ಕಾಲುವೆಯಿಂದ ಬಾವಿಯೊಳಗೆ ಸೇರಿದ್ದ 7 ಅಡಿ ಉದ್ದದ ಮೊಸಳೆ ಸೆರೆ

Public TV
1 Min Read

ಬೆಳಗಾವಿ(ಚಿಕ್ಕೋಡಿ): ಕಾಲುವೆಯಿಂದ ಹೊರಬಂದು ಜಿಲ್ಲೆಯ ರಾಯಬಾಗ ಪಟ್ಟಣದ ಹೊರವಲಯದಲ್ಲಿನ ಬಾವಿಯೊಂದರಲ್ಲಿ 7 ಅಡಿ ಉದ್ದದ ಮೊಸಳೆ ಸೇರಿಕೊಂಡಿತ್ತು. ಇದನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ರಾಯಬಾಗ ಉಪ ಕಾಲುವೆಯ ನೀರಲ್ಲಿ ಬಂದ ಮೊಸಳೆ ಹೊರವಲಯದಲ್ಲಿದ್ದ 25 ಅಡಿ ಆಳದ ಬಾವಿಯನ್ನು ಸೇರಿಕೊಂಡಿತ್ತು. ಕಳೆದ 4 ದಿನಗಳಿಂದ ಇದೇ ಬಾವಿಯಲ್ಲಿ ಮೊಸಳೆ ಇರೋದನ್ನು ಕುರಿಗಾಹಿಗಳು ಗಮನಿಸಿ ಸ್ಥಳೀಯರಿಗೆ ತಿಳಿಸಿದ್ದರು. ಬಳಿಕ ಸ್ಥಳೀಯರು ಮೊಸಳೆ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಕೊಟ್ಟಿದ್ದರು. ಸ್ಥಳಕ್ಕೆ ಬಂದ ಸಿಬ್ಬಂದಿ ಜೊತೆಗೆ ಸ್ಥಳೀಯರು ಕೂಡ ಕೈಜೊಡಿಸಿ ಹರಸಾಹಸಪಟ್ಟು ಮೊಸಳೆಯನ್ನು ಸೆರೆ ಹಿಡಿದಿದ್ದಾರೆ.

ಈಗಾಗಲೇ ಬೇರೆ ಬೇರೆ ಕಡೆಯಲ್ಲಿ ಸಿಕ್ಕ ಮೊಸಳೆಗಳನ್ನು ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಮ್‍ನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬಿಟ್ಟು ಬಂದಿದ್ದಾರೆ. ಘಟಪ್ರಭಾ ನದಿಗೆ ಅಡ್ಡಲಾಗಿರುವ ಹಿಡಕಲ್ ಡ್ಯಾಮ್ ನಿರ್ಮಿಸಲಾಗಿದೆ. ಡ್ಯಾಮ್‍ನಲ್ಲಿ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಕಾಲುವೆಗಳಿಗೆ ನೀರನ್ನು ಹರಿಸಲಾಗಿತ್ತು. ಈ ವೇಳೆ ಮೊಸಳೆಗಳು ಕೂಡ ನೀರಿನಲ್ಲಿ ಹರಿದು ಬಂದು ಕಾಲುವೆ ಸೇರಿದ್ದವು. ಇದೀಗ ಕಾಲುವೆಯ ನೀರಿನಿಂದ ಹೊರಬರುತ್ತಿರುವ ಮೊಸಳೆಗಳು ಬೃಹತ್ ಬಾವಿ, ಕೆರೆ, ಹಳ್ಳ ಕೊಳ್ಳದಲ್ಲಿ ಸೇರುತ್ತಿವೆ.

ಹೀಗಾಗಿ ಜನರು ಆತಂಕಕ್ಕೊಳಗಾಗಿದ್ದಾರೆ. ಇಷ್ಟು ದಿನ ನದಿ ಹಾಗೂ ನದಿ ದಡದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಮೊಸಳೆಗಳು, ಇತ್ತೀಚಿನ ಪ್ರವಾಹದಿಂದ ಎಲ್ಲೆಡೆ ಪೊದೆ, ಕಂಟಿ, ಬಾವಿಯಲ್ಲಿ ಸೇರಿಕೊಂಡಿವೆ. ಆಹಾರ ಅರಸಿ ನದಿ ತೀರದ ಜಮೀನುಗಳಿಗೆ ನುಗ್ಗುತ್ತಿವೆ.

Share This Article
Leave a Comment

Leave a Reply

Your email address will not be published. Required fields are marked *