ತಿದ್ದು, ರೈತರ ಬೆಳೆಗೆ ಹಾನಿಯಾಗುತ್ತಿದೆ. ಇದರಿಂದ ಚಿಮ್ಮುತ್ತಿರುವ ನೀರು ನೋಡಿ ಸ್ಥಳೀಯರು ಗಾಬರಿಗೊಂಡಿದ್ದಾರೆ. ತಕ್ಷಣ ಸಣ್ಣ ನೀರಾವರಿ ಅಧಿಕಾರಿಗಳು ಮತ್ತು ಲೋಕೋಪಯೋಗಿ ಇಲಾಖೆಗೆ ಮಾಹಿತಿ ತಿಳಿಸಿದ್ದಾರೆ.
ಸುಮಾರು 3.5 ಮೀಟರ್ ಈ ಪೈಪ್ ಲೈನ್ ಇದೆ. ಏತ ನೀರಾವರಿ ಕಳೆದ ವರ್ಷ ಪ್ರಾಯೋಗಿಕವಾಗಿ ಆರಂಭವಾಗಿದ್ದು, ಡಿಆರ್ಎನ್, ಐಬಿಆರ್ ಸಿಎಲ್ ಗುತ್ತಿಗೆ ಕಂಪನಿಯಿಂದ ಕಾಮಗಾರಿ ನಡೆದಿದೆ. ಪೈಪ್ನಲ್ಲಿ ನೀರಿನ ಒತ್ತಡ ಜಾಸ್ತಿಯಾಗಿದೆ. ಇದರಿಂದ ಪೈಪ್ ಲೈನ್ ಜೋಡಣೆ ಸರಿಯಾಗಿ ಆಗದ ಹಿನ್ನೆಲೆಯಲ್ಲಿ ಒಡೆದಿರಬಹುದು ಎಂದು ಶಂಕಿಸಲಾಗಿದೆ.