ಜೈಲಿನಲ್ಲಿ ಅಪರಾಧಿಯಿಂದ ಭರ್ಜರಿ ಹುಟ್ಟುಹಬ್ಬ ಆಚರಣೆ

Public TV
1 Min Read

– ಮಟನ್ ಸಾರು ಸವಿದ ಕೈದಿಗಳು

ಪಾಟ್ನಾ: ಕೊಲೆ ಅಪರಾಧಿಯೊಬ್ಬ ಬಿಹಾರದ ಜೈಲಿನೊಳಗೆ ಕೇಕ್ ಕಟ್ ಮಾಡಿ ಭರ್ಜರಿಯಾಗಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾನೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪಿಂಟು ತಿವಾರಿ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಅಪರಾಧಿಯಾಗಿದ್ದು, ಈತ 2015ರಲ್ಲಿ ಇಬ್ಬರು ಎಂಜಿನಿಯರ್ ಗಳನ್ನು ಕೊಲೆ ಮಾಡಿ ಜೈಲು ಸೇರಿದ್ದಾನೆ. ಇತ್ತೀಚೆಗೆ ಪಿಂಟು ಬಿಹಾರ ಜೈಲಿನಲ್ಲಿ ಕೇಕ್ ಕಟ್ ಮಾಡಿ ತನ್ನ ಬರ್ತ್ ಡೇಯನ್ನು ಆಚರಿಸಿಕೊಂಡಿದ್ದಾನೆ. ಜೈಲಿನಲ್ಲಿರುವ ಇತರರಿಂದ ಗಿಫ್ಟ್ ಸಹ ಪಡೆದುಕೊಂಡಿದ್ದಾನೆ. ಈತ ಕೇಕ್ ಕಟ್ ಮಾಡುವಾಗ ಉಳಿದ ಕೈದಿಗಳು ಪಿಂಟುಗೆ ಹ್ಯಾಪಿ ಬರ್ತ್ ಡೇ ಎಂದು ಹಾಡು ಹಾಡಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ.

ಮತ್ತೊಂದು ವಿಡಿಯೋದಲ್ಲಿ, ಸುಮಾರು 12ಕ್ಕೂ ಹೆಚ್ಚು ಮಂದಿ ನೆಲದ ಮೇಲೆ ಕುಳಿತುಕೊಂಡು ಅನ್ನ ಹಾಗೂ ಮಟನ್ ಸಾರು ಸವಿದಿದ್ದಾರೆ. ಪಾರ್ಟಿಯ ಬಳಿಕ ಇತರ ಕೈದಿಗಳಿಗೆ ಪಿಂಟು ಸಿಹಿ ಹಂಚುವ ಮೂಲಕ ಬರ್ತ್ ಡೇಯನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾನೆ. ಅಲ್ಲದೆ ಹುಟ್ಟುಹಬ್ಬದ ಪ್ರಯುಕ್ತ ಊಟದ ವ್ಯವಸ್ಥೆಗಾಗಿ ಕ್ಯಾಟರಿಂಗ್ ಅವರನ್ನು ಜೈಲಿನ ಆವರಣದೊಳಗೆ ಕರೆಸಲಾಗಿದೆ. ಈ ಎಲ್ಲಾ ಘಟನೆಗಳು ವಿಡಿಯೋದಲ್ಲಿ ಸೆರೆಯಾಗಿದೆ. ಇಡೀ ಹುಟ್ಟುಹಬ್ಬದ ಆಚರಣೆಯನ್ನು ಮೊಬೈಲ್ ಫೋನ್ ನಲ್ಲಿ ವಿಡಿಯೋ ಮಾಡಿರುವುದರಿಂದ ಜೈಲಿನೊಳಗೆ ಮೊಬೈಲ್ ಬಳಕೆಗೆ ಅವಕಾಶ ಮಾಡಿಕೊಡಲಾಗಿದೆ ಎಂಬುದನ್ನು ಗಮನಿಸಬಹುದು.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ಪೊಲೀಸ್ ಇಲಾಖೆಯೊಳಗೆ ಭಾರೀ ಕೊಲಾಹಲಕ್ಕೆ ಕಾರಣವಾಗಿದೆ. ಐಜಿ ಮಿಥಿಲೇಶ್ ಮಿಶ್ರಾ ಅವರು ಈ ಘಟನೆಯ ತನಿಖೆಗೆ ಆದೇಶಿಸಿ ಜಿಲ್ಲಾ ಹಾಗೂ ಜೈಲು ಆಡಳಿತದಿಂದ ವರದಿ ಕೋರಿದ್ದಾರೆ. ಜೈಲಿನೊಳಗೆ ಮೊಬೈಲ್ ಬಳಕೆ ಮಾಡಿರುವುದು ಗಂಭೀರ ವಿಚಾರವಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಐಜಿ ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಈಗಾಗಲೇ ಜೈಲಿನ ನಾಲ್ವರು ಗಾರ್ಡ್ ಗಳನ್ನು ಅಮಾನತುಗೊಳಿಸಲಾಗಿದೆ ಎಂಬುದಾಗಿ ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *