ಅನರ್ಹ ಶಾಸಕ ಸುಧಾಕರಿಂದಲೂ ಮಹಿಳೆಯರಿಗೆ ಸೀರೆ, ಕುಂಕುಮ, ಬಳೆ ವಿತರಣೆ

Public TV
2 Min Read

ಚಿಕ್ಕಬಳ್ಳಾಪುರ: ಅನರ್ಹ ಶಾಸಕ ಡಾ.ಸುಧಾಕರ್ ಉಪಚುನಾವಣೆಗೆ ಈಗಿನಿಂದಲೇ ತಾಲೀಮು ನಡೆಸುತ್ತಿದ್ದು, ಗೌರಿ ಹಬ್ಬದ ಅಂಗವಾಗಿ ಮಹಿಳೆಯರಿಗೆ ಸೀರೆ, ಅರಿಶಿಣ, ಕುಂಕುಮ, ಬಳೆಗಳನ್ನು ವಿತರಿಸಿದ್ದಾರೆ.

ಇತ್ತೀಚೆಗೆ ಅನರ್ಹ ಶಾಸಕ ಭೈರತಿ ಬಸವರಾಜ್ ಸೀರೆಗಳನ್ನು ಹಂಚಿ ಸುದ್ದಿಯಾಗಿದ್ದರು. ಇದೀಗ ಚಿಕ್ಕಬಳ್ಳಾಪುರದ ಅನರ್ಹ ಶಾಸಕ ಡಾ.ಸುಧಾಕರ್ ಮಹಿಳೆಯರಿಗೆ ಸೀರೆ, ಅರಿಶಿಣ, ಕುಂಕುಮ ಹಾಗೂ ಬಳೆಗಳನ್ನು ವಿತರಿಸಿದ್ದಾರೆ.

ಡಿಸಿಸಿ ಬ್ಯಾಂಕ್ ವತಿಯಿಂದ ಮಹಿಳಾ ಸ್ವಸಹಾಯ ಸಂಘಗಗಳಿಗೆ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ, ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಹಿಳೆಯರಿಗೆ ಸೀರೆ, ಅರಿಶಿಣ, ಕುಂಕುಮ ಹಾಗೂ ಬಳೆ ವಿತರಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಸುಧಾಕರ್, ನನ್ನ ಅಕ್ಕ-ತಂಗಿಯರಿಗೆ ನಾನು ಸೀರೆ ಕೊಟ್ಟರೆ ಇವರಿಗೇನು ಸಮಸ್ಯೆ, ಮಹಿಳೆಯರಿಗೆ ಹಲವು ವರ್ಷಗಳಿಂದ ಸೀರೆ ವಿತರಣೆ ಮಾಡುತ್ತಿದ್ದೇನೆ. ಆಗಿನಿಂದಲೂ ವಿರೋಧಿಗಳು ಟೀಕೆ ಮಾಡುತ್ತಿದ್ದಾರೆ ಇದು ಹೊಸತೇನಲ್ಲ. ಅವರ ಹೆಂಡತಿ ಮಕ್ಕಳಿಗಾದರೂ ಸೀರೆ ಕೊಡಸಿಲಿಕ್ಕೆ ಹೇಳಿ. ಕೊಡಿಸುತ್ತಾರೋ ಇಲ್ಲವೋ ಗೊತ್ತಿಲ್ಲ ಎಂದು ಸೀರೆ ವಿತರಣೆಗೆ ಮಾಡಿದ್ದಕ್ಕೆ ಟೀಕೆ ಮಾಡಿದ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.

ಕ್ಷೇತ್ರದ ಅಭಿವೃದ್ಧಿಗಾಗಿ ಮೈತ್ರಿ ಸರ್ಕಾರದಲ್ಲಿದ್ದಾಗ ರಾಜೀನಾಮೆ ತೀರ್ಮಾನ ಕೈಗೊಂಡಿದ್ದೇನೆ. ಅನೈತಿಕ ರಮೇಶ್ ಕುಮಾರ್ ಕೆಟ್ಟ ನಿರ್ಣಯ ಕೊಟ್ಟಿದ್ದಾರೆ. ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಕಾನೂನು ಹೋರಾಟದಲ್ಲಿ ಗೆಲುವು ಸಿಗಲಿದೆ. ಸುಧಾಕರ್ ಡಿಕ್ಷನರಿಯಲ್ಲಿ ಭಯ ಎನ್ನುವ ಪದವೇ ಇಲ್ಲ. ಬಿಜೆಪಿಗೆ ಹೋಗಲು ನಾನೊಬ್ಬನೇ ಸ್ವತಂತ್ರನಲ್ಲ. ಕ್ಷೇತ್ರದ ಜನ ಮುಖಂಡರು ನಾಯಕರ ಅಭಿಪ್ರಾಯ ಪಡೆದು ಮುಂದಿನ ದಾರಿ ಕಂಡುಕೊಳ್ಳುತ್ತೇನೆ ಎಂದು ತಿಳಿಸಿದರು.

ಎರಡನೇ ಬಾರಿ ಅತಿ ಹೆಚ್ಚು ಮತಗಳಿಂದ ನನ್ನ ಗೆಲ್ಲಿಸಿದ್ದೀರಿ, ದುರದೃಷ್ಟ ಸಮ್ಮಿಶ್ರ ಸರ್ಕಾರ ರಚನೆಯಾಯಿತು. ಜಿಲ್ಲೆಗೆ ವೈದ್ಯಕೀಯ ಕಾಲೇಜು ತರುತ್ತೇನೆ ಎಂದು ಮಾತು ಕೊಟ್ಟಿದ್ದೆ. ಆದರೆ, ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಭಿವೃದ್ಧಿ ಕೆಲಸ ಮಾಡಲಾಗಲಿಲ್ಲ, ಸಮ್ಮಿಶ್ರ ಸರ್ಕಾರದಲ್ಲಿ 14 ತಿಂಗಳು ಆತಂಕ ಅವಮಾನವನ್ನು ಎದುರಿಸಿದ್ದೇನೆ. ಹೀಗಾಗಿ ನಾನು ಶಾಸಕನಾಗೋದು ಮುಖ್ಯ ಅಲ್ಲ ಎಂದು ತೀರ್ಮಾನ ಮಾಡಿದೆ. ಶಾಸಕನಲ್ಲದಿದ್ದರೂ ಪರವಾಗಿಲ್ಲ ಅಭಿವೃದ್ಧಿ ಮಾಡಬೇಕು ಎಂದು ರಾಜೀನಾಮೆ ನೀಡಿದೆ ಎಂದರು.

ನನ್ನ ರಾಜೀನಾಮೆ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಆದ್ರೆ ಆ ತೀರ್ಮಾನದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಾನು ತೆಗೆದುಕೊಂಡ ನಿರ್ಧಾರಗಳು ಜನಪರವಾದುದು. ಅಧಿಕಾರದ ವ್ಯಾಮೋಹ ನನಗಿಲ್ಲ. ಅಧಿಕಾರದ ವ್ಯಾಮೋಹ ಇದ್ದಿದ್ದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರಲಿಲ್ಲ ಎಂದು ಸುಧಾಕರ್ ಸ್ಪಷ್ಟಪಡಿಸಿದರು.

ಇತ್ತೀಚೆಗೆ ಕೆ.ಆರ್.ಪುರದ ಅನರ್ಹ ಶಾಸಕ ಭೈರತಿ ಬಸವರಾಜ್ ಗೌರಿ ಹಬ್ಬಕ್ಕೆ ಸೀರೆ, ಅರಿಶಿನ, ಕುಂಕುಮ ಹಂಚಿದ್ದರು. ಗೌರಿ ಗಣೇಶ ಹಬ್ಬದ ಗಿಫ್ಟ್ ನೀಡುವ ಮೂಲಕ ಮತದಾರರ ಮನವೊಲಿಸಲು ಭೈರತಿ ಮುಂದಾಗಿದ್ದರು. ಕೆ.ಆರ್.ಪುರ ಕ್ಷೇತ್ರದ ಬಸವನಪುರ ವಾರ್ಡ್‍ನಲ್ಲಿ ಅರಿಶಿನ ಕುಂಕುಮ ಬಳೆ ಸೀರೆ ಹಂಚುತ್ತಿರುವ ವಿಡಿಯೋ ವೈರಲ್ ಆಗಿತ್ತು. ಮುಂಬರುವ ಉಪ ಚುನಾವಣೆಗೆ ಈಗಲೇ ಸೀರೆ ಹಂಚುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

Share This Article
Leave a Comment

Leave a Reply

Your email address will not be published. Required fields are marked *