ಸರ್ಕಾರದಿಂದ ಹಾಸನ ಜಿಲ್ಲೆ ಸಂಪೂರ್ಣ ಕಡೆಗಣನೆ – ರೇವಣ್ಣ ಕಿಡಿ

Public TV
2 Min Read

ಹಾಸನ: ನಾವು ಈ ಸರ್ಕಾರದ ಅಭಿವೃದ್ಧಿ ಕೆಲಸಗಳಿಗೆ ಬೆಂಬಲ ನೀಡುತ್ತೇವೆ. ಆದರೆ ದ್ವೇಷದ ರಾಜಕಾರಣ ಮಾಡಿದರೆ ಅದಕ್ಕೆ ತಕ್ಕ ಉತ್ತರ ನೀಡೋದು ನಮಗೂ ಗೊತ್ತಿದೆ ಎಂದು ಮಾಜಿ ಸಚಿವ ಜೆಡಿಎಸ್ ನಾಯಕ ಹೆಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹದಿಂದ ಅಪಾರ ಬೆಳೆಹಾನಿಯಾಗಿದೆ. ಒಟ್ಟಾರೆಯಾಗಿ ನಮ್ಮ ಜಿಲ್ಲೆಯಲ್ಲಿ 590 ಕೋಟಿ ನಷ್ಟವಾಗಿದೆ. ಪ್ರವಾಹ ಬಂದು 20 ದಿನಗಳು ಕಳೆದರೂ ಪರಿಹಾರ ಸರಿಯಾಗಿ ಬಂದಿಲ್ಲ. ಈ ರಾಜ್ಯದಲ್ಲಿ ಈ ಹಾಸನ ಜಿಲ್ಲೆಯನ್ನ ಸಂಪೂರ್ಣ ಕಡೆಗಣಿಸಲಾಗಿದೆ ಎಂದು ರಾಜ್ಯ ಸರ್ಕಾರ ಮೇಲೆ ಗುಡುಗಿದರು.

ನಾವು ಈ ಸರ್ಕಾರದ ಅಭಿವೃದ್ಧಿ ಕೆಲಸಗಳಿಗೆ ಬೆಂಬಲ ನೀಡುತ್ತೇವೆ. ಆದರೆ ದ್ವೇಷದ ರಾಜಕಾರಣ ಮಾಡಿದರೆ ಅದಕ್ಕೆ ತಕ್ಕ ಉತ್ತರ ನೀಡುವುದು ನಮಗೂ ಗೊತ್ತಿದೆ. ಮುಖ್ಯ ಮಂತ್ರಿಗಳಿಗೆ ಸಮಯಾವಕಾಶ ಕೊಡೋಣ, ಅವರೂ ಪಾಪ ಕ್ಯಾಬಿನೆಟ್ ರಚನೆ ಮಾಡೋದರಲ್ಲಿ ಬ್ಯುಸಿ ಇದ್ದಾರೆ ಎಂದು ಸುಮ್ಮನಿದ್ದೆ. ಆದರೆ ಈಗ ಪ್ರವಾಹದಿಂದ ಬೀದಿ ಪಾಲಾದ ಕುಟುಂಬದ ಸಮಸ್ಯೆಗಳನ್ನು ಪರಿಹರಿಸಲಿ. ಆಮೇಲೆ ಬೇಕಾದರೆ ಇತರೆ ಕೆಲಸಮಾಡಲಿ. ಸರ್ಕಾರ ಟೇಕ್ ಆಫ್ ಆಗಿದ್ಯಾ ಆಫ್ ಸೈಕಲ್ ಅಗಿದ್ಯಾ ಅದೆಲ್ಲ ನನಗೆ ಗೊತ್ತಿಲ್ಲ ಎಂದು ಹೇಳಿದರು.

ನಮ್ಮ ಜಿಲ್ಲೆಯಲ್ಲಿ 590 ಕೋಟಿ ನಷ್ಟ ಆಗಿದೆ. ರಸ್ತೆಗಳು, ಕಟ್ಟಡಗಳು ಮತ್ತು ಕೃಷಿಕರ ಭೂಮಿ ಸೇರಿ ಅಪಾರ ನಷ್ಟವಾಗಿದೆ. 8000 ಎಕ್ರೆ ತೋಟಗಾರಿಕೆಯ ಪ್ರದೇಶ ಹಾಳಾಗಿ ಒಟ್ಟು 190 ಕೋಟಿ ನಷ್ಟವಾಗಿದೆ. ಆದರೆ ಎನ್‍ಡಿಆರ್‍ಎಫ್ ಪ್ರಕಾರ ಕೇವಲ ಒಂಬತ್ತು ಕೋಟಿ ಅಂತಾರೆ. ಒಟ್ಟಾರೆ ಜಿಲ್ಲೆಯ ಇಪ್ಪತ್ತೈದು ಸಾವಿರ ಎಕ್ರೆ ಪ್ರದೇಶದಲ್ಲಿ ನಷ್ಟವಾಗಿದೆ. ಅದನ್ನು ಪರಿಶೀಲಿಸಿ ರೈತರ ಹಿತದೃಷ್ಟಿಯಿಂದ ಕ್ರಮಕೈಗೊಳ್ಳಿ ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.

ಕೆಲವರು ಕುಮಾರಸ್ವಾಮಿ ಮತ್ತು ದೇವೇಗೌಡರು ಜಿಲ್ಲೆಗೆ ಏನೂ ಮಾಡಿದ್ದಾರೆ ಎಂದು ಕೇಳುತ್ತಾರೆ. ಅವರಿಗೆ ಗೊತ್ತಿಲ್ಲ ಈ ಹಿಂದೆ ನಮ್ಮ ಜಿಲ್ಲೆಯನ್ನು 10 ವರ್ಷಗಳ ಕಾಲ ಕಡೆಗಣಿಸಲಾಗಿತ್ತು ಕೇವಲ ತೋಟಗಾರಿಕೆಗೆ ಸಂಬಂಧ ಪಟ್ಟ ಹಣವನ್ನು ನಮ್ಮ ಜಿಲ್ಲೆಗೆ ನೀಡಿರಲಿಲ್ಲ. ಕುಮಾರಸ್ವಾಮಿ ಸಿಎಂ ಆದ ನಂತರ 22 ಲಕ್ಷ ನಾಶವಾದ ತೆಂಗಿನ ಬೆಳೆಗೆ 200 ಕೋಟಿ ಪರಿಹಾರ ಕೊಟ್ಟಿದ್ದರು. ಹತ್ತು ವರ್ಷ ನಮ್ಮ ಜಿಲ್ಲೆಯಲ್ಲಿ ಏನೇ ಆದರೂ ರೈತರ ಯಾವ ಸಮಸ್ಯೆಗಳಿಗೂ ಪರಿಹಾರ ನೀಡಲಿಲ್ಲ. ಪರಿಹಾರ ನೀಡಲು ಕುಮಾರಸ್ವಾಮಿ ಸರ್ಕಾರ ಬರಬೇಕಾಯಿತು. ನಮ್ಮ ಸರ್ಕಾರ ಇದ್ದಾಗ ಮಾಡಿದ್ದನ್ನು ಮುಂದಿನ ದಿನಗಳಲ್ಲಿ ಎಳೆ ಎಳೆಯಾಗಿ ವಿವರಿಸುತ್ತೇನೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *