ನಾನು ಏನೂ ಹೇಳಿಲ್ಲ – ಅಂತೆ ಕಂತೆ ಸುದ್ದಿಗಳಿಗೆ ಬ್ರೇಕ್ ಹಾಕಿದ ಗೇಲ್

Public TV
2 Min Read

ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳುತ್ತಾರೆ ಎನ್ನುವ ಸುದ್ದಿಗೆ ಬ್ರೇಕ್ ಬಿದ್ದಿದೆ.

ಭಾರತದ ವಿರುದ್ಧ ಬುಧವಾರ ಮೂರನೇ ಏಕದಿನ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಕ್ರಿಸ್ ಗೇಲ್ ಕೇವಲ 41 ಎಸೆತಗಳಲ್ಲಿ 8 ಬೌಂಡರಿ ಹಾಗೂ 5 ಸಿಕ್ಸರ್ ಸಿಡಿಸಿ 72 ರನ್ ಗಳಿಸಿದ್ದರು. ಆದರೆ ಖಲೀಲ್ ಅಹ್ಮದ್ ಬೌಲಿಂಗ್‍ನಲ್ಲಿ ವಿಕೆಟ್ ಒಪ್ಪಿಸಿದ ಗೇಲ್ ಅವರು ಬ್ಯಾಟ್‍ಗೆ ಹೆಲ್ಮೆಟ್ ಹಾಕಿಕೊಂಡು ಮೈದಾನದಿಂದ ಹೊರ ನಡೆದರು. ಈ ವೇಳೆ ಟೀಂ ಇಂಡಿಯಾ ಆಟಗಾರರು ವಿಕೆಟ್ ಪಡೆದ ಖುಷಿಯಲ್ಲಿ ಸಂಭ್ರಮಿಸುವ ಬದಲು, ಗೇಲ್‍ಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸಿದ್ದರು.

ಕ್ರಿಸ್ ಗೇಲ್ ಭಾರತ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 301 ನಂಬರ್ ಜೆರ್ಸಿ ಧರಿಸಿ ಆಡಿದ್ದರು. ಹೀಗಾಗಿ ಗೇಲ್ ಅವರು ಈ ಪಂದ್ಯದ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳುತ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಗೇಲ್ ವಿದಾಯವನ್ನು ತಳ್ಳಿ ಹಾಕಿದ್ದಾರೆ.

ವಿದಾಯದ ಕುರಿತು ನಾನು ಯಾವುದೇ ರೀತಿಯ ಪ್ರಕಟಣೆ ಹೊರಡಿಸಿಲ್ಲ. ಪ್ರಕಟಣೆ ಹೊರಡಿಸುವವರೆಗೂ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಮುಂದುವರಿಯುತ್ತೇನೆ ಎಂದು ಕ್ರಿಸ್ ಗೇಲ್ ಸ್ಪಷ್ಟನೆ ನೀಡಿದ್ದಾರೆ. ಗೇಲ್ ಸ್ಪಷ್ಟನೆಯ ವಿಡಿಯೋವನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ.

ವಿಂಡೀಸ್ ಪರ ಏಕದಿನ ಕ್ರಿಕೆಟ್‍ನಲ್ಲಿ ಗರಿಷ್ಠ ರನ್ ಗಳಿಸಿದ್ದ ಬ್ರಿಯನ್ ಲಾರಾ ದಾಖಲೆಯನ್ನು ಇತ್ತೀಚೆಗಷ್ಟೆ ಗೇಲ್ ಮುರಿದಿದ್ದರು. ಲಾರಾ 299 ಇನ್ನಿಂಗ್ಸ್ ಗಳಲ್ಲಿ 10,348 ರನ್ ಬಾರಿಸಿದ್ದರು. ಸದ್ಯ ಗೇಲ್ ಎರಡನೇ ಏಕದಿನ ಪಂದ್ಯದಲ್ಲಿ 7 ರನ್ ಗಳಿಸುತ್ತಿದ್ದಂತೆ ವಿಂಡೀಸ್ ಪರ ಗರಿಷ್ಠ ರನ್ ಕಲೆಹಾಕಿದ ಸಾಧನೆ ಮಾಡಿದ್ದರು. ಅಷ್ಟೇ ಅಲ್ಲದೆ ಗೇಲ್ ವಿಂಡೀಸ್ ಪರ 300 ಏಕದಿನ ಪಂದ್ಯಗಳನ್ನು ಆಡಿದ ಮೊದಲ ಬ್ಯಾಟ್ಸ್ ಮನ್ ಆಗಿದ್ದಾರೆ.

ಕ್ರಿಸ್ ಗೇಲ್ ಈವರೆಗೆ ಒಟ್ಟು 301 ಏಕದಿನ ಪಂದ್ಯಗಳನ್ನು ಆಡಿದ್ದು, 10,480 ರನ್ ಕಲೆಹಾಕಿದ್ದಾರೆ. ಇದರಲ್ಲಿ 54 ಅರ್ಧಶತಕ ಹಾಗೂ 25 ಶತಕ ಸೇರಿವೆ. 215 ಗ್ರೆಲ್ ಅವರ ಗರಿಷ್ಠ ಮೊತ್ತವಾಗಿದೆ. ಟೆಸ್ಟ್ ನಲ್ಲಿ 182 ಇನ್ನಿಂಗ್ಸ್ ಆಡಿದ್ದು 7,214 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 37 ಅರ್ಧಶತಕ ಹಾಗೂ 15 ಅರ್ಧಶತಕ ಸೇರಿವೆ. ಟೆಸ್ಟ್ ನಲ್ಲಿ ಗೇಲ್ ಅವರು ಗಳಿಸಿದ ಗರಿಷ್ಠ ಸ್ಕೋರ್ 333 ಆಗಿವೆ.

 

Share This Article
Leave a Comment

Leave a Reply

Your email address will not be published. Required fields are marked *