ಮಾಣಿಕ್ ಷಾ ಮೈದಾನದಲ್ಲಿ ಸೆಲ್ಫಿ, ಕಪ್ಪು ಬಟ್ಟೆಗೆ ನೋ ಎಂಟ್ರಿ

Public TV
2 Min Read

ಬೆಂಗಳೂರು: ಆಗಸ್ಟ್ 15ರಂದು 73 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತದೆ. ಮೈದಾನದಲ್ಲಿ ಶಾಮಿಯಾನ, ವೇದಿಕೆ ನಿರ್ಮಾಣ, ಬ್ಯಾರಿಕೇಡ್ ಮತ್ತು ಆಸನಗಳ ವ್ಯವಸ್ಥೆಯಾಗಿದೆ. ಹಾಗೆಯೇ ಈ ಬಾರಿ ಹೊಸ ನಿಯಮಗಳನ್ನು ಕೂಡ ಮಾಡಲಾಗಿದ್ದು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾಗುವವರು ಇದನ್ನೂ ಪಾಲಿಸಬೇಕಿದೆ.

ಈ ಬಗ್ಗೆ ಬಿಬಿಎಂಪಿ ಕಮೀಷನರ್, ಬೆಂಗಳೂರು ನಗರ ಪೊಲೀಸ್ ಆಯುಕ್ತರು ಜಂಟಿ ಸುದ್ದಿಗೋಷ್ಠಿ ನಡೆಸಿ ಆ.15ರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಆ.15ರಂದು ಮುಖ್ಯಮಂತ್ರಿಗಳು ಬೆಳಿಗ್ಗೆ 8.58ಕ್ಕೆ ಮೈದಾನ ಪ್ರವೇಶಿಸಲಿದ್ದು, 9 ಗಂಟೆ ಸರಿಯಾಗಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಆಗ ಪುಷ್ಪವೃಷ್ಠಿ ಮಾಡಿ 3 ಸೇನಾದಳದಿಂದ ಗೌರವ ಸ್ವೀಕರಿಸಲಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದರು.

ಇಂದು ಬೆಂಗಳೂರು ಪೊಲೀಸ್ ಕಮೀಷನರ್ ಹಾಗೂ ಬಿಬಿಎಂಪಿ ಕಮೀಷನರ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ತಾಲೀಮು ನಡೆಸಿದರು. ಈ ವೇಳೆ ಪರೇಡ್ ಮಾಡುವ ತಂಡಗಳು ಶಿಸ್ತು ಕಾಯ್ದುಕೊಳ್ಳುವಂತೆ ಪೊಲೀಸ್ ಕಮೀಷನರ್ ಕ್ಲಾಸ್ ತೆಗೆದುಕೊಂಡರು. ಸ್ವಾತಂತ್ರ್ಯ ದಿನಾಚರಣೆ ವೇಳೆ ಪಥಸಂಚಲದಲ್ಲಿ  ಕೆಎಸ್‌ಆರ್‌ಪಿ, ಸ್ಕೌಟ್ಸ್, ಗೈಡ್ಸ್, ಎನ್‍ಸಿಸಿ, ಸೇವಾದಳ ಹಾಗೂ ಶಾಲಾ ಮಕ್ಕಳನ್ನು ಒಳಗೊಂಡ ಕವಾಯತು ಮತ್ತು ಬ್ಯಾಂಡಿನ 34 ತುಕಡಿಗಳಲ್ಲಿ ಸುಮಾರು 1130 ಮಂದಿ ಭಾಗವಹಿಸಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 1250 ಶಾಲಾ ಮಕ್ಕಳು ಭಾಗಿಯಾಗಲಿದ್ದು, ನಾಡಗೀತೆ, ರೈತ ಗೀತೆ, ಭಾರತಾಂಬೆಯ ಮಡಿಲಿನ ಮಕ್ಕಳು, ಜಲಿಯನ್ ವಾಲಾಬಾಗ್ ಹತ್ಯಾಕಾಂಡ 1919, ಜಿಮ್ನಾಸ್ಟಿಕ್ಸ್, ಕಳರಿಪಯಟ್ಟು ಕಾರ್ಯಕ್ರಮ ಪ್ರದರ್ಶನ ನೀಡಲಿದ್ದಾರೆ. ಜೊತೆಗೆ ಈ ಬಾರಿ ಹೊಸ ನಿಯಮಗಳನ್ನು ಕೂಡ ಮಾಡಲಾಗಿದೆ.

ಏನಿದು ನಿಯಮ?
– ಮೈದಾನದ ಒಳಗಡೆ ಸೆಲ್ಫಿ ತೆಗೆಯಲು ಅವಕಾಶ ಇಲ್ಲ
– ಕಪ್ಪು ಬಟ್ಟೆ ಹಾಕಿದ್ರೆ ನೋ ಎಂಟ್ರಿ
– 1 ಗಂಟೆ ಮುಂಚಿತವಾಗಿ ಕಾರ್ಯಕ್ರಮಕ್ಕೆ ಆಗಮಿಸಬೇಕು
– ಗುರುತಿನ ಚೀಟಿ ಇದ್ರೆ ಮಾತ್ರ ಪ್ರವೇಶ
– ಶೌಚಾಲಯ, ನೀರಿನ ವ್ಯವಸ್ಥೆ ಇದೆ
– ಅನಗತ್ಯ ಲಗೇಜ್ ತರುವಂತಿಲ್ಲ
– ಸಿಗರೇಟ್, ಬೆಂಕಿ ಪೆಟ್ಟಿಗೆ, ಕರಪತ್ರಗಳು, ಬಣ್ಣದ ದ್ರಾವಣ, ವಿಡಿಯೋ ಮತ್ತು ಸ್ಡಿಲ್ ಕ್ಯಾಮರಾ, ನೀರಿನ ಬಾಟಲ್, ಕ್ಯಾನ್, ಶಸ್ತ್ರಾಸ್ತ್ರ, ಹರಿತವಾದ ವಸ್ತು, ಚಾಕು – ಚೂರಿ, ಕಪ್ಪು ಕರವಸ್ತ್ರಗಳು, ತಿಂಡಿ, ಮದ್ಯದ ಬಾಟಲ್, ಮಾದಕ ವಸ್ತುಗಳು, ಬಾವುಟ, ಪಟಾಕಿ ಮತ್ತು ಸ್ಫೋಟಕ ವಸ್ತುಗಳು ತರುವಂತಿಲ್ಲ.

ಮೈದಾನದಲ್ಲಿ 13,200 ಆಸನಗಳ ವ್ಯವಸ್ಥೆಯಿದ್ದು, ಇಡೀ ಕಾರ್ಯಕ್ರಮ ಮುಗಿಯುವವರೆಗೂ ಕಬ್ಬನ್ ರಸ್ತೆ ವಾಹನ ಸಂಚಾರ ಸ್ಥಗಿತಗೊಳ್ಳಲಿದೆ. ಅಲ್ಲದೆ ಮೈದಾನದ ಸುತ್ತ ಪೊಲೀಸರ ಸರ್ಪಗಾವಲಿನ ಜೊತೆಗೆ 50 ಸಿಸಿಟಿವಿ ಅಳವಡಿಕೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *