ಅಧಿಕಾರಿಗಳ ನಿರ್ಲಕ್ಷ್ಯ- ಸಂತ್ರಸ್ತರಿಗೆ ತಲುಪದ ದಾನಿಗಳು ನೀಡಿದ್ದ ವಸ್ತುಗಳು

Public TV
1 Min Read

ರಾಯಚೂರು: ಹಲವೆಡೆ ನೆರೆ ಸಂತ್ರಸ್ತರು ಇನ್ನೂ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿಯಿದೆ. ದಾನಿಗಳು ನೀಡಿದ ಆಹಾರ ಪದಾರ್ಥಗಳನ್ನು ರಾಯಚೂರಿನಲ್ಲಿ ಸಮರ್ಪಕವಾಗಿ ಸಂತ್ರಸ್ತರಿಗೆ ವಿತರಿಸದೆ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಸಾವಿರಾರು ರೂ. ಬೆಲೆ ಬಾಳುವ ವಸ್ತುಗಳು ಹಾಳಾಗಿವೆ.

ದಾನಿಗಳು ನೀಡಿದ ದಿನಬಳಕೆ ವಸ್ತು, ಆಹಾರ, ಸಾಮಗ್ರಿಗಳನ್ನು ನೆರೆ ಸಂತ್ರಸ್ತರಿಗೆ ನೀಡದೆ ರಾಯಚೂರಿನ ಲಿಂಗಸುಗೂರು ತಾಲೂಕಿನ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಲಿಂಗಸುಗೂರಿನ ಗುರುಭವನದಲ್ಲಿ ಸಂತ್ರಸ್ತರ ಪರಿಹಾರ ಸಹಾಯ ಕೇಂದ್ರವನ್ನು ಆರಂಭಿಸಿ ದಾನಿಗಳು ನೀಡಿದ ಸಾಮಾಗ್ರಿಗಳನ್ನ ಸಂಗ್ರಹಿಸಲಾಗಿತ್ತು. ಕೆಲ ಆಹಾರ ಪದಾರ್ಥಗಳು ಕೊಳೆತು ನಾರುತ್ತಿವೆ, ರೊಟ್ಟಿ, ಆಹಾರ ಧಾನ್ಯಗಳಿಗೆ ಫಂಗಸ್ ಹಿಡಿದು ಬಳಕೆಗೆ ಬಾರದಂತಾಗಿದೆ.

ತಾಲೂಕಿನ ಕಡದರಗಡ್ಡಿ, ಯಳಗುಂದಿ, ಯರಗೋಡಿ, ಜಲದುರ್ಗ, ಹಂಚಿನಾಳ ಗ್ರಾಮಗಳೂ ಸೇರಿ ನಾಲ್ಕಾರು ನಡುಗಡ್ಡೆಗಳು ಕೃಷ್ಣೆಯ ಪ್ರವಾಹಕ್ಕೆ ನಲುಗಿ ಹೋಗಿದ್ದವು. ರಾಜ್ಯದ ವಿವಿಧೆಡೆಯಿಂದ ದಿನ ಬಳಕೆ ವಸ್ತುಗಳು, ಆಹಾರ ಸಾಮಗ್ರಿ, ಬಟ್ಟೆ, ಹಾಸಿಗೆ, ಹೊದಿಕೆ ಸೇರಿ ಅಪಾರ ಪ್ರಮಾಣದ ನೆರವು ಹರಿದು ಬಂದಿತ್ತು. ಪ್ರವಾಹ ತಗ್ಗಿದ ನಂತರ ಬಂದ ಸಾಮಾಗ್ರಿಗಳನ್ನು ಕಿಟ್ ಮಾಡಿ ವಿತರಣೆ ಮಾಡಲಾಗುವುದೆಂದು ಲಿಂಗಸುಗೂರು ತಹಶೀಲ್ದಾರ್ ತಿಳಿಸಿದ್ದರು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಸಂತ್ರಸ್ತರಿಗೆ ಸೇರಬೇಕಾದ ವಸ್ತುಗಳು ಇಟ್ಟಲ್ಲೇ ಕೊಳೆತು ಹೋಗಿವೆ.

ಕೃಷ್ಣಾ ನದಿ ಪ್ರವಾಹದಿಂದ ರಾಯಚೂರು ಜಿಲ್ಲೆಯ ಬಹುತೇಕ ಗ್ರಾಮಗಳು ಜಲಾವೃತಗೊಂಡಿದ್ದವು. ಸಾರ್ವಜನಿಕರಿಗೆ ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಸರ್ಕಾರ ಆಹಾರವನ್ನು ನೀಡಿದರೂ ಸಹ ದಾನಿಗಳು ದೊಡ್ಡ ಮನಸ್ಸಿನಿಂದ ಸಾಕಷ್ಟು ಉಪಯುಕ್ತ ವಸ್ತುಗಳನ್ನು ನೀಡಿದ್ದರು. ಅವುಗಳನ್ನು ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ಸಾವಿರಾರು ರೂ.ಗಳ ವಸ್ತುಗಳು ಬಳಕೆಗೆ ಬಾರದಂತಾಗಿವೆ.

Share This Article
Leave a Comment

Leave a Reply

Your email address will not be published. Required fields are marked *