ಮನ್ಸೂರ್ ಖಾನ್ ಪೊಲೀಸ್ ಕಸ್ಟಡಿ ಅಂತ್ಯ- ಎಸ್‍ಐಟಿಗೆ ಸಿಕ್ಕಿಲ್ಲ ಪೂರ್ಣ ಮಾಹಿತಿ

Public TV
1 Min Read

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಮನ್ಸೂರ್ ಖಾನ್ ಪೊಲೀಸ್ ಕಸ್ಟಡಿ ಇಂದಿಗೆ ಅಂತ್ಯವಾಗಲಿದೆ.

ಸತತ 14 ದಿನಗಳ ಕಾಲ ಮನ್ಸೂರ್ ಖಾನ್ ವಿಚಾರಣೆ ನಡೆಸಿದರೂ ಇನ್ನಷ್ಟು ಮಾಹಿತಿಗಳು ಹೊರಬರಬೇಕಿದೆ. ಶಿವಾಜಿನಗರ ಅನರ್ಹ ಶಾಸಕ ರೋಷನ್ ಬೇಗ್‍ಗೆ 400 ಕೋಟಿ ಕೊಟ್ಟಿರೋದು ಸತ್ಯ ಎಂದು ಎಸ್‍ಐಟಿ ಪೊಲೀಸರ ಬಳಿ ಮನ್ಸೂರ್ ಹೇಳಿಕೊಂಡಿದ್ದಾನೆ.

ಆದರೆ ಅನಾರೋಗ್ಯದ ನೆಪವೊಡ್ಡಿ ರೋಷನ್‍ಬೇಗ್ ಅವರು ಮಾತ್ರ ವಿಚಾರಣೆಗೆ ಹಾಜರಾಗುತ್ತಿಲ್ಲ. ಹೇಗಾದರೂ ಮಾಡಿ ರೋಷನ್ ಬೇಗ್ ಅವರನ್ನು ವಿಚಾರಣೆಗೆ ಕರೆಸಿ, ಮನ್ಸೂರ್ ಖಾನ್ ಎದುರು ಕೂರಿಸಿ ವಿಚಾರಣೆ ಮಾಡೊ ಪ್ಲಾನ್‍ನಲ್ಲಿ ಎಸ್‍ಐಟಿ ಅಧಿಕಾರಿಗಳು ಇದ್ದಾರೆ.

ರಾಜ್ಯವಲ್ಲದೇ ದೇಶದ ನಾನಾ ಭಾಗಗಳಲ್ಲಿ ಆಸ್ತಿ ಹೊಂದಿರೋದಾಗಿ ಮನ್ಸೂರ್ ಖಾನ್ ಹೇಳಿದ್ದಾನೆ. ಎಸ್‍ಐಟಿ ಅಧಿಕಾರಿಗಳು ಹೊರ ರಾಜ್ಯಗಳಲ್ಲಿನ ಆಸ್ತಿ ಪತ್ತೆ ಹಚ್ಚಲು ತೆರಳಿದ್ದಾರೆ. ಹೀಗಾಗಿ ವಿಚಾರಣೆ ಇನ್ನೂ ಮುಗಿಯದ ಹಿನ್ನೆಲೆಯಲ್ಲಿ ಮತ್ತೆ ಪೊಲೀಸ್ ಕಸ್ಟಡಿಗೆ ಕೇಳುವ ಸಾಧ್ಯತೆಯಿದೆ.

ಮನ್ಸೂರ್ ಸಿಕ್ಕಿಬಿದ್ದಿದ್ದು ಹೇಗೆ?
ಸುಮಾರು 60 ಸಾವಿರ ಮಂದಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಜೂನ್ 8 ರಂದು ರಾತ್ರೋರಾತ್ರಿ ದುಬೈಗೆ ಎಸ್ಕೇಪ್ ಆಗಿದ್ದನು. ವಿಷಯ ತಿಳಿದ ಹೂಡಿಕೆದಾರರು ಎಸ್‍ಐಟಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ಆ ಬಳಿಕ ವಿಡಿಯೋ ಬಿಡುಗಡೆ ಮಾಡಿ ಗ್ರಾಹಕರ ಹಣ ಹಿಂದಿರುಗಿಸುವುದಾಗಿ ಹೇಳಿದ್ದನು.

ನಂತರ ಅನಾರೋಗ್ಯದ ಕಾರಣ ನೀಡಿ ಭಾರತಕ್ಕೆ ಮರಳುತ್ತಿದ್ದೇನೆ ತಮಗೆ ಜೀವ ಭಯ ಇದ್ದು, ಪೊಲೀಸರು ರಕ್ಷಣೆ ಕೊಡಬೇಕು ಎಂದು ಕೋರಿ ಮತ್ತೊಂದು ವಿಡಿಯೋ ಒಂದನ್ನು ರಿಲೀಸ್ ಮಾಡಿದ್ದನು. ಆದರೆ ವಿಡಿಯೋ ಬಿಡುಗಡೆ ಮಾಡಿದ 24 ಗಂಟೆಗಳಲ್ಲಿ ಮನ್ಸೂರ್ ವಾಪಸ್ ಬರಲಿಲ್ಲ. ಹೀಗಾಗಿ ಜುಲೈ 9ರಂದು ಮಧ್ಯರಾತ್ರಿ 1.30ರ ಸುಮಾರಿಗೆ ದುಬೈನಿಂದ ದೆಹಲಿಗೆ ಬಂದಿಳಿದ ಮನ್ಸೂರ್ ಖಾನ್‍ನನ್ನು ಎಸ್‍ಐಟಿ (ವಿಶೇಷ ತನಿಖಾ ತಂಡ) ಪೊಲೀಸರು ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲೇ ಬಂಧಿಸಿ. ನಂತರ ಆತನನ್ನು ಬೆಂಗಳೂರಿಗೆ ಕರೆತರಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *