ಸಿಎಂ ಬಳಿಯಿದೆ ಆತಂಕ ನಿವಾರಿಸುವ ಮಂತ್ರದಂಡದ ಪೆನ್

Public TV
2 Min Read

ಬೆಂಗಳೂರು: ಶತಾಯ ಗತಾಯ ಸರ್ಕಾರ ರಚಿಸಲೇಬೇಕು ಸಿಎಂ ಆಗಲೇಬೇಕು ಎಂದು ಹಠಕ್ಕೆ ಬಿದ್ದು ಸರ್ಕಾರ ರಚಿಸಿದ ಬಿ.ಎಸ್ ಯಡಿಯೂರಪ್ಪನವರನ್ನು ಒಂದು ಶಕ್ತಿ ಕಾಯುತ್ತಿದೆಯಂತೆ. ಹಾಗಿದ್ರೆ ಆ ಒಂದು ಶಕ್ತಿ ಅವರ ಬಳಿ ಇರುವವರೆಗೂ ಬಿಎಸ್‍ವೈ ಅವರನ್ನ ಅಧಿಕಾರದಿಂದ ಇಳಿಸಲು ಸಾಧ್ಯವೇ ಇಲ್ವ ಅನ್ನೋ ಪ್ರಶ್ನೆಯೊಂದು ಎದ್ದಿದೆ.

ಹೌದು. ಸಿಎಂ ಯಡಿಯೂರಪ್ಪನವರ ಮಹಾನ್ ಶಕ್ತಿಯ ರಹಸ್ಯ ಅಡಗಿರುವುದು ಒಂದು ಪೆನ್ನಿನಲ್ಲಿ. ಸಿಎಂ ಅವರು ಸದಾ ತಮ್ಮ ಜೇಬಿನಲ್ಲಿ ಕಪ್ಪು ಬಣ್ಣದ ಪೆನ್ನೊಂದನ್ನು ಇಟ್ಟುಕೊಳ್ಳುತ್ತಿದ್ದಾರೆ. ಆ ಪೆನ್ನನ್ನು ಕೊಟ್ಟಿದ್ದು ಗೌರಿಗದ್ದೆಯ ದತ್ತಾತ್ರೆಯ ಆಶ್ರಮದ ವಿನಯ್ ಗುರೂಜಿ. ಯಡಿಯೂರಪ್ಪ ಜುಲೈ 26 ರಂದೆ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂದು ಮೊದಲೇ ಭವಿಷ್ಯ ನುಡಿದಿದ್ದ ಗುರೂಜಿ, ಪೆನ್ ಒಂದನ್ನ ಯಡಿಯೂರಪ್ಪನವರಿಗೆ ಗಿಫ್ಟ್ ಆಗಿ ಕಳುಹಿಸಿಕೊಟ್ಟಿದ್ದರು. ಅದೇ ಪೆನ್ನನ್ನು ಪ್ರಮಾಣ ವಚನ ಸ್ವೀಕರಿಸುವಾಗ ಬಳಸಿ ಎಂದು ಸಲಹೆ ಕೂಡ ನೀಡಿದ್ದರು ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಿಎಂ ಯಡಿಯೂರಪ್ಪ ರಾಜಭವನದ ಅಧಿಕಾರಿ ಕೊಟ್ಟ ಪೆನ್ನನ್ನು ನಿರಾಕರಿಸಿ ಗುರೂಜಿ ಕೊಟ್ಟ ಪೆನ್ನಿನಲ್ಲೇ ಸಹಿ ಮಾಡಿದ್ದರು. ಈಗಲೂ ಪ್ರತಿ ಫೈಲಿಗೆ ಸಹಿ ಹಾಕುವಾಗಲು ಗುರೂಜಿ ಕೊಟ್ಟ ಪೆನ್ನನ್ನೇ ಬಳಸುತ್ತಿದ್ದಾರೆ. ಅಲ್ಲದೆ ಸಿಎಂ ಯಡಿಯೂರಪ್ಪ ಸದಾ ಆ ಪೆನ್ನನ್ನು ತಮ್ಮ ಜೇಬಿನಲ್ಲಿಯೇ ಇಟ್ಟುಕೊಂಡು ಓಡಾಡುತ್ತಿದ್ದಾರೆ. ಸರ್ಕಾರ ರಚಿಸುವಾಗಲೂ ಸಾಕಷ್ಟು ಅಗ್ನಿ ಪರೀಕ್ಷೆ ಎದುರಿಸಿದ ಸಿಎಂ ಬಿಎಸ್‍ವೈ, ಸಂಪುಟ ರಚನೆಯ ವೇಳೆಯೂ ಸಾಕಷ್ಟು ಕಸರತ್ತು ನಡೆಸಿ ಅಡ್ಡಿ ಆತಂಕಗಳನ್ನು ಎದುರಿಸಿದ್ದರು.

ಪ್ರಮಾಣ ವಚನ ಸ್ವೀಕರಿಸಿ ಮೊದಲ ಸಹಿ ಹಾಕುವಲ್ಲಿಂದ ಸದಾ ಆ ಪೆನ್ನನ್ನು ತಮ್ಮ ಜೊತೆಗೆ ಇಟ್ಟುಕೊಳ್ಳಿ ಶುಭವಾಗುತ್ತದೆ ಎಂದು ಗುರೂಜಿ ಹೇಳಿದ್ದಾರಂತೆ. ಆ ಪೆನ್ನು ತಮಗೆ ಎದುರಾಗುವ ಎಲ್ಲಾ ಅಡ್ಡಿ ಆತಂಕವನ್ನ ನಿವಾರಿಸುವ ಮಂತ್ರ ದಂಡ ಎಂಬುದು ಸಿಎಂ ಯಡಿಯೂರಪ್ಪನವರ ನಂಬಿಕೆಯಾಗಿದೆ. ಆದ್ದರಿಂದ ಎಲ್ಲಾ ಕೆಲಸಕ್ಕೂ ಅದೇ ಪೆನ್ನು ಬಳಸುವ ಮೂಲಕ ಸಿಎಂ ಯಡಿಯೂರಪ್ಪ ತಮ್ಮ ಅದೃಷ್ಟದ ಮಂತ್ರ ದಂಡ ಆ ಪೆನ್ನು ಅನ್ನೋ ನಂಬಿಕೆ ಇಟ್ಟುಕೊಂಡು ಸದಾ ತಮ್ಮ ಬಳಿಯೇ ಇಟ್ಟುಕೊಳ್ಳತೊಡಗಿದ್ದಾರೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *