ಜಮ್ಮು ಕಾಶ್ಮೀರದ ಸೆಕ್ರೆಟರಿಯೇಟ್ ಕಟ್ಟಡದಲ್ಲಿ ತ್ರಿವರ್ಣ ಧ್ವಜ ಹಾರಾಟ

Public TV
1 Min Read

– ರಾಜ್ಯ ಧ್ವಜವನ್ನು ತೆಗೆದ ಸರ್ಕಾರ

ಶ್ರೀನಗರ: ಜಮ್ಮು ಕಾಶ್ಮೀರಕ್ಕೆ ನಿಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ ನಂತರ ಇದೀಗ ಬಾರೀ ಬೆಳವಣಿಗೆಯಾಗಿದೆ. ಜಮ್ಮು ಕಾಶ್ಮೀರದ ರಾಜ್ಯದ ಬಾವುಟವನ್ನು ಶ್ರೀನಗರದ ಸಿವಿಲ್ ಸೆಕ್ರೆಟರಿಯೇಟ್ ಕಟ್ಟಡದಿಂದ ತೆಗೆದು ಹಾಕಲಾಗಿದ್ದು, ಇದೀಗ ತ್ರಿವರ್ಣ ಧ್ವಜ ಮಾತ್ರ ಕಂಗೊಳಿಸುತ್ತಿದೆ.

ಸಂವಿಧಾನದ 370ನೇ ವಿಧಿ ರದ್ದು ಪಡಿಸಿದ ಮಹತ್ವದ ನಿರ್ಧಾರದ ನಂತರ ಸಿವಿಲ್ ಸೆಕ್ರೆಟರಿಯೇಟ್ ಕಟ್ಟಡದ ಮೇಲೆ ಇದೀಗ ರಾಷ್ಟ್ರಧ್ವಜ ಮಾತ್ರ ಉಳಿದಿದೆ. ಈ ಮೂಲಕ ರಾಜ್ಯಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ತೆಗೆದು ಹಾಕಿದ ಸೂಚನೆಯನ್ನು ನೀಡಲಾಗಿದೆ.

ಜಮ್ಮು ಕಾಶ್ಮೀರ ಸರ್ಕಾರದ ಮೂಲಗಳು ಈ ಕುರಿತು ಖಚಿತಪಡಿಸಿದ್ದು, ರಾಜ್ಯಾದ್ಯಂತ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಇನ್ನು ಮುಂದೆ ರಾಷ್ಟ್ರಧ್ವಜ ಮಾತ್ರ ಹಾರಾಡಲಿದೆ ಎಂದು ತಿಳಿಸಿದೆ.

ಆದರೆ, ಎಲ್ಲ ಸರ್ಕಾರಿ ಕಚೇರಿಗಳು ಇನ್ನೂ ಜಮ್ಮು ಕಾಶ್ಮೀರದ ರಾಜ್ಯ ಧ್ವಜವನ್ನು ತೆಗೆದಿಲ್ಲ. ಕಳೆದ ವಾರದವರೆಗೆ ಸಿವಿಲ್ ಸೆಕ್ರಟರಿಯೇಟ್ ಕಟ್ಟಡದಲ್ಲಿ ಎರಡೂ ಧ್ವಜಗಳಿದ್ದವು. ಇದೀಗ ರಾಜ್ಯ ಧ್ವಜವನ್ನು ತೆಗೆದು ಹಾಕಲಾಗಿದೆ. ಧ್ವಜವನ್ನು ತೆಗೆಯುವುದು 370ನೇ ವಿಧಿ ರದ್ದುಗೊಳಿಸಿರುವುದರ ಮುಂದುವರಿದ ಭಾಗವಾಗಿದೆ. ಅಲ್ಲದೆ, ಅಕ್ಟೋಬರ್ 31ರ ವರೆಗೆ ಅಧಿಕೃತ ವಿಭಜನೆ ಮೇಲೆ ಅವಲಂಬಿತವಾಗಿಲ್ಲ ಎಂದು ಜಮ್ಮು ಕಾಶ್ಮೀರ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಆಗಸ್ಟ್ 5 ರಂದು ಗೃಹ ಸಚಿವ ಅಮಿತ್ ಶಾ ಅವರು ಐತಿಹಾಸಿಕ ಘೋಷಣೆಯನ್ನು ಮಾಡಿದ್ದು, ರಾಜ್ಯ ಸಭೆಯಲ್ಲಿ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಲಾಗಿದೆ. ಈ ಮೂಲಕ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದಾಗಿದೆ ಎಂದು ತಿಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *