ಬೆಂಗಳೂರು: ಜಂತಕಲ್ ಎಂಟರ್ ಪ್ರೈಸಸ್ ಗಣಿ ಪರವಾನಿಗೆ ನವೀಕರಣ ಪ್ರಕರಣದಿಂದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದ ಕುಮಾರಸ್ವಾಮಿಯವರ ಹೆಸರನ್ನು ಎಸ್ಐಟಿ ಪ್ರಕರಣದಿಂದ ಕೈ ಬಿಟ್ಟು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿನೋದ್ ಘೋಯಲ್ ಹಾಗೂ ಗಗನ್ ಬಡೇರಿಯಾ ಮೇಲೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಕುಮಾರಸ್ವಾಮಿಯವರು ಸಿಎಂ ಆಗಿದ್ದಾಗ ವಿನೋದ್ ಘೋಯಲ್ಗೆ ಭೂಮಿ ಮಂಜೂರು ಮಾಡುವಂತೆ ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾಗೆ ಮೌಖಿಕವಾಗಿ ಆದೇಶಿಸಿದ್ದರಂತೆ. ಎಸ್ಐಟಿ ಅಧಿಕಾರಿಗಳು ಗಂಗಾರಾಮ್ ಬಡೇರಿಯಾ ಬಂಧಿಸಿದಾಗ ಈ ಹೇಳಿಕೆ ನೀಡಿದ್ದರು. ಕುಮಾರಸ್ವಾಮಿಯವರು ನನಗೆ ಹೇಳಿದ್ದಕ್ಕಾಗಿ ನಾನು ಭೂಮಿ ಮಂಜೂರು ಮಾಡಿದ್ದೆ ಎಂದಿದ್ದರು. ಬಡೇರಿಯಾ ಹೇಳಿಕೆ ಆಧರಿಸಿ ಕುಮಾರಸ್ವಾಮಿ ಅವರನ್ನು ಎಸ್ಐಟಿ ವಿಚಾರಣೆಗೆ ಒಳಪಡಿಸಿತ್ತು.
ನಿರೀಕ್ಷಣಾ ಜಾಮೀನು ಪಡೆದಿದ್ದ ಕುಮಾರಸ್ವಾಮಿಯವರು ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ಬಳಿಕ ಕುಮಾರಸ್ವಾಮಿ ಅವರ ಮೇಲೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ. ಇನ್ನು ವಿನೋದ್ ಘೋಯಲ್ ಮೂಲಕ ತನ್ನ ಮಗ ಗಗನ್ ಬಡೇರಿಯಾ ಅಕೌಂಟ್ಗೆ ಗಂಗಾರಾಮ್ ಹಣ ಹಾಕಿಸಿಕೊಂಡಿದ್ದರು ಎನ್ನಲಾಗಿದೆ. ಗಂಗಾರಾಮ್ ಐಎಎಸ್ ಅಧಿಕಾರಿ ಆದ್ದರಿಂದ ಸರ್ಕಾರದ ಅನುಮತಿ ಕೇಳಬೇಕು. ಹೀಗಾಗಿ ಗಂಗಾರಾಮ್ ಬಡೇರಿಯಾ ಮೇಲೆ ದೋಷಾರೋಪ ಪಟ್ಟಿ ಹಾಕಲು ಸರ್ಕಾರದ ಅನುಮತಿ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ವಿನೋದ್ ಘೋಯಲ್ ಮತ್ತು ಗಗನ್ ಬಡೇರಿಯಾ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಇದನ್ನೂ ಓದಿ: ಏನಿದು ಜಂತಕಲ್ ಮೈನಿಂಗ್ ಕೇಸ್? ಎಚ್ಡಿಕೆ ಮೇಲಿನ ಆರೋಪ ಏನು?
ಏನಿದು ಜಂತಕಲ್ ಮೈನಿಂಗ್ ಕೇಸ್?
ವಿನೋದ್ ಗೋಯಲ್ ಮಾಲೀಕತ್ವದ ಜಂತಕಲ್ ಮೈನಿಂಗ್ ಎಂಟರ್ ಪ್ರೈಸಸ್ ಕಂಪನಿಗೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹೀರೆಕಂದವಾಡಿ ಮತ್ತು ತನಿಗೇಹಳ್ಳಿಯಲ್ಲಿ ಅದಿರು ಸಾಗಿಸಲು ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಆಗಿನ ಸರ್ಕಾರ 2007ರಲ್ಲಿ ಅನುಮತಿ ನೀಡಿತ್ತು. ಕಪ್ಪು ಪಟ್ಟಿಯಲ್ಲಿದ್ದ ವಿನೋದ್ ಗೋಯಲ್ ಮಾಲೀಕತ್ವದ ಕಂಪನಿಗೆ ಅನುಮತಿ ನೀಡಿದ ಪರಿಣಾಮ ಪಾಕಿಸ್ತಾನಕ್ಕೆ ಅಕ್ರಮ ಅದಿರು ಸಾಗಾಟವಾಗಿದ್ದು, ರಾಜ್ಯದ ಬೊಕ್ಕಸಕ್ಕೆ 250 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಹಿಂದಿನ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ ವರದಿ ನೀಡಿದ್ದರು.